ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಅಂಚೆ ಕಚೇರಿಗೆ ಬೇಕು ಸ್ವಂತ ಕಟ್ಟಡ: ಕಟ್ಟಡ ನಿರ್ಮಾಣಕ್ಕೆ ಮುಖಂಡರ ಆಗ್ರಹ

Last Updated 14 ಏಪ್ರಿಲ್ 2023, 4:48 IST
ಅಕ್ಷರ ಗಾತ್ರ

ಬಸವಾಪಟ್ಟಣ: ಇಲ್ಲಿ ಅಂಚೆ ಕಚೇರಿ ಆರಂಭವಾಗಿ ಶತಮಾನ ಕಳೆದಿದ್ದರೂ ಸ್ವಂತ ಕಟ್ಟಡವಿಲ್ಲದೇ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು, ಗ್ರಾಹಕರಿಗೂ, ಅಂಚೆ ಸಿಬ್ಬಂದಿಗೂ ಸಾಕಷ್ಟು ತೊಂದರೆಯಾಗಿದೆ.

ಶಾಖಾ ಕಚೇರಿಯನ್ನು ತಾತ್ಕಾಲಿಕವಾಗಿ ನೋಡಿಕೊಳ್ಳುತ್ತಿದ್ದ ಪೋಸ್ಟ ಮಾಸ್ಟರ್‌ರವರ ಮನೆಯಲ್ಲಿ ನಡೆಯುತ್ತಿದ್ದ ಕಚೇರಿಯನ್ನು 60 ವರ್ಷಗಳ ಹಿಂದೆ ಉಪ ಅಂಚೆ ಕಚೇರಿಯನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಆಗ ಕಚೇರಿಯನ್ನು ಮುಖ್ಯರಸ್ತೆಯ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ನಂತರ ಪೋಸ್ಟ್‌ ಮಾಸ್ಟರ್‌ ಅವರನ್ನು ನೇಮಕ ಮಾಡಲಾಯಿತು. ಆದರೆ, ಕಚೇರಿಗೆ ಸ್ವಂತ ಕಟ್ಟಡದ ಕನಸು ಮಾತ್ರ ನನಸಾಗಲಿಲ್ಲ. ಸದ್ಯ ಜನತಾ ವಿದ್ಯಾ ಸಂಸ್ಥೆಯ ಸಿಬ್ಬಂದಿ ಕೊಠಡಿಯಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದಾಗಿ ಸಿಬ್ಬಂದಿ ಸಮಸ್ಯೆಗೆ ಸಿಲುಕಿದ್ದಾರೆ.

ಸಂಧ್ಯಾ ಸುರಕ್ಷತೆ, ಅಂಗವಿಕಲರ ವೇತನ, ವಿಧವಾ ವೇತನ ಠೇವಣಿದಾರರು, ಆರ್‌.ಡಿ, ಪಿ.ಎಲ್‌.ಐ, ಉಳಿತಾಯ ಖಾತೆ ಭಾಗ್ಯಲಕ್ಷ್ಮಿ, ಸುಕನ್ಯಾ ಯೋಜನೆ ಸೇರಿ ಸಾವಿರಾರು ಗ್ರಾಹಕರು ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ ಇದ್ದಾರೆ. ಪ್ರತಿದಿನ ಸಾಮಾನ್ಯ ಪತ್ರಗಳು, ರಿಜಿಸ್ಟರ್‌ ಪತ್ರಗಳು, ಪಾರ್ಸೆಲ್‌, ಮನಿ ಆರ್ಡರ್‌ ಮುಂತಾದ ಕಾರ್ಯಗಳಿಗಾಗಿ ನೂರಾರು ಜನ ಬರುತ್ತಾರೆ. ₹ 80 ಲಕ್ಷದಷ್ಟು ಠೇವಣಿ ಇದೆ. ಕಚೇರಿ ಅಡಿ ಮರಬನಹಳ್ಳಿ, ದಾಗಿನಕಟ್ಟೆ ಮತ್ತು ಪುಣ್ಯಸ್ಥಳದಲ್ಲಿ ಶಾಖಾ ಕಚೇರಿಗಳಿವೆ. ಅಲ್ಲಿಂದ ಬಂದ ಅಂಚೆಯ ಎಲ್ಲಾ ಸೇವೆಗಳನ್ನೂ ಇಲ್ಲಿಯೇ ನಿರ್ವಹಿಸಲಾಗುತ್ತಿದೆ. ಆದರೆ, ಈಗಿರುವ ಚಿಕ್ಕದಾದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಜಿಲ್ಲೆಯ ಅತಿ ದೊಡ್ಡ ಹೋಬಳಿ ಕೇಂದ್ರವಾದ ಬಸವಾಪಟ್ಟಣದಲ್ಲಿ ನೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಬೇಕು ಎನ್ನುತ್ತಾರೆ ಪೋಸ್ಟ್‌ ಮಾಸ್ಟರ್‌ ಎಚ್‌. ರಾಘವೇಂದ್ರ.

70 ವರ್ಷಗಳ ಹಿಂದೆ ಕಟ್ಟಿದ ಹಳೆಯ ಗ್ರಾಮ ಪಂಚಾಯಿತಿ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಅಲ್ಲಿ ಅಂಚೆ ಕಚೇರಿ ನಿರ್ಮಿಸಲು ಅನುಕೂಲವಾಗಿದೆ. ಅದರ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡದ ನಿವೇಶನ, ಸಂತೆ ಮೈದಾನದ ಮೇಲ್ಭಾಗದ ನಿವೇಶನಗಳಲ್ಲಿ ಯಾವುದಾದರೂ ನಿವೇಶನವನ್ನು ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಒದಗಿಸಬೇಕು. ಈ ನಿವೇಶನದಲ್ಲಿ ಸಂಸದರು ತಮ್ಮ ಅನುದಾನದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಿ ಕೊಡಬೇಕು ಎಂದು ನಿವೃತ್ತ ಶಿಕ್ಷಕ ಎಂ.ಎಸ್‌. ಸಂಗಮೇಶ್‌, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಎಲ್‌.ಜಿ. ಮಧುಕುಮಾರ್‌, ಶಿಕ್ಷಕ ಸಂಘದ ಅಧ್ಯಕ್ಷ ಏಜಾಜ್‌ ಅಹಮದ್‌, ಜಿಲ್ಲಾ ವಕ್ಫ್‌ ಬೋರ್ಡ್‌ ನಿರ್ದೇಶಕ ಆಲಂ ಪಾಷಾ, ಮರಬನಹಳ್ಳಿಯ ಚನ್ನಬಸಪ್ಪ, ಸಾಹಿತಿ ರಂಗನಗೌಡ, ದಾಗಿನಕಟ್ಟೆಯ ಗುರುಮೂರ್ತಿ ಹಾಗೂ ವಿವಿಧ ಶಾಲಾ ಶಿಕ್ಷಕರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT