ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಖಾಸಗಿ ಬಸ್ ಮಾಲೀಕರು

ರಸ್ತೆಗಿಳಿದ ಖಾಸಗಿ ಬಸ್ l ಡೀಸೆಲ್ ದರ ಏರಿಕೆ l ಪ್ರಯಾಣ ದರವೂ ಹೆಚ್ಚಳ
Last Updated 5 ಜುಲೈ 2021, 7:10 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಕಾರಣದಿಂದಾಗಿ ಆದ ಲಾಕ್‌ಡೌನ್‌ನಿಂದಾಗಿ ಖಾಸಗಿ ಬಸ್‌ಗಳ ಮಾಲೀಕರು, ಚಾಲಕರು ಸಂಕಷ್ಟದಲ್ಲಿದ್ದಾರೆ. ಎರಡು ತಿಂಗಳು ಬಸ್‌ಗಳು ನಿಂತಿದ್ದರಿಂದ ಟೈರ್‌ ಹಾಗೂ ಬಿಡಿ ಭಾಗಗಳು ಹಾಳಾಗಿವೆ. ಇವುಗಳನ್ನು ದುರಸ್ತಿಪಡಿಸಿ ರಸ್ತೆಗೆ ಇಳಿಸುವುದು ಮಾಲೀಕರಿಗೆ ಹೊರೆಯಾಗಿದೆ. ಅಲ್ಲದೇ ಹೆಚ್ಚುತ್ತಿರುವ ತೆರಿಗೆ, ಬ್ಯಾಂಕಿನ ಸಾಲದ ಕಂತು ತುಂಬಲು ಹರಸಾಹಸಪಡುತ್ತಿದ್ದಾರೆ.

ಈ ಬಸ್‌ಗಳನ್ನೇ ಅವಲಂಬಿಸಿರುವ ಸಾವಿರಾರು ಚಾಲಕರು, ಏಜೆಂಟರು ಹಾಗೂ ಕಂಡಕ್ಟರ್‌ಗಳು ತರಕಾರಿ ವ್ಯಾಪಾರ, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೊರೊನಾ ಮೊದಲ ಅಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದ ಬಸ್ ಮಾಲೀಕರನ್ನು ಎರಡನೇ ಅಲೆಯೂ ನಷ್ಟದ ಕೂಪಕ್ಕೆ ತಳ್ಳಿದೆ. ಈ ನಡುವೆ ಮೂಲೆ ಸೇರಿದ್ದ ಬಸ್‌ಗಳ ಪೈಕಿ 30 ಬಸ್‌ಗಳನ್ನು ಮಾಲೀಕರು ದುರಸ್ತಿಪಡಿಸಿ ಜುಲೈ 1ರಿಂದ ರಸ್ತೆಗಿಳಿಸಿದ್ದಾರೆ.

ಗ್ರಾಮೀಣ ಭಾಗಗಳಲ್ಲಿ ಜನರು ಸಂಚಾರಕ್ಕೆ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಸಣ್ಣ ಸಣ್ಣ ರಸ್ತೆಗಳಲ್ಲೂ ಬಹುತೇಕ ಗ್ರಾಮಗಳಿಗೆ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಕೈತೋರಿಸಿದಲ್ಲಿ ಚಾಲಕರು ನಿಲ್ಲಿಸುವುದರಿಂದ ಹಾಗೂ ಲಗೇಜ್‌ಗಳನ್ನು ಒಯ್ಯುವುದರಿಂದ ಖಾಸಗಿ ಬಸ್‌ಗಳು ಗ್ರಾಮೀಣ ಪ್ರದೇಶಗಳ ಜನರಿಗೆ ಇನ್ನಷ್ಟು ಹತ್ತಿರವಾಗಿವೆ.

‘ಶಾಲಾ ಮಕ್ಕಳಿಗೆ, ಅಂಗವಿಕಲರಿಗೆ ರಿಯಾಯಿತಿ ದರದಲ್ಲಿ ಸೇವೆ ಮಾಡುತ್ತಾ ಬಂದಿದ್ದೇವೆ. ಕೆಎಸ್‌ಆರ್‌ಟಿಸಿ ನೌಕರರು ಮುಷ್ಕರ ಕೈಗೊಂಡಿದ್ದ ಸಮಯದಲ್ಲೂ ಖಾಸಗಿ ಬಸ್‌ಗಳ ಸೇವೆ ಒದಗಿಸಿ ಮಾನ ಕಾಪಾಡಿದ್ದೇವೆ. ಆದರೆ ಈಗ ನಮ್ಮ ಮಾನ ಕಾಪಾಡುವುದು ಸರ್ಕಾರದ ಕರ್ತವ್ಯ ಎಂಬುದು’ ಬಸ್ ಮಾಲೀಕರ ವಾದ.

ತೆರಿಗೆ ಹೊರೆ: ‘ಖಾಸಗಿ ಬಸ್‌ಗಳಿಗೆ ಮುಖ್ಯವಾಗಿ ಹೊರೆಯಾಗಿರುವುದು ತೆರಿಗೆ.ಒಂದು ಬಸ್‌ಗೆ 3 ತಿಂಗಳಿಗೆ ₹47 952 ತೆರಿಗೆಯನ್ನು ಮುಂಗಡವಾಗಿ ಕಟ್ಟಬೇಕು. ಎರಡು ತಿಂಗಳು ಬಸ್ ನಿಂತಿದ್ದರಿಂದ ಯಾವುದೇ ಆದಾಯವಿಲ್ಲ. ಸರ್ಕಾರ ಶೇ 100ರಷ್ಟು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಿರುವುದರಿಂದ ಅನುಕೂಲವಾಗುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರು ಬರಲು ಇನ್ನಷ್ಟು ಕಾಲಾವಕಾಶ ಬೇಕಾಗುತ್ತದೆ’ ಎಂದು ಬಸ್ ಮಾಲೀಕರು ಹೇಳುತ್ತಾರೆ.

ಡೀಸೆಲ್ ದರ ಏರಿಕೆ: ‘ಹೆಚ್ಚುತ್ತಿರುವ ಡೀಸೆಲ್ ಬೆಲೆ ಏರಿಕೆಯಿಂದಾಗಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯುವುದು ದುಸ್ತರವಾಗಿದೆ. 2020ರ ಜುಲೈ ತಿಂಗಳಲ್ಲಿ ಡೀಸೆಲ್
ದರ ಒಂದು ಲೀಟರ್‌ಗೆ ₹ 75 ಇತ್ತು. ಇಂದು ₹ 96 ಆಗಿದೆ. ರಾಜ್ಯ ಸರ್ಕಾರಕ್ಕೆ ₹26 ಹಾಗೂ ಕೇಂದ್ರ ಸರ್ಕಾರಕ್ಕೆ ₹34 ತೆರಿಗೆ ಸಂದಾಯವಾಗುತ್ತಿದ್ದರೂ ತೆರಿಗೆಯಲ್ಲಿ ಯಾವುದೇ ರಿಯಾಯಿತಿ ನೀಡಿಲ್ಲ’ ಎಂಬುದು ಮಾಲೀಕರ ಅಳಲು.

ಬ್ಯಾಂಕ್ ಸಾಲದ ಕಂತು: ಖಾಸಗಿ ಬಸ್ ಮಾಲೀಕರಿಗೆ ಬ್ಯಾಂಕ್ ಸಾಲದ ಕಂತು ತುಂಬುವುದು ಹೊರೆಯಾಗಿದೆ.
ಸಾಲ ಮಾಡಿ ಬಸ್ ಖರೀದಿಸಿರುತ್ತಾರೆ. ಪ್ರತಿ ತಿಂಗಳು
ಇಂತಿಷ್ಟು ಹಣ ಕಟ್ಟಬೇಕು. ಬಸ್‌ಗಳು ಸ್ಥಗಿತಗೊಂಡರೆ ಯಾವುದೇ ಆದಾಯವಿಲ್ಲದೇ ಕಂತು ತುಂಬುವುದು ದುಸ್ತರವಾಗಿದೆ. ಇವುಗಳಲ್ಲದೇ ವಾಹನಗಳ ಬಿಡಿಭಾಗಗಳು, ಟೈರ್‌, ಬ್ಯಾಟರಿಗಳ ದುರಸ್ತಿಗೂ ಹಣ ಖರ್ಚು ಮಾಡಬೇಕಾಗುತ್ತದೆ.

ನೆರವಿಗೆ ಬಾರದ ಸರ್ಕಾರ

ನ್ಯಾಮತಿ: ನ್ಯಾಮತಿ ಮೂಲಕ ಪ್ರತಿದಿನ ಸುಮಾರು 50 ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದು, ಶಿವಮೊಗ್ಗ, ದಾವಣಗೆರೆ, ಶಿಕಾರಿಪುರ, ರಾಣೆಬೆನ್ನೂರು, ಹಾವೇರಿಗೆ ಸಂಚರಿಸಲು ಅನುಕೂಲವಿತ್ತು. ಕೋವಿಡ್ ಕಾರಣದಿಂದ ಬಸ್ ಸಂಚಾರ ಸ್ಥಗಿತಗೊಂಡ ನಂತರ ಪ್ರಯಾಣಕ್ಕೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಬಂದಿದೆ.

‘ಲಾಕ್‌ಡೌನ್ ಆದಾಗಿನಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ಇದನ್ನೇ ಅವಲಂಬಿಸಿದ್ದ ಬಸ್ ಚಾಲಕರು, ಏಜೆಂಟರು, ಸವಳಂಗ, ನ್ಯಾಮತಿ ಸ್ಟಾಂಡ್ ಏಜೆಂಟರ ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ಸರ್ಕಾರವಾಗಲಿ ಅಥವಾ ಸ್ಥಳೀಯ ಶಾಸಕರು ನಮ್ಮ ನೆರವಿಗೆ ಬರಲಿಲ್ಲ’ ಎಂದು ಸ್ಟಾಂಡ್ ಏಜೆಂಟ್‌ರಾದ ಜೆ. ಚನ್ನಮಲ್ಲಿಕಾರ್ಜುನ, ಮಂಜಪ್ಪ, ಎಚ್.ಪರಮೇಶ್ವರಪ್ಪ, ಎಸ್.ಶಂಭುಲಿಂಗ, ಸೋಗಿರಾಜು, ಕೃಷ್ಣಮೂರ್ತಿ, ಶೆಟ್ಟಿ ಸತೀಶ, ಎಚ್.ಹನುಮೇಶ, ಮಹೇಶ, ಬಾಂಬೆ ನಾಗರಾಜ ಅಲವತ್ತುಕೊಳ್ಳುತ್ತಾರೆ.

ಟ್ರ್ಯಾಕ್ಟರ್‌ಗಳತ್ತ ಮುಖ ಮಾಡಿದ ಚಾಲಕರು

ಹರಪನಹಳ್ಳಿ: ಎರಡು ತಿಂಗಳಿನಿಂದ ಖಾಸಗಿ ಬಸ್ ಸ್ಥಗಿತಗೊಂಡಿದ್ದರಿಂದ ಇವುಗಳನ್ನೇ ನಂಬಿಕೊಂಡಿದ್ದ ಚಾಲಕರು ಮತ್ತು ನಿರ್ವಾಹಕರು ಕೂಲಿಯಿಲ್ಲದೇ ಅನ್ಯ ಕೆಲಸಗಳತ್ತ ಮುಖ ಮಾಡಿದ್ದಾರೆ.

ಕೆಲವರು ಆಟೋ ಖರೀದಿಸಿದ್ದರೆ, ಉಳಿದವರು ಟ್ರ್ಯಾಕ್ಟರ್, ಲಾರಿ ಓಡಿಸುತ್ತಿದ್ದಾರೆ. ಕೃಷಿ ಕೆಲಸಗಳತ್ತ ಮುಖ ಮಾಡಿದ್ದಾರೆ. ನಿರ್ವಾಹಕರು, ಕ್ಲೀನರ್ ಆಗಿದ್ದವರು ಈಗ ತಮ್ಮ ಊರುಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ಹೇಳಿದರು.

ಖಾಸಗಿ ಬಸ್‌ ನಿಲ್ಲಿಸುವ ಸ್ಥಳದಲ್ಲಿದ್ದ ರವಿ ಹೋಟೆಲ್‌ನ ರವಿ, ‘ಹೋಟೆಲ್‌ಗಳಿಗೆ ಗ್ರಾಹಕರಿಲ್ಲದೇ ಮಾಡಿದ ತಿಂಡಿ, ಎಗ್‌ರೈಸ್‌, ಊಟ ಹಾಗೆಯೇ ಉಳಿಯುತ್ತಿದೆ. ಸಾರಿಗೆ ಬಸ್‌ಗಳು ಓಡಿದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತದೆ’ ಎಂದು ತಿಳಿಸಿದರು.

ಸಾಲದ ಕಂತು ಪಾವತಿಸಲು ಹರಸಾಹಸ

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಲ್ಲಿ ಒಟ್ಟು ನೂರಕ್ಕೂ ಹೆಚ್ಚು ಖಾಸಗಿ ಬಸ್‌ಗಳಿದ್ದು, ಚಾಲಕರು, ನಿರ್ವಾಹಕರು ಸೇರಿ ಒಟ್ಟು 200ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

‘ಮನೆಯಲ್ಲಿ ವಯಸ್ಸಾದ ತಂದೆ, ತಾಯಿ, ಸಣ್ಣ ಮಕ್ಕಳು ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುವುದು ಎಂದರೆ ಸುಮ್ಮನೇನಾ’ ಎಂದು ಪ್ರಶ್ನಿಸುತ್ತಾರೆಹೊನ್ನಾಳಿ ಖಾಸಗಿ ಬಸ್ ಸ್ಟ್ಯಾಂಡ್ ಏಜೆಂಟ್ ಕೆ.ನಿಂಗಪ್ಪ.

‘ಬಸ್ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದ್ದರೂ ಪ್ರಯಾಣಿಕರು ಬಸ್ ಹತ್ತುವ ಮನಸ್ಸು ಮಾಡುತ್ತಿಲ್ಲ. ಒಂದು, ಎರಡನೇ ಅಲೆಗಳಿಂದ ಇಷ್ಟು ಕೆಟ್ಟ ಪರಿಸ್ಥಿತಿ ಎದುರಿಸಿದ್ದೇವೆ. ಮೂರನೇ ಅಲೆ ಬಂದರೆ ಜೀವನ ನಿರ್ವಹಣೆ ಹೇಗೆ ಮಾಡಬೇಕು ಎಂಬ ಚಿಂತೆ ಕಾಡುತ್ತಿದೆ’ ಎನ್ನುತ್ತಾರೆ ನಿಂಗಪ್ಪ.

ಖಾತ್ರಿ ಕೆಲಸಕ್ಕೆ ಇಳಿದ ಕಂಡಕ್ಟರ್‌ಗಳು

ಸಂತೇಬೆನ್ನೂರು: ಗ್ರಾಮೀಣ ಜನತೆಯ ಬದುಕಿನ ಅಂಗವೇ ಆಗಿದ್ದ ಖಾಸಗಿ ಬಸ್‌ಗಳನ್ನು ಸಾವಿರಾರು ಪ್ರಯಾಣಿಕರು ಅವಲಂಬಿಸಿದ್ದು, ನೂರಾರು ಕಾರ್ಮಿಕರ ಬದುಕಿನ ಬಂಡಿಗಳಾಗಿದ್ದವು. ನಷ್ಟದ ಮಡುವಿನಲ್ಲಿರುವ ಮಾಲೀಕರು, ನೌಕರರ ನೋವಿಗೆ ಯಾರಲ್ಲೂ ಉತ್ತರವಿಲ್ಲ.

‘ಬಸ್ ಏಜೆಂಟ್, ಡ್ರೈವರ್, ಕಂಡರ್‌ಗಳು ಅನೇಕರು ಉದ್ಯೋಗ ಖಾತ್ರಿ ಕೂಲಿಗಳಾಗಿದ್ದಾರೆ. ಕಟ್ಟಡ ಕಾರ್ಮಿಕ ಕೆಲಸಕ್ಕೆ ತೆರಳಿದ್ದಾರೆ. ಲಾಕ್‌ಡೌನ್‌ನಿಂದ ಮತ್ತೆ ಜೀವನಕ್ಕೆ ಸಂಚಕಾರ ಬಂದಿದೆ’ ಎನ್ನುತ್ತಾರೆ ಸೋಮಲಾಪುರದ ವೀರೇಶ್. ‘ಕೆಎಸ್ಆರ್‌ಟಿಸಿ ಬಸ್‌ಗಳ ಸಂಚಾರದಿಂದ ಖಾಸಗಿ ಬಸ್ ಪ್ರಯಾಣಿಕರ ಇಳಿಮುಖವಾಗಿದೆ’ ಎನ್ನುತ್ತಾರೆ ಬಸ್ ಮಾಲೀಕ ಸಂತೋಷ್.

ಪ್ರಯಾಣಿಕರು ಬರುವುದು ಅನುಮಾನ

ಚನ್ನಗಿರಿ: ಲಾಕ್‌ಡೌನ್‌ನಿಂದಾಗಿಎರಡು ತಿಂಗಳು ಒಂದೇ ಒಂದು ಖಾಸಗಿ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಇದರಿಂದಾಗಿಕೆಲವು ಚಾಲಕರು, ನಿರ್ವಾಹಕರು ಕುಟುಂಬಗಳ ನಿರ್ವಹಣೆಗಾಗಿ ಗಾರೆ ಕೆಲಸ, ತರಕಾರಿ ತರುವ ಲಗೇಜ್‌ ಆಟೊಗಳನ್ನು ಓಡಿಸಬೇಕಾದ ಪರಿಸ್ಥಿತಿ ಇತ್ತು.

‘ಜೀವನದ ನಿರ್ವಹಣೆಗಾಗಿ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದರಿಂದ ತುಂಬಾ ತೊಂದರೆ ಅನುಭವಿಸಬೇಕಾಯಿತು’ ಎನ್ನುತ್ತಾರೆ ಖಾಸಗಿ ಬಸ್ ನಿರ್ವಾಹಕ ತೀರ್ಥಪ್ಪ.

‘ಇನ್ನು ಪ್ರಯಾಣಿಕರು ಖಾಸಗಿ ಬಸ್‌ಗಳಲ್ಲಿ ಸಂಚರಿಸಲು ಮುಂದಾಗುತ್ತಿಲ್ಲ. ಸಹಜ ಪರಿಸ್ಥಿತಿಗೆ ಮರಳಲು ಇನ್ನೂ 15–20 ದಿನಗಳು ಬೇಕಾಗುತ್ತವೆ. ಅಲ್ಲಿಯವರೆಗೆ ಖಾಸಗಿ ಬಸ್‌ಗಳಿಗೆ ಆದಾಯವಿಲ್ಲ’ ಎಂದು ಖಾಸಗಿ ಬಸ್ ಮಾಲೀಕ ವಾಸೀಮ್ ತಿಳಿಸಿದರು.

ಶೇ 20ರಷ್ಟು ಪ್ರಯಾಣ ದರ ಏರಿಕೆ

ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಪ್ರಯಾಣ ದರ ಸೋಮವಾರದಿಂದ ಶೇ 20ರಷ್ಟು ಏರಿಕೆಯಾಗಲಿದೆ.

‘2020ರ ಜುಲೈ ತಿಂಗಳಲ್ಲಿ ಡೀಸೆಲ್ ದರ ಒಂದು ಲೀಟರ್‌ಗೆ ₹ 75 ಇತ್ತು. ಸರ್ಕಾರದ ಅಂದಿನ ಆದೇಶದ ಪ್ರಕಾರ6.5 ಕಿ.ಮೀ ₹10 ತೆಗೆದುಕೊಳ್ಳಬೇಕು. ನಂತರದ ಪ್ರತಿ ಕಿ.ಮೀಗೆ ₹1.10 ಹೆಚ್ಚಿಸುತ್ತಾ ಹೋಗಬೇಕು. ಇದೇ ದರದಲ್ಲಿ ಬಸ್‌ ಪ್ರಯಾಣ ದರ ಹೆಚ್ಚಿಸಲಾಗಿದೆ’ ಎಂದುದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಂಜುನಾಥ ಕಮ್ಮತಹಳ್ಳಿ ಹಾಗೂ ಕಾರ್ಯದರ್ಶಿ ಎಂ.ಆರ್. ಸತೀಶ್ ಮಾಹಿತಿ ನೀಡಿದರು.

ಆಟೊಗಳ ಮೊರೆಹೋದ ಪ್ರಯಾಣಿಕರು

ಮಲೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಖಾಸಗಿ ಬಸ್ ರಸ್ತೆಗಿಳಿದು ಪ್ರಯಾಣಿಕರನ್ನು ಹೊತ್ತು ಸಂಚರಿಸಲಿಲ್ಲ. ದೇವರಬೆಳಕೆರೆ ಮೂಲಕ ದಾವಣಗೆರೆಗೆ ಹೋಗುವುದು ಸೇರಿದಂತೆ, ಜಿಗಳಿ, ಕುಂಬಳೂರು, ನಂದಿಗುಡಿ, ಗೋವಿನಹಾಳ್, ಸಿರಿಗೆರೆ, ಕೊಕ್ಕನೂರು, ಹಿರೆಹಾಲಿವಾಣ, ಹರಳಹಳ್ಳಿ, ಬನ್ನಿಕೋಡು ಗ್ರಾಮದ ಮೂಲಕ ಸಂಚರಿಸುವ ಖಾಸಗಿ ಬಸ್ ಸೇವೆ ನೀಡಲಿಲ್ಲ. ಖಾಸಗಿ ಬಸ್ ಸಂಚರಿಸುತ್ತವೆ ಎಂದು ಕಾಯುತ್ತಿದ್ದ ಪ್ರಯಾಣಿಕರು, ಸಾರ್ವಜನಿಕರು ಆಟೊ ಬಳಸಿ ದೈನಂದಿನ ವ್ಯವಹಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT