ಸೋಮವಾರ, ಜನವರಿ 27, 2020
27 °C

ಫಾರ್ಮಾಸಿಸ್ಟ್ಸ್‌ ಸಾಂಕೇತಿಕ ಪ್ರತಿಭಟನೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಫಾರ್ಮಾಸಿಸ್ಟ್ಸ್‌ ಸಂಘ ಗುರುವಾರ ಸಾಂಕೇತಿಕ ಪ್ರತಿಭಟನೆ ಆರಂಭಿಸಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಅರ್ಪಿಸಿದೆ.

ಈ ಬಗ್ಗೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ದಳವಾಯಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವೇತನ ಮತ್ತು ಭತ್ಯೆಗಳಲ್ಲಿ ಇರುವ ವ್ಯತ್ಯಾಸವನ್ನು ಸರಿಪಡಿಸಬೇಕು. ಫಾರ್ಮಸಿ ವ್ಯಾಸಂಗ ಮಾಡಿದವರನ್ನು ಬಿಟ್ಟು ವ್ಯಾಸಂಗ ಮಾಡದೇ ಇರುವವರನ್ನು ಸರ್ಕಾರವು ಆಸ್ಪತ್ರೆಗಳಲ್ಲಿ ಬಳಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು. ಫಾರ್ಮಾಸಿಸ್ಟ್‌ಗಳಿಗೆ ಕಾಲಕಾಲಕ್ಕೆ ಪದೋನ್ನತಿ ನೀಡಬೇಕು. ಫಾರ್ಮಸಿಯನ್ನು ಎಐಸಿಟಿಇ ಕೌಶಲ್ಯ (ಟೆಕ್ನಿಕಲ್‌) ಎಂದು ಸರ್ಕಾರ ಅಂಗೀಕರಿಸಿದೆ. ವೇತನ ನೀಡುವಾಗ ಅದನ್ನು ಪರಿಗಣಿಸುತ್ತಿಲ್ಲ’ ಎಂದು ಆರೋಪಿಸಿದರು.

‘ಮೊದಲ ಹಂತವಾಗಿ ಕೆಲಸದ ಸಮಯದಲ್ಲಿ ಜ.12ರವರೆಗೆ ಕಪ್ಪು ಪಟ್ಟಿ ಧರಿಸಲಾಗುವುದು. ಎರಡನೇ ಹಂತವಾಗಿ ಜ.30ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶಾಂತಿಯುತ ರ‍್ಯಾಲಿ ನಡೆಸಲಾಗುವುದು. ಆಗಲೂ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮೂರನೇ ಹಂತವಾಗಿ ಫೆ.10ರಿಂದ 17ರ ವರೆಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಹೊರಗುಳಿಯುತ್ತೇವೆ. ಅದಕ್ಕೂ ಸ್ಪಂದಿಸದಿದ್ದರೆ ಮುಂದಿನ ಹಂತದ ಹೋರಾಟ ಮಾಡಲು ರಾಜ್ಯ ಸಂಘ ನಿರ್ಧರಿಸಿದೆ’ ಎಂದು ಮಾಹಿತಿ ನೀಡಿದರು.

ಸಂಘದ ಗೌರವಾಧ್ಯಕ್ಷ ಶ್ರೀಶೈಲಮೂರ್ತಿ, ರಾಜ್ಯ ಪರಿಷತ್‌ ಸದಸ್ಯ ಜ್ಯೋತಿರ್ಲಿಂಗ, ಕೋಶಾಧಿಕಾರಿ ಎಂ.ಕೆ. ಪ್ರಭುದೇವ, ಸುಜಾತಾ ಶೇಜ್‌ವಾಡ್ಕರ್‌, ಪವಿತ್ರಾ ಗುಂಡಂ, ಶಿವಶಂಕರ್‌ ಅವರೂ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು