ಬುಧವಾರ, ಮಾರ್ಚ್ 3, 2021
19 °C
ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ರಾಷ್ಟ್ರೀಯ ಕನ್ವೀನರ್ ನಂದಾಮಾತ್ರಾ

ಏಕವ್ಯಕ್ತಿ ಪ್ರದರ್ಶನದಿಂದ ಗ್ರಾಮಸ್ವರಾಜ್‌ ವ್ಯವಸ್ಥೆಗೆ ಧಕ್ಕೆ: ನಂದಾಮಾತ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೇಶದಲ್ಲಿ ಏಕವ್ಯಕ್ತಿ ಪ್ರದರ್ಶನದಿಂದ ಗ್ರಾಮ ಸ್ವರಾಜ್ ವ್ಯವಸ್ಥೆಯೇ ಇಲ್ಲದಂತಾಗಿದೆ. ಅಧಿಕಾರ ವಿಕೇಂದ್ರೀಕರಣ ಮರೀಚಿಕೆ ಆಗುತ್ತಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅಧಿಕಾರ ವಿಕೇಂದ್ರೀಕರಣವನ್ನು ಗಟ್ಟಿಗೊಳಿಸಬೇಕು ಎಂದು ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆ ರಾಷ್ಟ್ರೀಯ ಸಂಚಾಲಕಿ ನಂದಾಮಾತ್ರಾ ತಿಳಿಸಿದರು.

ಇಲ್ಲಿನ ಬಾಪೂಜಿ ಅತಿಥಿ ಗೃಹದಲ್ಲಿ ಭಾನುವಾರ ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮಗಾಂಧಿಜಿ ಗ್ರಾಮಸ್ವರಾಜ್‌ ಕಲ್ಪನೆ ಇಟ್ಟುಕೊಂಡು ಗ್ರಾಮಗಳತ್ತ ತೆರಳಿದರು. ಅದು ಅರ್ಧಕ್ಕೆ ನಿಲ್ಲಬಾರದು. ಅದಕ್ಕಾಗಿ ಪಂಚಾಯತ್‍ರಾಜ್ ಸಂಘಟನೆಯ ಕಾರ್ಯಕರ್ತರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹಳ್ಳಿಗಳಿಗೆ ತೆರಳಬೇಕು. ಗಾಂಧೀಜಿಯ ಪರಿಕಲ್ಪನೆಯನ್ನು ಗಟ್ಟಿಗೊಳಿಸಬೇಕು. ಪ್ರತಿ ಐದು ಪಂಚಾಯಿತಿಗಳಿಗೆ ಒಬ್ಬರನ್ನು ಸಂಘಟನೆಯ ಮುಖಂಡರನ್ನಾಗಿ ಮಾಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಚುನಾವಣೆಗಳಲ್ಲಿ ಗೆದ್ದವರಿಗೆ ಮಾನ್ಯತೆ ನೀಡುವಷ್ಟೇ ಸೋತವರಿಗೂ ಮಾನ್ಯತೆ ನೀಡಬೇಕು. ಅವರನ್ನು ಗುರುತಿಸಿ ಸಂಘಟನೆಯ ಕೆಲಸಕ್ಕೆ ತೊಡಗಿಸಿಕೊಳ್ಳಬೇಕು. ಸಕ್ರಿಯರಾಗಿರುವವರನ್ನು ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಸದಸ್ಯರನ್ನಾಗಿ ಮಾಡಬೇಕು. ಒಂದು ತಿಂಗಳ ಒಳಗೆ ಎಲ್ಲರ ಒಂದು ಸಂವಾದ ಮಾಡಿ. ಈ ವ್ಯವಸ್ಥೆಯನ್ನು ಜನರ ಬಳಿಗೆ ಒಯ್ಯುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ‘ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಸಂಘಟನೆ ಉತ್ತಮ ರೀತಿಯಲ್ಲಿದೆ. ಇದಕ್ಕೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿರುವುದೇ ಸಾಕ್ಷಿ’ ಎಂದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ‘ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ರಾಜ್ಯಕ್ಕೆ ಸಿಗಬೇಕಾದ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ದೂರಿದರು.

ಜಿಲ್ಲಾ ಸೇವಾದಳದ ಸಂಚಾಲಕ ಡೋಲಿ ಚಂದ್ರು, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಬಸವರಾಜ್ ಬೆಳ್ಳೂಡಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕರಾದ ರಾಘವೇಂದ್ರ ಗೌಡ ಉರ್ಲುಕಟ್ಟೆ ಮಾತನಾಡಿದರು.

ರಾಜೀವ್‍ಗಾಂಧಿ ಪಂಚಾಯತ್‍ರಾಜ್ ಸಂಘಟನೆಯ ಚನ್ನಗಿರಿಯ ರವಿಕುಮಾರ್, ಕುಬೇರಪ್ಪ, ರೋಹಿತ್, ಆರ್.ಕೆ.ಅಜಯ್, ಸಾರಥಿ ಗೋಣೇಶ್, ಬನ್ನಿಕೋಡು ಸುನೀಲ್, ನವೀನ್ ಜಗಳೂರು, ಯುವ ಕಾಂಗ್ರೆಸ್‍ನ ಸಾಗರ್ ಎಲ್.ಎಂ.ಎಚ್., ಮೈನುದ್ದೀನ್, ಸಾಜಿದ್, ಸಾಮಾಜಿಕ ಜಾಲತಾಣದ ಗೋವಿಂದ್ ಹಾಲೇಕಲ್ಲು, ಮಹಿಳಾ ಕಾಂಗ್ರೆಸ್‍ನ ರಾಜೇಶ್ವರಿ, ಕವಿತಾ ಚಂದ್ರಶೇಖರ್, ಉಮಾಕುಮಾರ್, ಜಯಮ್ಮ, ಪುಷ್ಪಾಲತಾ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು