ಸೋಮವಾರ, ಜನವರಿ 25, 2021
26 °C

ಜನಸಂಖ್ಯೆ–ಮತದಾರರ ಪ್ರಮಾಣದ ವ್ಯತ್ಯಾಸ ಸರಿಪಡಿಸಿ: ಉಮಾಶಂಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯ ಶೇ 78.12ರಷ್ಟು ಮಂದಿ ಮತದಾರರಿದ್ದಾರೆ ಎಂದು ಅಂಕಿ ಅಂಶ ಹೇಳುತ್ತಿದೆ. ಆದರೆ 18 ವರ್ಷದೊಳಗಿನವರ ಸಂಖ್ಯೆ ತೆಗೆದುಕೊಂಡಾಗ ಈ ಪ್ರಮಾಣ ಸರಿ ಇಲ್ಲ. ಮತದಾರರ ಪ್ರಮಾಣ ಕಡಿಮೆಯಾಗಬೇಕು ಎಂಬುದು ಕಂಡು ಬರುತ್ತಿದೆ. ಅದನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಮತದಾರರ ಪಟ್ಟಿ ವೀಕ್ಷಕರು ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ತಿಳಿಸಿದರು.

ಅದನ್ನು ಹೊರತುಪಡಿಸಿ ಜಿಲ್ಲೆಯಲ್ಲಿ ಮತದಾರರ ಸೇರ್ಪಡೆ, ಬೇರ್ಪಡೆ, ಪರಿಷ್ಕರಣೆ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡುವಾಗ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ಕೈಬಿಡುವಾಗ ಸರಿಯಾಗಿ ದಾಖಲೆಗಳ ಪರಿಶೀಲನೆ ನಡೆಸಬೇಕು. ಪಟ್ಟಿಯಿಂದ ಕೈಬಿಡುವಾಗ ಸಂಬಂಧಪಟ್ಟಂತಹ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಈ ದಾಖಲೆಗಳು ಪರಿಶೀಲನೆ ವೇಳೆ ಲಭ್ಯವಾಗುವಂತಿರಬೇಕು ಎಂದರು.

ಗಡಿಭಾಗದಲ್ಲಿ ವಾಸಿಸುವ ಜನರ ಹೆಸರು ಗಡಿಯ ಆಚೆ ಮತ್ತು ಈಚೆ ಇರುವ ಸಾಧ್ಯತೆಗಳು ಹೆಚ್ಚು ಇದೆ. ಅದಕ್ಕಾಗಿ ಅವುಗಳ ಬಗ್ಗೆ ನಿಗಾ ಇಟ್ಟು ಸರಿಪಡಿಸಬೇಕು. ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ನಿರಂತರ ಪ್ರಕ್ರಿಯೆ. 18 ವರ್ಷ ದಾಟಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಯಾ ಮತಗಟ್ಟೆ ಬಿಎಲ್‍ಒಗಳಿಗೆ ದಾಖಲೆ ಸಲ್ಲಿಸಿ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಮದುವೆ, ವರ್ಗಾವಣೆ, ಸ್ಥಳಾಂತರ, ಮರಣ ಹೀಗೆ ನಾನಾ ಕಾರಣಗಳಿಗಾಗಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿರುತ್ತದೆ. ‘ಗುರುತಿನ ಚೀಟಿ ಇದೆ, ಆದರೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ’ ಎಂಬ ಆಕ್ಷೇಪಣೆಗಳು ಚುನಾವಣೆಯ ಮತದಾನ ದಿನದಂದು ಬರುವುದು ಸಾಮಾನ್ಯ. ಹೀಗಾಗಿ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವಿಕೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರ ಪಾತ್ರ ಮಹತ್ವದ್ದಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಅವರು ಸಕ್ರಿಯವಾಗಿದ್ದು, ಪರಿಶೀಲನೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಉದ್ಯೋಗ, ವಿದ್ಯಾಭ್ಯಾಸ ಮುಂತಾದ ಕಾರಣಗಳಿಗಾಗಿ ವಿದೇಶಗಳಿಗೆ ತೆರಳುವವರು, 18 ವರ್ಷ ವಯಸ್ಸು ಆಗಿದ್ದಲ್ಲಿ, ಅಂತಹವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶವಿದೆ. ಹೀಗಾಗಿ ಅನಿವಾಸಿ ಭಾರತೀಯರು (ಎನ್‍ಆರ್‍ಐ) ಕೂಡ ಆನ್‍ಲೈನ್ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು ಎಂದರು.

ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ ಒಟ್ಟು 35,276 ಅರ್ಜಿಗಳು ಸಲ್ಲಿಕೆಯಾಗಿದೆ. 32,646 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 1,659 ಅರ್ಜಿಗಳು ವಿವಿಧ ಕಾರಣಗಳಿಗೆ ತಿರಸ್ಕೃಗೊಂಡಿವೆ, 958 ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಹೆಸರು ತೆಗೆದುಹಾಕಲು 15,736 ಅರ್ಜಿಗಳು ಸಲ್ಲಿಕೆಯಾಗಿದ್ದು, 15,659 ಅಂಗೀಕೃತಗೊಂಡು, 60 ಅರ್ಜಿಗಳು ತಿರಸ್ಕೃತಗೊಂಡಿವೆ. ತಿದ್ದುಪಡಿಗಾಗಿ 9,536 ಅರ್ಜಿ ಸಲ್ಲಿಕೆಯಾಗಿದ್ದು, 7,619 ಅರ್ಜಿ ಅಂಗೀಕೃತಗೊಂಡು, 1217 ತಿರಸ್ಕೃತಗೊಂಡಿವೆ. 618 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ವಿಧಾನಸಭಾ ಕ್ಷೇತ್ರದೊಳಗಿನ ಸ್ಥಳಾಂತರಕ್ಕಾಗಿ 1004 ಅರ್ಜಿಗಳು ಸಲ್ಲಿಕೆಯಾಗಿದ್ದು, 792 ಅರ್ಜಿ ಅಂಗೀಕರಗೊಂಡು, 154 ಅರ್ಜಿಗಳು ತಿರಸ್ಕೃತಗೊಂಡಿವೆ. 35 ಅರ್ಜಿ ಪರಿಶೀಲನಾ ಹಂತದಲ್ಲಿವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ವಿಶೇಷ ಭೂಸ್ವಾಧೀನ ಅಧಿಕಾರಿ ರೇಷ್ಮಾ ಹಾನಗಲ್‌ ವಿವಿಧ ತಹಶೀಲ್ದಾರರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.