ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸೇವೆ ಕಾಯಂಗೆ ಪೌರಕಾರ್ಮಿಕರ ಒತ್ತಾಯ

ಜಿಲ್ಲಾ ಪೌರಕಾರ್ಮಿಕರ ಸಂಘದ ಅನಿರ್ದಿಷ್ಟಾವಧಿ ಮುಷ್ಕರ
Last Updated 2 ಜುಲೈ 2022, 4:08 IST
ಅಕ್ಷರ ಗಾತ್ರ

ಚಿತ್ರದುರ್ಗ: ಸೇವೆ ಕಾಯಂ ಸೇರಿ ಸುರಕ್ಷತಾ ಕವಚಗಳು, ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರ ಕಲ್ಯಾಣ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಪೌರ ಕಾರ್ಮಿಕರ ಸಂಘ ಶುಕ್ರವಾರ ನಗರದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿತು.

ಇಲ್ಲಿನ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ‘ಸಫಾಯಿ ಕರ್ಮಾಚಾರಿ, ಸ್ವೀಪರ್ ಸೇರಿ ಪೌರಕಾರ್ಮಿಕರಿಗೆ ನೀಡುವ ಕಡಿಮೆ ಮಾಸಿಕ ವೇತನದಿಂದ ಮೂಲ ಅಗತ್ಯಗಳನ್ನು ಈಡೇರಿಸುವುದೇ ದುಸ್ತರವಾಗಿದೆ. ಆದ್ದರಿಂದ ಸೇವೆ ಕಾಯಂಗೊಳಿಸಿ ಸೌಲಭ್ಯ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಸರ್ಕಾರ ಗುತ್ತಿಗೆ ವ್ಯವಸ್ಥೆ ರದ್ದುಗೊಳಿಸಿ, ಸೇವೆ ಕಾಯಂ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಬಳಿಕ ಬಂದ ಸರ್ಕಾರಗಳು ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೇರ ಪಾವತಿ ಕಾರ್ಮಿಕರು, ಪೌರಕಾರ್ಮಿಕರು, ಹೊರ ಗುತ್ತಿಗೆ ಸೇರಿ ಎಲ್ಲ ಸ್ವಚ್ಚತಾ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಮಹಿಳಾ ಪೌರ ಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ವಿಶ್ರಾಂತಿ ಗೃಹದ ವ್ಯವಸ್ಥೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಗೃಹಭಾಗ್ಯ ಯೋಜನೆಯನ್ನು ಕಾಯಂ ನೌಕಕರಿಗೆ ಸೀಮಿತಗೊಳಿಸಿರುವುದರಿಂದ ಶೇ 85ರಷ್ಟು ಕಾರ್ಮಿಕರಿಗೆ ತಾರತಮ್ಯ ಮಾಡಿದಂತಾಗಿದೆ. ನಿವೃತ್ತರಿಗೆ ಮಾಸಿಕ ₹ 5 ಸಾವಿರ ನಿವೃತ್ತಿ ವೇತನ ಹಾಗೂ ಆರೋಗ್ಯ ಕಾರ್ಡ್‌ ವಿತರಿಸಬೇಕು’ ಎಂದು ಮನವಿ ಮಾಡಿದರು.

ಗುತ್ತಿಗೆ ಪೌರಕಾರ್ಮಿಕರು, ಲೋಡರ್ಸ್‌, ಕಸದ ವಾಹನ ಚಾಲಕರು, ಒಳ ಚರಂಡಿ ಸ್ವಚ್ಛತಾ ಕಾರ್ಮಿಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT