ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ 100 ದಿನಗಳ ಸಾಧನೆಯ ಛಾಯಾಚಿತ್ರ ಪ್ರದರ್ಶನ

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ
Last Updated 1 ಜನವರಿ 2020, 14:03 IST
ಅಕ್ಷರ ಗಾತ್ರ

ದಾವಣಗೆರೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಯಿಂದ ಜ. 1ರಿಂದ 3ರವರೆಗೆ ಇಲ್ಲಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಸರ್ಕಾರದ ನೂರು ದಿನಗಳ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕಾರ್ಯಕ್ರಮಗಳನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬುಧವಾರ ಚಾಲನೆ ನೀಡಿದರು.

ಈ ವೇಳೆ ಮಾತನಾಡಿ, ‘ಈ ಛಾಯಾಚಿತ್ರ ಪ್ರದರ್ಶನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಹಳ ಅರ್ಥಪೂರ್ಣವಾಗಿ ತೋರಿಸುವ ಕೆಲಸ ಮಾಡಿದೆ’ ಎಂದರು.

ರಾಜ್ಯದ 103 ತಾಲ್ಲೂಕುಗಳು ಪ್ರವಾಹಕ್ಕೆ ತುತ್ತಾಗಿದ್ದು, ಈ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ₹1,200 ಕೋಟಿ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದಿಂದ ₹6,450 ಕೋಟಿಯನ್ನು ಬಿಡುಗಡೆ ಮಾಡುವ ಮೂಲಕ ನೆರೆ ಸಂತ್ರಸ್ತರ ನೋವಿಗೆ ಸರ್ಕಾರ ಮಿಡಿದಿದೆ. ನೆರೆ ಮತ್ತು ಪ್ರವಾಹದಿಂದ ಸಂಪರ್ಕ ಕಳೆದುಕೊಂಡಿದ್ದ 175 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆ ಸಂಚಾರ ಪುನರ್‍ನಿರ್ಮಾಣ ಕೈಗೊಳ್ಳಲಾಗಿದೆ. ಬೆಳೆ ನಷ್ಟ ಅನುಭವಿಸಿದ್ದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ’ ಎಂದರು.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳು, ಎಸ್‍ಸಿಪಿ ಟಿಎಸ್‍ಪಿ ಯೋಜನೆಯಡಿ ₹30,445 ಕೋಟಿ ಬಿಡುಗಡೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ 23 ಲಕ್ಷ ಜನರಿಗೆ ಆರೋಗ್ಯ ಕಾರ್ಡ್ ವಿತರಣೆ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಅಭಿವೃದ್ಧಿಗೆ ನೀಡಿರುವ ಆದ್ಯತೆ, ಸುಸ್ಥಿರ ಮತ್ತು ರಚನಾತ್ಮಕ ಪ್ರವಾಸೋದ್ಯಮ ಅಭಿವೃದ್ದಿಗೆ ಪ್ರೋತ್ಸಾಹ ಸೇರಿ ಹಲವು ಯೋಜನೆಗಳನ್ನು ಪ್ರಸಕ್ತ ಸರ್ಕಾರ ಜಾರಿಗೆ ತಂದಿದ್ದು, ಈ ಕುರಿತು ಛಾಯಾಚಿತ್ರಗಳು ಮಾಹಿತಿ ನೀಡುತ್ತವೆ’ ಎಂದರು.

ಸ್ಪಿರಿಟ್ 2020:ಇದೇ ವೇಳೆ ಪತ್ರಕರ್ತರು ಹೊಸ ವರ್ಷದ ಕಾರ್ಯವೈಖರಿ ಬಗ್ಗೆ ಕೇಳಿದ ಪ್ರಶ್ನೆಗೆ, ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ‘ಈ ವರ್ಷ ನನ್ನ ಟ್ಯಾಗ್ ಸ್ಪಿರಿಟ್ 2020. ಅಂದರೆ ಜ.1ರಿಂದ ಡಿ.31 ರವರೆಗೆ ಸ್ವಲ್ಪವೂ ಬೇಸರವಿಲ್ಲದೇ, ಚೈತನ್ಯ ಕಳೆದುಕೊಳ್ಳದೇ ಹುಮ್ಮಸ್ಸು, ಹುರುಪಿನಿಂದ ನಾನೂ ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ತಂಡದಂತೆ ಕೆಲಸ ನಿರ್ವಹಿಸುತ್ತೇವೆ. ಕಂದಾಯ ಇಲಾಖೆ ಚೈತ್ಯನ್ಯದ ಆಗರ ಸಾಮರ್ಥ್ಯದ ಸಾಗರ. ಸರ್ಕಾರ ಕಂದಾಯ ಇಲಾಖೆಯಿಂದ ಹೆಚ್ಚಿನ ನಿರೀಕ್ಷೆ ಹೊಂದಿದ್ದು, ಆ ನಿರೀಕ್ಷೆ ಮೀರಿ ಕೆಲಸ ಮಾಡುತ್ತೇವೆ. ನಮ್ಮ ಇಲಾಖೆ ಎಲ್ಲರಿಗೂ ಹತ್ತಿರ, ಎಲ್ಲರಿಗಾಗಿ ನಿತ್ಯ ನಿರಂತರವಾಗಿ ಎಲ್ಲರೂ ಕೆಲಸ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕೆಎಸ್‍ಆರ್‍ಟಿಸಿ ಡಿಸಿ ಸಿದ್ದೇಶ್ವರ್, ಜಿಲ್ಲಾ ಪಂಚಾಯಿತಿ ಪಿಆರ್‍ಇಡಿ ಎಂಜಿನಿಯರ್ ಪರಮೇಶ್ವರಪ್ಪ, ಪರಿಶಿಷ್ಟ ಜಾತಿ ನಿಗಮದ ವ್ಯವಸ್ಥಾಪಕ ಸುರೇಶ್ ರೆಡ್ಡಿ, ವಾರ್ತಾಧಿಕಾರಿ ಡಿ.ಅಶೋಕ್‍ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT