ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆ ಒಪಿಡಿ ಬಹುತೇಕ ಬಂದ್‌

ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವೈದ್ಯರ ವಿರೋಧ
Last Updated 28 ಜುಲೈ 2018, 13:38 IST
ಅಕ್ಷರ ಗಾತ್ರ

ದಾವಣಗೆರೆ: ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಶನಿವಾರ ಬಂದ್‌ಗೆ ಕರೆ ನೀಡಿದ್ದರಿಂದ ವೈದ್ಯರು ಕೆಲಸಕ್ಕೆ ಬಂದಿರಲಿಲ್ಲ. ಹೀಗಾಗಿ ಜಿಲ್ಲೆಯ ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಲ್ಲಿ ಹೊರರೋಗಿಗಳ ವಿಭಾಗ ದಿನವಿಡೀ ಕಾರ್ಯನಿರ್ವಹಿಸದೇ ಇರುವುದರಿಂದ ಹೊರ ಊರುಗಳಿಂದ ಬಂದ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಯಿತು.

ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಎಂದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವೈದ್ಯರನ್ನು ನಿಯೋಜಿಸಿತ್ತು. ಜೊತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಜಿಲ್ಲೆಯಲ್ಲಿ ಚಿಕಿತ್ಸೆ ಲಭಿಸದೇ ಯಾವುದೇ ರೀತಿಯ ಅನಾಹುತ ನಡೆದ ಬಗ್ಗೆ ವರದಿಯಾಗಿಲ್ಲ.

ನಗರದ ಸಿಟಿ ಮೆಡಿಕಲ್‌ ಸೆಂಟರ್‌, ಸಿಟಿ ಸೆಂಟರ್‌ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಸೇರಿ ಹಲವು ಪ್ರಮುಖ ಆಸ್ಪತ್ರೆಗಳ ಒಪಿಡಿ ಬೆಳಿಗ್ಗೆಯಿಂದಲೇ ಕಾರ್ಯನಿರ್ವಹಿಸಲಿಲ್ಲ. ಹಲವು ಕ್ಲಿನಿಕ್‌ಗಳ ಬಾಗಿಲನ್ನೂ ವೈದ್ಯರು ತೆಗೆದಿರಲಿಲ್ಲ. ಲ್ಯಾಬ್‌ಗಳ ಬಾಗಿಲು ಮುಚ್ಚಿದ್ದವು. ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ರೋಗಿಗಳು ಬಂದು ವೈದ್ಯರ ಲಭ್ಯತೆ ಇಲ್ಲದಿರುವುದರಿಂದ ವಾಪಸ್‌ ಹೋಗುತ್ತಿರುವ ದೃಶ್ಯ ಕಂಡು ಬಂತು. ಬಾಪೂಜಿ ಆಸ್ಪತ್ರೆ ಹಾಗೂ ಎಸ್‌.ಎಸ್‌. ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಒಪಿಡಿಯಲ್ಲಿ ರೋಗಿಗಳ ತಪಾಸಣೆ ನಡೆಸಿದರು.

ಹಲವು ಆಸ್ಪತ್ರೆ, ಕ್ಲಿನಿಕ್‌ ಹಾಗೂ ಲ್ಯಾಬ್‌ಗಳಿರುವ ಪಿ.ಜೆ. ಬಡಾವಣೆಯ ಒಂದನೇ ಮುಖ್ಯ ರಸ್ತೆಯು ಪ್ರತಿ ದಿನವೂ ರೋಗಿಗಳಿಂದ ತುಂಬಿ ಗಿಜಿಗುಡತ್ತಿತ್ತು. ಆದರೆ, ವೈದ್ಯರ ಮುಷ್ಕರದ ಪರಿಣಾಮ ಶನಿವಾರ ಈ ರಸ್ತೆ ಬಿಕೊ ಎನ್ನುತ್ತಿತ್ತು.

‘ಮಗನಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಶುಕ್ರವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಿದ್ದೆ. ವೈದ್ಯರು ಬಂದು ಸ್ಕ್ಯಾನಿಂಗ್‌ ಮಾಡಿಸುವಂತೆ ಸಲಹೆ ನೀಡಿದ್ದರು. ಆದರೆ, ಮುಷ್ಕರ ಇರುವುದರಿಂದ ಸ್ಕ್ಯಾನಿಂಗ್‌ ಮಾಡಿಸಲು ಲ್ಯಾಬ್‌ನ ಬಾಗಿಲನ್ನೇ ತೆರೆದಿಲ್ಲ’ ಎಂದು ಹೊನ್ನಾಳಿ ತಾಲ್ಲೂಕಿನ ರಾಂಪುರದ ರಾಜಶೇಖರ್‌ ‘ಪ್ರಜಾವಾಣಿ’ಗೆ ಬಳಿ ಅಳಲು ತೋಡಿಕೊಂಡರು.

‘ಮಧು ಮೇಹ ತಪಾಸಣೆ ನಡೆಸಲು ತಾಯಿಯನ್ನು ಕರೆದುಕೊಂಡು ಬಂದಿದ್ದೆ. ಆದರೆ, ವೈದ್ಯರು ಹಾಗೂ ಲ್ಯಾಬ್‌ನ ಸಿಬ್ಬಂದಿ ಆಸ್ಪತ್ರೆಗೆ ಬಂದಿಲ್ಲವಂತೆ. ಹೀಗಾಗಿ ವಾಪಸ್‌ ಹೋಗುತ್ತಿದ್ದೇವೆ’ ಎಂದು ನಗರದ ಅಬ್ದುಲ್‌ ತಿಳಿಸಿದರು.

ಹೆಚ್ಚದ ರೋಗಿಗಗಳ ಸಂಖ್ಯೆ:

‘ಸಾಮಾನ್ಯವಾಗಿ ಶನಿವಾರ ರೋಗಿಗಳ ಸಂಖ್ಯೆ ಕಡಿಮೆ ಇರುತ್ತದೆ. ಅದರಲ್ಲೂ ಶುಕ್ರವಾರ ರಾತ್ರಿ ಗ್ರಹಣ ಇದ್ದಿದ್ದರಿಂದ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಬಂದಂತಿಲ್ಲ. ಮಧ್ಯಾಹ್ನದವರೆಗೆ ಕೇವಲ 750 ಹೊರ ರೋಗಿಗಗಳು ಬಂದಿದ್ದರು. ಸಾಮಾನ್ಯವಾಗಿ ಶನಿವಾರ 1,500ದವರೆಗೆ ಹೊರರೋಗಿಗಳು ಬರುತ್ತಾರೆ. ಸೋಮವಾರದಿಂದ ಶುಕ್ರವಾರದವರೆಗೆ ನಿತ್ಯ ಸುಮಾರು 3000 ಹೊರ ರೋಗಿಗಳು ಬರುತ್ತಾರೆ. ಖಾಸಗಿ ಆಸ್ಪತ್ರೆಗಳು ಬಂದ್‌ ಇದ್ದುದರಿಂದ ನಮ್ಮಲ್ಲಿ ರೋಗಿಗಳ ಸಂಖ್ಯೆಯೂ ಹೆಚ್ಚಾಗಿಲ್ಲ’ ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT