ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕಳ್ಳತನ ಪ್ರಕರಣ: ವಾರಸುದಾರರ ಕೈ ಸೇರಿದ ₹ 4.59 ಕೋಟಿ ಮೌಲ್ಯದ ವಸ್ತು

Last Updated 11 ಜನವರಿ 2022, 8:00 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 2021ರಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಂಡ, ಚಿನ್ನ, ಬೆಳ್ಳಿಯ ಆಭರಣಗಳು, ನಗದು, ವಾಹನಗಳು ಸೇರಿ ₹ 4.59 ಕೋಟಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.

ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಡಿಎಆರ್ ಆವರಣದಲ್ಲಿ ಸೋಮವಾರ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ವಿವಿಧ ಠಾಣೆಗಳ ಪೊಲೀಸರು ವಶಪಡಿಸಿಕೊಂಡ ವಸ್ತುಗಳನ್ನು ಕಳೆದುಕೊಂಡವರಿಗೆ ನೀಡಿದರು.

ಕಳವಾದ ವಸ್ತು ಪಡೆಯಲು ವಾರಸುದಾರರಲ್ಲಿ ಎಲ್ಲಿಲ್ಲದ ಉತ್ಸಾಹ ಕಂಡುಬಂದಿತು. ತಮ್ಮ ವಸ್ತುಗಳನ್ನು ಪಡೆಯುವಾಗ ಮಂದಹಾಸವಿತ್ತು. ಪೊಲೀಸ್ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿಪ್ಪು ಹಂದಿಯ ಚಿಪ್ಪು, ಅಡಿಕೆ, ಗ್ಯಾಸ್‌ ಸಿಲಿಂಡರ್‌ಗಳು ಇದ್ದವು.

‘ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 250 ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು ನಗದು, ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ 100ರಷ್ಟನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ವಿಭಾಗದ ಸಿಬ್ಬಂದಿ ಹೆಚ್ಚಿನ ಶ್ರಮ ವಹಿಸಿದ್ದಾರೆ. ವಾಪಸ್ ಬರುವುದಿಲ್ಲ ಎಂದುಕೊಂಡವರು ಖುಷಿ ಪಟ್ಟಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದರು.

ಚೆಕ್‌ಪೋಸ್ಟ್, ನೈಟ್ ಬೀಟ್ ಹೆಚ್ಚಳ:‘ಜಿಲ್ಲೆಯಲ್ಲಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಲ್ಲಿ ಈಗಾಗಲೇ ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದ್ದು, ರಾತ್ರಿ ಗಸ್ತನ್ನು ಜಿಲ್ಲೆಯಲ್ಲಿ ಹೆಚ್ಚಿಸಲಾಗುವುದು. ಚೆಕ್‌ಪೋಸ್ಟ್‌ಗಳಲ್ಲಿ ಸಂಚರಿಸುವವರನ್ನು ವಿಚಾರಣೆ ನಡೆಸಲಾಗುವುದು. ಇ–ಬೀಟ್, ಸುಭಾಹು ಬೀಟ್‌ಗಳಲ್ಲಿ ಸಿಬ್ಬಂದಿ ಪಾಲ್ಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಹಂದಿಯ ಚಿಪ್ಪುಗಳು ವಶ
‘ಚಿಪ್ಪುಹಂದಿಯ ಚಿಪ್ಪುಗಳ ಕಳ್ಳತನ ಸಂಬಂಧ ವನ್ಯಜೀವಿ ಕಾಯ್ದೆಯಡಿ 18 ಜನರನ್ನು ಬಂಧಿಸಿ 67 ಕೆ.ಜಿ. ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಟಿಜೆ ನಗರ, ಬಡಾವಣೆ, ವಿದ್ಯಾನಗರ ಠಾಣೆಗಳಲ್ಲಿ ಹೆಚ್ಚಿನ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದೇ ಸಲ 20 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಮೆಕ್ಕೆಜೋಳ ಖರೀದಿಸಿ ಮೋಸ ಮಾಡಿದ ಪ್ರಕರಣ ಸಂಬಂಧ ₹ 2.68 ಕೋಟಿಯಷ್ಟು ಹಣ ವಶಪಡಿಸಿಕೊಂಡಿದ್ದು, ನ್ಯಾಯಾಲಯದಿಂದ ಬಿಡುಗಡೆಯಾಗಿದೆ. ಮೋಸ ಹೋದವರಿಗೆ ಹಣ ಹಿಂತಿರುಗಿಸಲಾಗುವುದು. ವಿದ್ಯಾನಗರದಲ್ಲಿ ನಡೆದಿರುವ ಚಿಟ್‌ಫಂಡ್ ಪ್ರಕರಣದ ತನಿಖೆ ನಡೆಯುತ್ತಿದೆ’ ಎಂದರು.

‘ಸ್ಮಾರ್ಟ್‌ ಸಿಟಿ ವತಿಯಿಂದ ನಗರದ 36 ಚೆಕ್‌ ಪಾಯಿಂಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಎಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 215 ಕ್ಯಾಮೆರಾ ಅಳವಡಿಸಲಾಗಿದೆ. ಪಿ.ಬಿ.ರಸ್ತೆಯಲ್ಲಿ ಅಪಘಾತದಿಂದ ಇಬ್ಬರು ಮೃತಪಟ್ಟಿದ್ದು, ಈ ರಸ್ತೆಯಲ್ಲಿ ದುರಸ್ತಿಪಡಿಸಲು ಮಹಾನಗರ ಪಾಲಿಕೆಗೆ ಮನವರಿಕೆ ಮಾಡಿದ್ದೇವೆ. ಕೆಲವೊಂದು ಕಡೆ ಪ್ರವೇಶ ದ್ವಾರವನ್ನು ಬಂದ್ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಜನವರಿ ತಿಂಗಳು ಪೂರ್ತಿ ಅಪರಾಧ ತಡೆ ಮಾಸಾಚರಣೆ ನಡೆಯುತ್ತಿದ್ದು, ಪಿಎಸ್‌ಐಗಳು ಪ್ರಮುಖ ವೃತ್ತಗಳಲ್ಲಿ ಹೆಲ್ಮೆಟ್ ಧರಿಸದವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ಶಾಲಾ–ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

‘ಹಳೇ ದಾವಣಗೆರೆಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ತಳ್ಳುವ ಗಾಡಿ ವ್ಯಾಪಾರಿಗಳು ರಸ್ತೆಯ ಮಧ್ಯ ಭಾಗದಲ್ಲಿಯೇ ಬರುವುದರಿಂದ ಸಮಸ್ಯೆಯಾಗುತ್ತಿದೆ. ಏಕಮುಖ ಸಂಚಾರದ ಫಲಕ ಇದ್ದರೂ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದು, ಅದನ್ನು ತಡೆಯಲು ಕ್ರಮ ವಹಿಸಲಾಗುವುದು’ ಎಂದರು.

ಎಎಸ್ಪಿ ಕನಿಕಾ ಸಿಕ್ರಿವಾಲ್, ಡಿವೈಎಸ್‌ಪಿಗಳಾದ ನರಸಿಂಹ ತಾಮ್ರಧ್ವಜ, ಡಿ.ಎಸ್‌.ಬಸವರಾಜ, ಕೆ.ಎಂ. ಸಂತೋಷ್ ಕುಮಾರ್, ಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT