ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ: ತಂತ್ರಜ್ಞಾನ ಅಳವಡಿಸಲು ಡಿಸಿ ಸೂಚನೆ

ಚಿಕ್ಕಬಿದರಿಯಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
Last Updated 8 ಫೆಬ್ರುವರಿ 2021, 5:15 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಹರಿಹರ: ತಾಲ್ಲೂಕು ಚಿಕ್ಕಬಿದರಿಯ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಆರೋಗ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಭಾನುವಾರ ನಡೆದ ವಿಶೇಷ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ರಾಮದ ಸಮೀಪದ ಡಿಸ್ಟಿಲರಿ ಕಾರ್ಖಾನೆಯಿಂದ ಹೊರಸೂಸುವ ಹಾರುಬೂದಿಯಿಂದಾಗಿ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳು ತಲೆದೋರುತ್ತಿವೆ ಎಂಬ ದೂರುಗಳು ಬಂದಿದ್ದು, ಹಾರುಬೂದಿ ಹಾಗೂ ತ್ಯಾಜ್ಯದಿಂದ ಗಾಳಿ, ನೀರು ಕಲುಷಿತವಾಗಿರುವ ಬಗ್ಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೇ ಈ ಕುರಿತು ಬೆಂಗಳೂರಿನ ವಲಯ ಪರಿಸರ ಇಲಾಖಾ ಕಚೇರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ’ ಎಂದರು.

‘ಮಾಲಿನ್ಯ ನಿಯಂತ್ರಣಕ್ಕಾಗಿ ನೂತನ ತಂತ್ರಜ್ಞಾನ ಅಳವಡಿಕೆಗೆ ಕಾರ್ಖಾನೆಯವರಿಗೆ ಸೂಚಿಸಲಾಗುವುದು. ಇದರ ಜೊತೆಗೆ ಇಲ್ಲಿನ ಗ್ರಾಮಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ಬಳಸಲು ಯೋಗ್ಯವೇ ಎಂಬುದರ ಕುರಿತು ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಸ್ಥರ ರಕ್ತದ ಮಾದರಿ ಸಂಗ್ರಹಿಸಿ ವಿಶೇಷ ಪರೀಕ್ಷೆಗೆ ಒಳಪಡಿಸುವಂತೆಯೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಹೇಳಿದರು.

‘ಗ್ರಾಮದಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ ನಡೆಸಿದ್ದು, ಒಂದು ವೇಳೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದಲ್ಲಿ ಜಿಲ್ಲೆಯ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಆರೋಗ್ಯ ಇಲಾಖೆ ನೀಡುವ ವರದಿಯನ್ನಾಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಮಾತನಾಡಿ, ‘ಜಿಲ್ಲೆಯ ಕೆಲವು ಗ್ರಾಮಗಳ ನೀರಿನಲ್ಲಿ ಫ್ಲೋರೈಡ್ ಅಂಶ ಇರುವ ಬಗ್ಗೆ ಮಾಹಿತಿ ಬಂದಿದ್ದು, ಇದಕ್ಕೆ ಕಾರಣ ಗುರುತಿಸಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗಿದೆ. ಜಲಸಿರಿ ಯೋಜನೆಯಡಿ ಕೊಂಡಜ್ಜಿ ಹಾಗೂ ಸುತ್ತಮುತ್ತಲ 11 ಗ್ರಾಮಗಳಿಗೆ ಶುದ್ಧ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ‘ಕಾರ್ಖಾನೆ ತ್ಯಾಜ್ಯ ನೀರಿನಲ್ಲಿ ಸೇರಿ, ಕಲುಷಿತಗೊಂಡು ಆರೋಗ್ಯ ಸಮಸ್ಯೆಯಾಗುತ್ತಿದೆ. ಹಾರುಬೂದಿ ಗಾಳಿಯೊಂದಿಗೆ ಬೆರೆತು ಗಾಳಿಯೂ ಕಲುಷಿತವಾಗಿರುವ ಸಾಧ್ಯತೆಗಳಿವೆ. ಇಲ್ಲಿನ ನೀರಿನ ಮಾದರಿಯನ್ನು ಸಂಗ್ರಹಿಸಿ, ಬಳಕೆಗೆ ಅರ್ಹವಾಗಿದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸಿ ವರದಿ ಸಲ್ಲಿಸಲಾಗುವುದು. ನೀರಿನಲ್ಲಿ ರಾಸಾಯನಿಕ ಮಿಶ್ರಣವಾಗಿರುವುದು ಕಂಡುಬಂದಲ್ಲಿ, ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಿಕೊಡಲಾಗುವುದು’ ಎಂದರು.

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್, ಡಾ. ಚಂದ್ರಮೋಹನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT