ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | ಇವಿಎಂ ನೆಪ ಹೇಳುತ್ತಿದ್ದ ವಿಪಕ್ಷಗಳಿಗೆ ಸಂಕಷ್ಟ: ಮೋದಿ

ಮತದಾನದ ವೇಳೆ ಬಿಜೆಪಿಗೆ ಅಭೂತಪೂರ್ವ ಬೆಂಬಲ: ಪ್ರಧಾನಿ ಮೋದಿ
Published 28 ಏಪ್ರಿಲ್ 2024, 16:06 IST
Last Updated 28 ಏಪ್ರಿಲ್ 2024, 16:06 IST
ಅಕ್ಷರ ಗಾತ್ರ

ದಾವಣಗೆರೆ: ‘ಇಷ್ಟು ದಿನಗಳ ಕಾಲ ಚುನಾವಣೆಗಳಲ್ಲಿ ಸೋತಾಗಲೆಲ್ಲ ವಿದ್ಯುನ್ಮಾನ ಮತ ಯಂತ್ರ (ಇವಿಎಂ)ಗಳು ಸರಿ ಇಲ್ಲ ಎಂಬ ನೆಪ ಹೇಳಿ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದ ಕಾಂಗ್ರೆಸ್‌ ಮತ್ತಿತರ ವಿಪಕ್ಷಗಳಿಗೆ ಸುಪ್ರೀಂ ಕೋರ್ಟ್‌ ಭಾರಿ ಹೊಡೆತ ನೀಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ಬಿಜೆಪಿಯ ದಾವಣಗೆರೆ ಮತ್ತು ಹಾವೇರಿ ಕ್ಷೇತ್ರಗಳ ಅಭ್ಯರ್ಥಿಗಳ ಪರ ಭಾನುವಾರ ಇಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಇವಿಎಂ ಸುರಕ್ಷಿತ ಮತ್ತು ನಂಬಿಕೆಗೆ ಅರ್ಹ’ ಎಂದು ಸುಪ್ರೀಂ ಕೋರ್ಟ್‌ ಹೇಳಿರುವುದು ವಿಪಕ್ಷಗಳನ್ನು ಪೇಚಿಗೆ ಸಿಲುಕಿಸಿದೆ’ ಎಂದರು.

‘ಇವಿಎಂ ವಿರುದ್ಧ ಆರೋಪ ಮಾಡುವುದನ್ನೇ ರೂಢಿ ಮಾಡಿಕೊಂಡಿದ್ದ ವಿಪಕ್ಷಗಳು ಈ ಬಾರಿ ಸೋತಾಗ ತಮ್ಮ ಕಾರ್ಯಕರ್ತರಿಗೆ ಯಾವ ಕಾರಣ ನೀಡಬೇಕು ಎಂಬ ಸಂಕಷ್ಟದಲ್ಲಿ ಸಿಲುಕಿಕೊಂಡಿವೆ’ ಎಂದು ಮೂದಲಿಸಿದರು.

‘ಏಪ್ರಿಲ್‌ 26ರಂದು ರಾಜ್ಯದಲ್ಲಿ ನಡೆದಿರುವ ಮೊದಲ ಹಂತದ ಮತದಾನದ ಸಂದರ್ಭ ಬಿಜೆಪಿಗೆ ದೊರೆತಿರುವ ಬೆಂಬಲವನ್ನು ಅವಲೋಕಿಸಿರುವ ಕಾಂಗ್ರೆಸ್‌ ಕಕ್ಕಾಬಿಕ್ಕಿಯಾಗಿದೆ. ಕಡೆಯ ಪಕ್ಷ ಎರಡನೇ ಹಂತದ ಮತದಾನದ ವೇಳೆ ಒಂದು ಕ್ಷೇತ್ರದಲ್ಲಾದರೂ ಜಯಿಸಿ ಖಾತೆ ತೆರೆಯಬೇಕೆಂಬ ತವಕದಲ್ಲಿದೆ. ಆದರೆ ಅದು ಸಾಧ್ಯವಾಗದು’ ಎಂದು ಹೇಳಿದರು. 

‘ಕೆಫೆಯಲ್ಲಿ ಬಾಂಬ್‌ ಸ್ಫೋಟವಾದಾಗ ‘ಸಣ್ಣ ಸಿಲಿಂಡರ್‌ ಸಿಡಿದಿತ್ತು, ಹಳೆಯ ವ್ಯಾಪಾರಿಗಳ ನಡುವಿನ ದ್ವೇಷದಿಂದ ಪಟಾಕಿ ಸಿಡಿಸಲಾಗಿತ್ತು’ ಎಂಬ ಸಬೂಬು ಹೇಳುತ್ತ ಮತ ಬ್ಯಾಂಕ್‌ ಬಗ್ಗೆ ಕಾಳಜಿ ತೋರುವ ಕಾಂಗ್ರೆಸ್‌ನಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅಪಾಯದಲ್ಲಿದೆ’ ಎಂದು ಮೋದಿ ಆರೋಪಿಸಿದರು.

‘ಮೋದಿ ಎಂದರೆ ಸುರಕ್ಷತೆ ಮತ್ತು ಅಭಿವೃದ್ಧಿ. ಮೋದಿ ಎಂದರೆ ವೈರಿಗಳ ಮನೆ ಹೊಕ್ಕು ಹೊಡೆಯುವವ‌. ಭಯೋತ್ಪಾದಕರನ್ನು ಮಟ್ಟ ಹಾಕಿದಂತೆಯೇ ಭ್ರಷ್ಟಾಚಾರವನ್ನೂ ನಿರ್ನಾಮ ಮಾಡುವ ಪಣ ತೊಟ್ಟಿರುವ ನಿಮ್ಮ ಮೋದಿ 24X7 ಅವಧಿಗೆ ಕೆಲಸ ಮಾಡುತ್ತ, ದೇಶವನ್ನು 2047ರೊಳಗೆ ಸಂಪೂರ್ಣ ಅಭಿವೃದ್ಧಿಪಡಿಸುವ ಗುರಿ ಹೊಂದಿದವ’ ಎಂದು ಹೇಳಿದರು.

‘ಕಳೆದ 10 ವರ್ಷಗಳ ಕಾಲ ಚುನಾವಣಾ ಪ್ರಚಾರಕ್ಕಾಗಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಬಾರಿ ಸುತ್ತಾಡಿದ್ದೇನೆ. ಈ ಬಾರಿ ಜನರ ಪ್ರತಿಕ್ರಿಯೆ ಅತ್ಯಂತ ಭಿನ್ನವಾಗಿದೆ. ಈಗ ನಿಮ್ಮೆದುರು ಇರುವುದು ನೀವು ಸಂಪೂರ್ಣ ಅರಿತಿರುವ ಮೋದಿ. ನಮಗಾಗಿ ಜೀವ ಕೊಡುವವ ಎಂಬ ಭಾವನೆ ನಿಮ್ಮಲ್ಲಿ ಮನೆಮಾಡಿದೆ’ ಎಂದು ತಿಳಿಸಿದರು.

‘ಮೋದಿಯ ಕಾರ್ಯವೈಖರಿಯನ್ನು ನೋಡಿರುವ ದೇಶದ 280 ಕೋಟಿ ಕಣ್ಣುಗಳು ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿವೆ ಎಂಬ ಭರವಸೆ ಇದೆ. ಸಾಕ್ಷಾತ್‌ ಪರಮಾತ್ಮನೇ ನನ್ನನ್ನು ನಿಮ್ಮ ಸೇವೆಗೆ ಕಳುಹಿಸಿದ್ದಾನೆ ಅನಿಸುತ್ತದೆ. ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದು, ನಿಮಗೆ ಕೃತಜ್ಞತೆ ವ್ಯಕ್ತಪಡಿಸಲು ನನ್ನಲ್ಲಿ ಶಬ್ದಗ ಳಿಲ್ಲ. ಮೌನದಿಂದಲೇ ಸ್ಮರಿಸುತ್ತ ತಲೆಬಾಗುವೆ. ಜನರ ಆಶೀರ್ವಾದ ಇರುವವರೆಗೆ ನಾನು ಕೆಲಸ ಮಾಡಲು ಆಯಾಸ ಪಡಲಾರೆ. ದುಷ್ಟರಿಗೆ ನನ್ನನ್ನು ತಡೆಯಲಾಗುವುದಿಲ್ಲ. ಅಂಥವರಿಗೆ ನಾನು ಜಗ್ಗುವುದೂ ಇಲ್ಲ’ ಎಂದು ಅವರು ಹೇಳಿದರು.

‘ಮಕ್ಕಳ ಭವಿಷ್ಯದೊಂದಿಗೆ ಕಾಂಗ್ರೆಸ್‌ ಚೆಲ್ಲಾಟ’ ‘ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದವರು ಕಾಂಗ್ರೆಸ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಆದರೂ ಕಾಂಗ್ರೆಸ್‌ ಅವರಿಗೆ ಸಲ್ಲಬೇಕಾದ ಹಣಕ್ಕೆ ಕನ್ನಹಾಕಿತು. ಮೀಸಲಿಟ್ಟ ₹ 1ರಲ್ಲಿ ಕೇವಲ 15 ಪೈಸೆ ಮಾತ್ರ ಆ ಸಮುದಾಯಗಳಿಗೆ ತಲುಪುತ್ತಿತ್ತು. ನೇರ ನಗದು ವರ್ಗಾವಣೆ ಪದ್ಧತಿ ಜಾರಿಯಾದಾಗಿನಿಂದ ಕಾಂಗ್ರೆಸ್‌ಗೆ ಹಣ ಹೊಡೆಯುವುದಕ್ಕೆ ಅವಕಾಶ ಸಿಗದಂತಾಗಿದೆ’ ಎಂದು ಪ್ರಧಾನಿ ಮೋದಿ ದೂರಿದರು. ‘ದೇಶದ ಅಭಿವೃದ್ಧಿಗೆ ಬ್ರೇಕ್‌ ಹಾಕುವುದು ಮತ್ತು ಏಕತೆಯನ್ನು ಮುರಿಯುವುದು ಕಾಂಗ್ರೆಸ್‌ನ ಗುರಿ. ರಾಷ್ಟ್ರೀಯ ಶಿಕ್ಷಣ ನೀತಿಗೆ ಬ್ರೇಕ್‌ ಹಾಕಿದ ಕಾಂಗ್ರೆಸ್‌ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕೆ ಬೀಗ ಜಡಿದು ಚೆಲ್ಲಾಟ ಆಡುತ್ತಿದೆ. ಮಕ್ಕಳ ಭವಿಷ್ಯ ಹಾಳು ಮಾಡುವ ಅಧಿಕಾರ ಯಾರಿಗೂ ಇಲ್ಲ. ಅಂಥವರಿಗಾಗಿ ನಿಮ್ಮ ಅಮೂಲ್ಯ ಮತವನ್ನು ಹಾಕಿ ಹಾಳು ಮಾಡಿಕೊಳ್ಳಬೇಡಿ’ ಎಂದು ಮನವಿ ಮಾಡಿದರು.

ಜನಿಸದೇ ಇರುವವರ ಹೆಸರಲ್ಲಿ ಭ್ರಷ್ಟಾಚಾರ! ‘ಕಾಂಗ್ರೆಸ್‌ ಪಕ್ಷ ಜನಿಸದೇ ಇರುವವರ ಹೆಸರಲ್ಲಿ ಹಲವಾರು ವರ್ಷಗಳ ಕಾಲ ಹಣ ಲಪಟಾಯಿಸಿ ಅನ್ಯಾಯ ಎಸಗಿದೆ. ಅಂಥ 10 ಕೋಟಿ ಹೆಸರುಗಳನ್ನು ಗುರುತಿಸಿ ನಾವು ತೆಗೆದುಹಾಕಿದೆವು‌’ ಎಂದು ಮೋದಿ ಹೇಳಿದರು. ‘ಜನಿಸದೇ ಇದ್ದವರಿಗೆ ಸರ್ಕಾರಿ ಖಜಾನೆಯಿಂದ ಸಾವಿರಾರು ಕೋಟಿ ಅನುದಾನ ಮೀಸಲಿಟ್ಟಿದ್ದ ಕಾಂಗ್ರೆಸ್ಸಿಗರು ಅದರಿಂದ ತಮ್ಮ ಜೇಬನ್ನು ತುಂಬಿಸಿಕೊಂಡಿದ್ದರು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT