ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹2000 ನೋಟು ಸ್ವೀಕರಿಸಲು ಪೆಟ್ರೋಲ್ ಬಂಕ್‌ಗಳು ಹಿಂದೇಟು

ನಗರದ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರ ಜೊತೆ ಕ್ಯಾಷಿಯರ್‌ಗಳ ವಾಗ್ವಾದ
Published 2 ಜೂನ್ 2023, 16:23 IST
Last Updated 2 ಜೂನ್ 2023, 16:23 IST
ಅಕ್ಷರ ಗಾತ್ರ

ದಾವಣಗೆರೆ: ಪೆಟ್ರೋಲ್ ಬಂಕ್ ಹಾಗೂ ಬಾರ್ ಅಂಡ್ ರೆಸ್ಟೋರಂಟ್‌ಗಳಲ್ಲಿ ₹2,000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೇ 19ರಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆದಿದ್ದು, ಈ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮೆ ಅಥವಾ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್‌ 30ರವರೆಗೂ ಕಾಲವಕಾಶ ನೀಡಿದೆ. 

ರಿಸರ್ವ್ ಬ್ಯಾಂಕ್ ಆದೇಶ ಹೊರಬೀಳುತ್ತಿದ್ದಂತೆಯೇ ಆರಂಭದಲ್ಲಿ ಗ್ರಾಹಕರು ₹ 2000 ನೋಟನ್ನು ತೆಗೆದುಕೊಂಡು ಬಂದು ಪೆಟ್ರೋಲ್ ಬಂಕ್‌ಗಳಲ್ಲಿ ₹ 200– ₹300ಕ್ಕೆ ಪೆಟ್ರೋಲ್ ಹಾಕಿಸಿಕೊಂಡು ಉಳಿದ ಹಣವನ್ನು ವಾಪಸ್ ಪಡೆದು ಹೋಗುತ್ತಿದ್ದರು. ಆರಂಭದಲ್ಲಿ ಸ್ವೀಕರಿಸುತ್ತಿದ್ದ ಬಂಕ್‌ಗಳು ಈಗ ಏಕಾಏಕಿ ಹಿಂದೇಟು ಹಾಕುತ್ತಿದ್ದು, ಇದರಿಂದಾಗಿ ಗ್ರಾಹಕರು ಹಾಗೂ ಕ್ಯಾಷಿಯರ್‌ಗಳ ನಡುವೆ ವಾಗ್ವಾದಗಳಾಗುತ್ತಿವೆ.

ಪೆಟ್ರೋಲ್‌ ಬಂಕ್‌ಗಳು ಈಗ ‘ನೋಟು ಚಲಾವಣೆ ಇಲ್ಲದ ಪ್ರಯುಕ್ತ ಅವುಗಳನ್ನು ಸ್ವೀಕರಿಸುವುದಿಲ್ಲ’ ಎಂಬ ನಾಮಫಲಕವನ್ನು ಹಾಕಿವೆ. ಪೆಟ್ರೋಲ್ ಬಂಕ್‌ಗಳಲ್ಲಿರುವ ಕ್ಯಾಷಿಯರ್‌ಗಳನ್ನು ಕೇಳಿದರೆ ‘ತೆಗೆದುಕೊಳ್ಳುವುದಿಲ್ಲ’ ಎಂಬ ಉತ್ತರ ನೀಡುತ್ತಾರೆ. ನಿಖರ ಕಾರಣ ತಿಳಿಸುತ್ತಿಲ್ಲ. 

₹2,000ರ ನೋಟುಗಳನ್ನು ಸ್ವೀಕರಿಸಿದರೆ ತೆರಿಗೆ ಇಲಾಖೆಗಳಿಂದ ಸಮಸ್ಯೆ ಎದುರಿಸಬಹುದು ಎಂಬ ಆತಂಕ ಪೆಟ್ರೋಲ್‌ ಬಂಕ್‌ ಮಾಲೀಕರನ್ನು ಕಾಡುತ್ತಿರುವುದೇ ಮುಖ್ಯ ಕಾರಣ ಎನ್ನಲಾಗಿದೆ. 

‘ಯಾವುದೇ ವಾಣಿಜ್ಯ ಕೇಂದ್ರಗಳು ₹2000 ಮುಖ ಬೆಲೆಯ ನೋಟನ್ನು ಪಡೆಯಲು ತಿರಸ್ಕಾರ ಮಾಡದಂತೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದ್ದರೂ ತೆಗೆದುಕೊಳ್ಳುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಹಕರೊಬ್ಬರು ತಿಳಿಸಿದ್ದಾರೆ.

‘ನಾವು ₹2000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುತ್ತಿದ್ದೇವೆ. ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿದ್ದರೆ ತಪ್ಪು. ಆರ್‌ಬಿಐ ಆದೇಶವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಈ ಕುರಿತು ಸಂಘದವರ ಜೊತೆ ಮಾತನಾಡುತ್ತೇನೆ ಎಂದು ಜಿಲ್ಲಾ ಪೆಟ್ರೋಲಿಯಂ ಡೀಲರ್‌ಗಳ ಸಂಘದ ಕಾರ್ಯದರ್ಶಿ ಸಿದ್ದಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಸಲ ನೋಟು ಬ್ಯಾನ್ ಆದಾಗ ಆದಾಯ ತೆರಿಗೆ ಇಲಾಖೆಯವರು ನಮ್ಮನ್ನು ಗೋಳು ಹೋಯ್ದುಕೊಂಡರು. ಲೆಕ್ಕ ಕೊಡಲು ನಾವು 6 ತಿಂಗಳು ಅಡ್ಡಾಡಿದ್ದೇವೆ. ವ್ಯಾಪಾರಕ್ಕೂ ಹಾಗೂ ಹಣಕ್ಕೂ ಹೊಂದಾಣಿಕೆ ಮಾಡಿಕೊಡಬೇಕಾಗಿತ್ತು. ಮೂರು ತಿಂಗಳು ಡೇಟಾ ವಾಯ್ಸ್ ಕೊಟ್ಟಿದ್ದೇವೆ’ ಎಂದು ಅವರು ಅಸಾಯಕತೆ ವ್ಯಕ್ತಪಡಿಸಿದರು.

₹1500ಕ್ಕೆ ಪೆಟ್ರೋಲ್, ಇಲ್ಲವೇ ಡೀಸೆಲ್ ತುಂಬಿಸಿಕೊಂಡರೆ ಉಳಿದ ₹500 ಕೊಡಬಹುದು. ಆದರೆ ₹100ಕ್ಕೆ ಪೆಟ್ರೋಲ್ ಹಾಕಿಸಿಕೊಂಡು ₹1900 ಕೇಳಿದರೆ ಯಾರು ಕೊಡುತ್ತಾರೆ. ಕೆಲವೊಮ್ಮೆ ವ್ಯಾಪಾರವೇ ಇರುವುದಿಲ್ಲ. ಚಿಲ್ಲರೆ ಸಮಸ್ಯೆ ಉದ್ಭವಿಸುತ್ತದೆ. ಎಲ್ಲಾ ಬ್ಯಾಂಕ್‌ಗಳಲ್ಲೂ ₹2000 ನೋಟು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ನಮ್ಮ ಬಳಿಯೇ ಏಕೆ ಬರಬೇಕು. ಹೆಚ್ಚಿನ ನೋಟುಗಳನ್ನು ತೆಗೆದುಕೊಂಡರೆ ‘ಬದಲಾವಣೆ’ ಏಕೆ ಮಾಡುತ್ತೀರಿ ಎಂಬ ಆರೋಪ ಹೊರಿಸುತ್ತಾರೆ’ ಎಂದು ಸಿದ್ದಣ್ಣ ತಿಳಿಸಿದರು.

‘ದಿನಕ್ಕೆ ₹ 2000 ಮುಖಬೆಲೆಯ 10 ನೋಟುಗಳನ್ನು ತೆಗೆದುಕೊಳ್ಳಲು ಅವಕಾಶವಿರುವುದರಿಂದ  ಬಾರ್ ಆ್ಯಂಡ್ ರೆಸ್ಟೊರಂಟ್‌ಗಳಲ್ಲಿ ₹20,000ದವರೆಗೆ ಸ್ವೀಕರಿಸುತ್ತಿದ್ದೇವೆ. ನಾವು ಯಾವುದೇ ಬೋರ್ಡ್ ಹಾಕಿಲ್ಲ’ ಎಂದು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಈಶ್ವರ್‌ಸಿಂಗ್ ಕವಿತಾಳ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT