ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಂಗವಿಕಲ ಮಕ್ಕಳಿಗೆ ಬೇಕಿದೆ ಗುಣಮಟ್ಟದ ಶಿಕ್ಷಣ, ನೂತನ ತಂತ್ರಜ್ಞಾನ

Last Updated 20 ಸೆಪ್ಟೆಂಬರ್ 2021, 5:49 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 18 ವರ್ಷಕ್ಕಿಂತ ಕೆಳಗಿನ ವಿವಿಧ ಅಂಗವೈಕಲ್ಯವುಳ್ಳ 2,903 ಮಕ್ಕಳು ಕಲಿಯುತ್ತಿದ್ದಾರೆ. ಇವರಿಗಾಗಿ ಇರುವ ವಿಶೇಷ ಶಾಲೆಗಳು ಕೆಲವೇ ನಗರಗಳಿಗೆ ಸೀಮಿತವಾಗಿವೆ. ಜಿಲ್ಲೆಯ ಹೆಚ್ಚಿನ ಅಂಗವಿಕಲ ಮಕ್ಕಳು ಸಾಮಾನ್ಯ ಶಾಲೆಗಳಿಗೇ ಹೋಗುತ್ತಿದ್ದರೆ, ಓಡಾಡಲು ಸಾಧ್ಯವಾಗದ ಮಕ್ಕಳಿಗೆ ಶಿಕ್ಷಣ ಇಲಾಖೆಯಿಂದ ಮನೆಗೇ ತೆರಳಿ ಪಾಠ ಹೇಳುವ ವ್ಯವಸ್ಥೆ ಇದೆ.

ಅಂಗವಿಕಲ ಮಕ್ಕಳಿಗಾಗಿ ಅನುದಾನಿತ ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಸಂಘ–ಸಂಸ್ಥೆಗಳು ಹಲವು ಇವೆ. ದಾವಣಗೆರೆ ನಗರದಲ್ಲಿ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ ಇದ್ದು, ಇಲ್ಲಿ ತರಬೇತಿ ಪಡೆದ 10 ಅಂಧ ಶಿಕ್ಷಕರೇ ಪಾಠ ಮಾಡುತ್ತಾರೆ. ಕೇಂದ್ರ ಸರ್ಕಾರದ ‘ಸಿಆರ್‌ಸಿ’ ಸಹ ಇಲ್ಲಿದ್ದು, ಅತ್ಯಂತ ಕಡಿಮೆ ವೆಚ್ಚದಲ್ಲಿ ಅಂಗವಿಕಲ ಮಕ್ಕಳಿಗೆ ಚಿಕಿತ್ಸಾ ವ್ಯವಸ್ಥೆ ಇಲ್ಲಿದೆ. ಆದರೆ, ಹೆಚ್ಚಿನ ಪೋಷಕರಿಗೆ ಇನ್ನೂ ಇದರ ಬಗ್ಗೆ ಮಾಹಿತಿಯಿಲ್ಲ.

‘ಸಾಮಾನ್ಯ ಶಾಲೆಗಳಲ್ಲಿ ಕಲಿಯುವ ಅಂಗವಿಕಲ ಮಕ್ಕಳಿಗೆ ಪಾಠ ಹೇಳಲು ಶಿಕ್ಷಕರಿಗೆ ಸೂಕ್ತ ತರಬೇತಿಯೇ ಇಲ್ಲ. ‘ಬಿಐಇಆರ್‌ಟಿ’ ಸಿಬ್ಬಂದಿಯಿಂದಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಇವರ ನೇಮಕ ಮಾಡುವಾಗ ಸರ್ಕಾರ ತರಬೇತಿ ಪಡೆದ ಅಂಗವಿಕಲರಿಗೇ ಆದ್ಯತೆ ನೀಡಬೇಕು. ಆಗ ಪಾಠಗಳು ಪರಿಣಾಮಕಾರಿಯಾಗುತ್ತವೆ’ ಎಂದು ಸ್ಫೂರ್ತಿ ಸಂಸ್ಥೆಯ ನಿರ್ದೇಶಕ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಕೆ.ಬಿ. ರೂಪಾ ನಾಯ್ಕ ಅಭಿಪ್ರಾಯಪಟ್ಟರು.

‘ಸರ್ಕಾರದಿಂದ ನೀಡುವ ಸೌಲಭ್ಯಗಳಲ್ಲಿಯೂ 21 ಬಗೆಯ ಅಂಗವಿಕಲರಿಗೆ ಸಮಾನ ಆದ್ಯತೆ ಸಿಗುತ್ತಿಲ್ಲ. ಮಕ್ಕಳ ಅಗತ್ಯವೇನು ಎಂದು ಗುರುತಿಸಿ ಸಾಧನ–ಸಲಕರಣೆ ಕೊಡಬೇಕು. ಆದರೆ, ಸರ್ಕಾರ ಏನೋ ಒಂದಿಷ್ಟು ಸಲಕರಣೆಗಳನ್ನು ಬಲ್ಕ್‌ ಆಗಿ ಖರೀದಿಸಿ ಅವ್ಯವಸ್ಥಿತವಾಗಿ ಹಂಚಿಕೆ ಮಾಡುತ್ತಿದೆ. ಗ್ರಾಮೀಣ ಭಾಗದ ಅಂಗವಿಕಲ ಮಕ್ಕಳಿಗೆ ಹಲವು ಥೆರಪಿಗಳು ನಗರದಲ್ಲಿ ಲಭ್ಯವಿವೆ. ಆದರೆ, ಮಕ್ಕಳನ್ನು ಕರೆತರಲು ಸೂಕ್ತ ವಾಹನ ವ್ಯವಸ್ಥೆ, ಆರ್ಥಿಕ ಶಕ್ತಿ ಇಲ್ಲದಿರುವುದರಿಂದ ಬರಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಸರ್ಕಾರದಿಂದ ಯಾವುದೇ ಯೋಜನೆಯೂ ಇಲ್ಲ’ ಎಂದು ಅವರು ದೂರಿದರು.

‘ಬ್ರೈಲ್‌ ಪುಸ್ತಕಗಳ ಮುದ್ರಣ ವ್ಯವಸ್ಥೆ ಮೈಸೂರು ಹಾಗೂ ಬೆಂಗಳೂರಿನಲ್ಲಿ ಮಾತ್ರ ಇದೆ. ದಾವಣಗೆರೆಯ ಕಾಲೇಜುಗಳಲ್ಲಿ 43 ಅಂಧ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಿಗೆ ಬ್ರೈಲ್‌ ಲಿಪಿಯ ನೋಟ್ಸ್ ಸಿದ್ಧವಾಗಿ ಬರುವುದರೊಳಗೆ ಅರ್ಧ ವರ್ಷದ ಅಧ್ಯಯನವೇ ಮುಗಿದಿರುತ್ತದೆ. ಹೀಗಾಗಿ ಇಲ್ಲಿಯೇ ಬ್ರೈಲ್‌ ಮುದ್ರಣ ವಿಭಾಗ ಆರಂಭಿಸಬೇಕು’ ಎಂದು ಅಂಗವಿಕಲರ ಸಲಹಾ ಕೇಂದ್ರದ ಆಪ್ತ ಸಮಾಲೋಚಕ ಜೆ. ದುರ್ಗೇಶ್‌ ಸಲಹೆ ನೀಡಿದರು.

‘ಅಂಗವಿಕಲ ವಿದ್ಯಾರ್ಥಿಗಳಿಗೆ ನೂತನ ತಂತ್ರಜ್ಞಾನದ ಕಲಿಕಾ ಸಾಮಗ್ರಿಗಳನ್ನು ಒದಗಿಸಬೇಕು. ಡಿಜಿ ಪ್ಲೇಯರ್‌, ಡಿಸ್ಪ್ಲೇ ಸಿಸ್ಟಮ್‌ಗಳನ್ನು ಶೈಕ್ಷಣಿಕ ಸಂಸ್ಥೆಗಳಿಗೆ ಒದಗಿಸಿಕೊಟ್ಟರೆ ಅಲ್ಲಿ ಕಲಿಯುವ ವಿಶೇಷ ಮಕ್ಕಳಿಗೆ ಅನುಕೂಲವಾಗುತ್ತದೆ. ಸೈನ್‌ ಲ್ಯಾಂಗ್ವೇಜ್‌ ಇಂಟರ್‌ಪ್ರೀಟರ್‌ ನೇಮಕವಾದರೆ ವಾಕ್‌ ಮತ್ತು ಶ್ರವಣ ದೋಷವುಳ್ಳವರಿಗೆ ಕಲಿಕೆಗೆ ಸಹಾಯವಾಗುತ್ತದೆ. ಕ್ರಿಕೆಟ್‌, ವಾಲಿಬಾಲ್‌ ಹಾಗೂ ಬ್ಯಾಡ್ಮಿಂಟನ್‌ ತಂಡಗಳು ನಮ್ಮಲ್ಲಿವೆ. ಆದರೆ, ಸೂಕ್ತ ತರಬೇತಿ ನೀಡಬೇಕು. ಅಂಗವಿಕಲರಿಗೆ ವಿಶೇಷ ರಸ್ತೆ, ಸರ್ಕಾರಿ ಕಚೇರಿಗಳ ಬೋರ್ಡ್‌ಗಳಲ್ಲಿ ಬ್ರೈಲ್‌ ಬರಹ, ಕಚೇರಿಗಳಲ್ಲಿ ರ್‍ಯಾಂಪ್‌ ನಿರ್ಮಾಣ ಸೇರಿ ಎಲ್ಲ ಕಡೆ ಅಂಗವಿಕಲಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕಿದೆ. ಕೇಂದ್ರ ಸರ್ಕಾರದ ‘ಸುಗಮ್ಯ ಭಾರತ್‌ ಅಭಿಯಾನ’ದಲ್ಲಿ ಇವುಗಳ ಪ್ರಸ್ತಾಪವಿದೆ. ಆದರೆ, ಅವು ಅನುಷ್ಠಾನವಾಗಬೇಕು’ ಎಂದರು.

‘ವಿವಿಧ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಿರುವ ಶೇ 5 ಅನುದಾನದಲ್ಲಿ ಕೇವಲ ವೀಲ್‌ಚೇರ್‌ಗಳನ್ನು ಖರೀದಿಸಲಾಗುತ್ತಿದೆ. ಅಂಧರಿಗೆ, ಶ್ರವಣ ದೋಷವುಳ್ಳವರಿಗೆ ಹಾಗೂ ಇತರ ಅಂಗವೈಕಲ್ಯ ಇರುವ ಮಕ್ಕಳಿಗೆ ಸೌಲಭ್ಯಗಳು ಲಭಿಸುತ್ತಿಲ್ಲ. ಯುಡಿಐಡಿ ಕಾರ್ಡ್‌ ಇನ್ನೂ ಹಲವರಿಗೆ ತಲುಪಿಲ್ಲ. ಬಂದಿದ್ದರೂ ಇಲಾಖೆಗಳಲ್ಲೇ ಇದ್ದು, ವಿತರಣೆಯಾಗಿಲ್ಲ. ಹಲವರಿಗೆ ಮಾಸಾಶನ ಸಹ ಸರಿಯಾಗಿ ಸಿಗುತ್ತಿಲ್ಲ’ ಎಂದು ನ್ಯಾಷನಲ್‌ ಫೆಡರೇಷನ್‌ ಆಫ್‌ ಬ್ಲೈಂಡ್ಸ್‌ನ ರಾಜ್ಯ ಸಂಯೋಜಕ ವೀರೇಶ್‌ ದೂರಿದರು.

‘ಸರ್ಕಾರದಿಂದ ಟಾಕಿಂಗ್‌ ಲ್ಯಾಪ್‌ಟಾಪ್‌ ನೀಡಿದ್ದಾರೆ. ಆದರೆ, ಇಲ್ಲಿ ಬ್ರೈಲ್‌ ಮುದ್ರಣದ ಸೌಲಭ್ಯವಿಲ್ಲ. ನಮಗೆ ಪಠ್ಯಪುಸ್ತಕ ಸಿಗುತ್ತಿದೆಯಾದರೂ ಗೈಡ್‌ ಹಾಗೂ ಇತರ ಅಧ್ಯಯನ ಸಾಮಗ್ರಿಗಳು ಬ್ರೈಲ್‌ನಲ್ಲಿ ಸಿಗುತ್ತಿಲ್ಲ. ಅವುಗಳನ್ನು ನಾವೇ ಬೆಂಗಳೂರಿಗೆ ಕಳುಹಿಸಿ ಬ್ರೈಲ್‌ನಲ್ಲಿ ಮುದ್ರಣ ಮಾಡಿಸಿಕೊಂಡು ಓದುತ್ತಿದ್ದೇವೆ. ಒಂದೂವರೆ ತಿಂಗಳು ಮುಂಚಿತವಾಗಿ ಅವರಿಗೆ ತಿಳಿಸಬೇಕಾಗುತ್ತದೆ. ವೆಚ್ಚವೂ ಆಗುತ್ತದೆ. ದಾವಣಗೆರೆಯಲ್ಲೇ ಬ್ರೈಲ್‌ ಮುದ್ರಣದ ವ್ಯವಸ್ಥೆ ಮಾಡಿದರೆ ಇಲ್ಲಿ ಓದುವವರಿಗೆ ಸಹಾಯವಾಗುತ್ತದೆ’ ಎಂದು ಅಥಣಿ ಕಾಲೇಜಿನ ಪಿಯು ಕಲಾ ವಿಭಾಗದ ವಿದ್ಯಾರ್ಥಿ ಕಿರಣ್‌ ತಿಳಿಸಿದರು.

ವಸತಿ ವ್ಯವಸ್ಥೆ ಅಗತ್ಯ: ‘ವಸತಿ ಸಹಿತವಾಗಿರುವ ನ‌ಮ್ಮ ಶಾಲೆಯಲ್ಲಿ 10ನೇ ತರಗತಿಯವರೆಗಿನ 80 ಮಕ್ಕಳಿಗೆ ಕಲಿಯಲು ಅವಕಾಶವಿದೆ. ಪ್ರತಿವರ್ಷ ಸರಾಸರಿ 60 ಮಕ್ಕಳು ಇರುತ್ತಾರೆ. ಕೋವಿಡ್‌ ಕಾರಣದಿಂದ ಮಕ್ಕಳ ಸಂಖ್ಯೆ ಸ್ವಲ್ಪ ಕುಸಿದಿದೆ. ಈ ವರ್ಷ 48 ಮಕ್ಕಳು ದಾಖಲಾಗಿದ್ದಾರೆ’ ಎಂದು ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯ ಅಧೀಕ್ಷಕ ಡಾ.ಕೆ.ಕೆ. ಪ್ರಕಾಶ್‌ ತಿಳಿಸಿದರು.

‘ಎಸ್ಸೆಸ್ಸೆಲ್ಸಿ ನಂತರದ ಶಿಕ್ಷಣಕ್ಕಾಗಿ ಅಂಧ ಮಕ್ಕಳು ಸಾಮಾನ್ಯ ಕಾಲೇಜುಗಳಿಗೆ ಸೇರಬೇಕಾಗುತ್ತದೆ. ಪಿಯುವರೆಗಿನ ವಸತಿಯುತ ಶಿಕ್ಷಣ ಆರಂಭಿಸಿದರೆ ಇಂಥ ಮಕ್ಕಳಿಗೆ ಪ್ರಯೋಜನಕಾರಿ. ನೂತನ ಶಿಕ್ಷಣ ನೀತಿಯಲ್ಲಿ ಇದನ್ನು ಕಡ್ಡಾಯ ಮಾಡಲಾಗಿದೆ. ಅನುಷ್ಠಾನವಾಗುವುದು ಮುಖ್ಯ. ಬ್ರೈಲ್‌ ಲೈಬ್ರರಿ, ಡಿಜಿಟಲ್‌ ಅಧ್ಯಯನಗಳ ಕೇಂದ್ರ ಆರಂಭಿಸುವುದು ತೀರಾ ಅಗತ್ಯವಿದೆ. ಈಗ ಸ್ಪರ್ಧಾತ್ಮಕ ಕಾಲವಾಗಿರುವುದರಿಂದ ಇವರಿಗಾಗಿ ತರಬೇತಿ ಕೇಂದ್ರಗಳನ್ನೂ ಆರಂಭಿಸುವುದು ಅಗತ್ಯ’ ಎಂದು ಅವರು ಅಭಿಪ್ರಾಯಪಟ್ಟರು.

* ಶೇ 5ರ ಅನುದಾನದಲ್ಲಿ ಅಂಗವಿಕಲರಿಗೆ ಸೌಲಭ್ಯ ಒದಗಿಸುವ ಯೋಜನೆ ಇನ್ನೂ ವ್ಯವಸ್ಥಿತವಾಗಬೇಕಿದೆ. ಇನ್ನು ಮುಂದೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿಯಮಿತವಾಗಿ ಇದಕ್ಕಾಗಿಯೇ ಪರಿಶೀಲನಾ ಸಭೆ ನಡೆಯಲಿದೆ. ವಾಕ್‌ ಮತ್ತು ಶ್ರವಣ ದೋಷವುಳ್ಳವರಿಗೆ ಹೊಲಿಗೆ ಯಂತ್ರಗಳನ್ನು ನೀಡುವ ಆಲೋಚನೆ ಮಾಡಲಾಗಿದೆ. ಈಗಾಗಲೇ ಮಕ್ಕಳಿಗೆ ಬ್ರೈಲ್‌ ಕಿಟ್‌, ಹಿಯರಿಂಗ್‌ ಏಡ್‌, ಟಾಕಿಂಗ್‌ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ.

- ಮಲ್ಲಿಕಾರ್ಜುನ ಮಠದ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ

ವೈದ್ಯಕೀಯ ತಪಾಸಣಾ ಶಿಬಿರ ಅಗತ್ಯ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಅಂಗವಿಕಲರಿಗಾಗಿ ನಡೆಯುತ್ತಿದ್ದ ವೈದ್ಯಕೀಯ ತಪಾಸಣಾ ಶಿಬಿರ ಮೂರು ವರ್ಷಗಳಿಂದ ನಡೆಯದ ಪರಿಣಾಮವಾಗಿ ಅಂಗವಿಕಲ ಮಕ್ಕಳಿಗೆ ಸೌಲಭ್ಯಗಳಿಲ್ಲದೇ ತೊಂದರೆ ಆಗಿದೆ.

ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿವರೆಗೆ 632 ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ. ಇವರಲ್ಲಿ ಗಂಭೀರ ವೈಕಲ್ಯವುಳ್ಳ 60 ಮಕ್ಕಳಿಗೆ ಸರ್ಕಾರದ ಸಮನ್ವಯ ಶಿಕ್ಷಣ ಕಾರ್ಯಕ್ರಮದಡಿ ಗೃಹಪಾಠ ನೀಡಲಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ತಿಳಿಸಿದರು.

‘ಯಾವುದೇ ಶಾಲೆಯಲ್ಲಿ ಅಂಗವಿಕಲರಿಗಾಗಿ ಹೈಟೆಕ್ ಶೌಚಾಲಯವಿಲ್ಲ. 2017ರಿಂದ ತ್ರಿಚಕ್ರ ವಾಹನ ವಿತರಣೆ ಆಗಿಲ್ಲ’ ಎಂದು ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೀರೇಶ್ ತಿಳಿಸಿದರು.

ಅರ್ಧಕ್ಕೆ ವಿದ್ಯಾಭ್ಯಾಸ ಸ್ಥಗಿತ

ನ್ಯಾಮತಿ: ತಾಲ್ಲೂಕಿನಲ್ಲಿ ಅಂಗವಿಕಲ ಹಾಗೂ ವಿಶೇಷ ಮಕ್ಕಳ ಸಂಖ್ಯೆ ಹೆಚ್ಚಿದೆ. ಆದರೆ, ಶೈಕ್ಷಣಿಕ ಬೆಳವಣಿಗೆಯಲ್ಲಿ ಸರಿಯಾದ ಮಾರ್ಗದರ್ಶನ ಕೊರತೆ ಕಂಡುಬರುತ್ತಿದೆ.

ತಾಲ್ಲೂಕಿನ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆ ಹಂತದವರಿಗೆ 2021–22ನೇ ಸಾಲಿನಲ್ಲಿ ವಿವಿಧ ಗ್ರಾಮಗಳ ಶಾಲೆಗಳಲ್ಲಿ 139 ಅಂಗವಿಕಲ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇವರಿಗೆಂದೇ ಪ್ರತ್ಯೇಕ ಯಾವುದೇ ಶಾಲೆಗಳು ಇಲ್ಲ. ‘ಸ್ಥಳೀಯವಾಗಿ ಪ್ರೌಢಶಾಲೆ ಹಂತದವರೆಗೆ ಅಂಗವಿಕಲ ಮಕ್ಕಳು ಬರುತ್ತಾರೆ. ನಂತರ ಹೆಚ್ಚಿನ ಶಿಕ್ಷಣಕ್ಕೆ ಅಂಗವಿಕಲ ತರಬೇತಿ ಕೇಂದ್ರಕ್ಕೆ ಕಳುಹಿಸಿಲು ಪೋಷಕರು ಒಪ್ಪುವುದಿಲ್ಲ. ಮಕ್ಕಳು ಸಹ ಪೋಷಕರಿಂದ ದೂರ ಹೋಗಲು ಇಚ್ಛಿಸುವುದಿಲ್ಲ. ಹೀಗಾಗಿ ಇವರ ವಿದ್ಯಾಭ್ಯಾಸ ಅರ್ಧಕ್ಕೆ ನಿಲುಗಡೆಯಾಗುತ್ತದೆ. ಪೋಷಕರು ಇಲ್ಲದೇ ಹೋದರೂ ತಾವು ಸ್ವಾವಲಂಬಿಯಾಗಿ ಬದುಕಬಲ್ಲೆವು ಎಂದು ಮಾನಸಿಕವಾಗಿ ಸಿದ್ಧರಾಗುವಂತೆ ಶಿಕ್ಷಣ ಕೊಡುವುದು ಅಗತ್ಯ’ ಎನ್ನುತ್ತಾರೆ ಪಟ್ಟಣದ ಗ್ರಾಮೀಣ ಪುರ್ನವಸತಿ ಕಾರ್ಯಕರ್ತ ನವಲಿ ರಾಜೇಂದ್ರ.

ಸಮನ್ವಯ ಶಿಕ್ಷಣ

ಹೊನ್ನಾಳಿ: ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳ ಕಲಿಕೆಗೆ ಸಾಮಾನ್ಯ ಶಾಲೆಯಲ್ಲಿಯೇ ಸಾಮಾನ್ಯ ಮಕ್ಕಳೊಂದಿಗೆ ಶಿಕ್ಷಣ ಕೊಡಿಸಲಾಗುತ್ತಿದೆ. ವಿಶೇಷ ತರಬೇತಿ ಹೊಂದಿದ ಶಿಕ್ಷಕರು ಅವರಿಗೆ ಪಾಠ ಮಾಡುತ್ತಾರೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್ ತಿಳಿಸಿದರು.

‘ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ವಿಶೇಷ ಶೌಚಾಲಯ ಸೌಲಭ್ಯವಿದೆ. ರ್‍ಯಾಂಪ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಆದರೆ ದೃಷ್ಟಿದೋಷವುಳ್ಳ ಮಕ್ಕಳಿಗೆ ಬ್ರೈಲ್ ಪುಸ್ತಕದ ಕೊರತೆ ಇದೆ. ಕೋವಿಡ್ ಕಾರಣದಿಂದ ಕಳೆದ 3 ವರ್ಷಗಳಿಂದ ವೈದ್ಯಕೀಯ ಶಿಬಿರವೂ ನಡೆದಿಲ್ಲ. ಆದ್ದರಿಂದ ಅವರಿಗೆ ಸಾಧನ ಸಲಕರಣೆಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಹೇಳಿದರು.

ಸೌಲಭ್ಯ ವಂಚಿತವಾಗದಂತೆ ಕಾಳಜಿ

ಚನ್ನಗಿರಿ ತಾಲ್ಲೂಕಿನಲ್ಲಿ 395 ಅಂಗವಿಕಲ ಮಕ್ಕಳು ಶಾಲೆಗಳಲ್ಲಿ ದಾಖಲಾಗಿದ್ದಾರೆ. ಪಟ್ಟಣದ ಬಿಆರ್‌ಸಿ ಕೇಂದ್ರದ ಎಸ್ಆರ್‌ಪಿ ಕೇಂದ್ರದಲ್ಲಿ ಶಾಲೆಗೆ ಬರಲು ಸಾಧ್ಯವಾಗುವ ಮಕ್ಕಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ. 42 ಮಕ್ಕಳಿಗೆ ಮನೆಗಳಿಗೆ ಹೋಗಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಪ್ರತಿ ವರ್ಷ ಮನೆ–ಮನೆಗೆ ಭೇಟಿ ನೀಡಿ ಅಂಗವಿಕಲ ಮಕ್ಕಳನ್ನು ಗುರುತಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ಯಾವುದೇ ಮಗುವೂ ಸೌಲಭ್ಯ ವಂಚಿತರಾಗದಂತೆ ಜವಾಬ್ದಾರಿಯಿಂದ ಶಿಕ್ಷಣ ಒದಗಿಸುತ್ತಿದ್ದೇವೆ ಎಂದು ಕ್ಷೇತ್ರ ಸಮನ್ವಾಧಿಕಾರಿ ಆರ್.ಆರ್. ಪ್ರಕಾಶ್ ಮಾಹಿತಿ ನೀಡಿದರು.

(ವರದಿ ಸಹಕಾರ: ವಿಶ್ವನಾಥ ಡಿ.,ಎಚ್.ವಿ. ನಟರಾಜ್,ಎನ್‌.ಕೆ. ಆಂಜನೇಯ,ಡಿ.ಎಂ. ಹಾಲಾರಾಧ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT