ಸೋಮವಾರ, ಜನವರಿ 18, 2021
20 °C
‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ

ದಾವಣಗೆರೆ: ಚಿಗಟೇರಿ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚಿಗಟೇರಿ ಆಸ್ಪತ್ರೆಗೆ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವವನ್ನು ಮುಖ್ಯಮಂತ್ರಿ ಮುಂದೆ ಇಟ್ಟಿದ್ದೇನೆ. ಅದಕ್ಕೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅದಕ್ಕಾಗಿ ಡಿಪಿಆರ್‌ ತಯಾರು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಹೇಳಿದರು.

ಪಾಲಿಕೆ ವತಿಯಿಂದ ಹಮ್ಮಿಕೊಂಡಿರುವ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮಕ್ಕೆ ಬುಧವಾರ ಗಾಂಧಿನಗರದ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ನಾನು ಸಚಿವನಾದ ಮೇಲೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಇಂಥ ಕಾರ್ಯಕ್ರಮ ಪ್ರಥಮ ಬಾರಿಗೆ ನಡೆಯುತ್ತಿದೆ. ಜನರ ಮನೆ ಬಾಗಿಲಿಗೆ ಆಡಳಿತವನ್ನು ಒಯ್ಯುವ ಕಾರ್ಯಕ್ರಮ. ಜನನ, ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ ಕೊಡುವುದು, ಬೀದಿ ದೀಪ ಸರಿ ಪಡಿಸುವುದು ಸೇರಿದಂತೆ ಆಯಾ ವಾರ್ಡ್‌ನ ಕೆಲಸಗಳನ್ನು ಒಂದೇ ದಿನದಲ್ಲಿ ಮುಗಿಸುವುದಕ್ಕಾಗಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ. ಜನರಿಗೆ ಮೂಲ ಸೌಲಭ್ಯವನ್ನು ಸುಲಭವಾಗಿ ಕಲ್ಪಿಸುವ ಕ್ರಮ ಇದಾಗಿದೆ’ ಎಂದು ಶ್ಲಾಘಿಸಿದರು.

ಈಚೆಗೆ ಪಾಲಿಕೆಯ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ ನಗರೋತ್ಥಾನದಲ್ಲಿ 125 ಕೋಟಿ ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದರು.

1 ಲಕ್ಷ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ದಾವಣಗೆರೆಯನ್ನು ನಂಬರ್‌ 1 ಮಾಡಲು ಹೆಚ್ಚು ಶ್ರಮ ಪಡಬೇಕಿದೆ. ಸ್ವಚ್ಛತೆಗೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಅದಕ್ಕೆ ಬೇಕಾದ ಅನುದಾನ ತರಲು ನಾನು ಬದ್ಧ’ ಎಂದು ತಿಳಿಸಿದರು.

ಜನನ–ಮರಣ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌, ‘25 ವರ್ಷಗಳ ಹಿಂದೆ ನಾನು ನಗರಸಭೆ ಸದಸ್ಯನಾಗಿದ್ದ ಸಂದರ್ಭದಲ್ಲಿ ಈ ರೀತಿಯ ಸನ್ನಿವೇಶ ಇರಲಿಲ್ಲ. ಅನುದಾನ ತರುವವರು, ಕೆಲಸ ಮಾಡುವವರು ಇರಲಿಲ್ಲ. ಈಗ ಅನುದಾನಕ್ಕೆ ಕೊರತೆ ಇಲ್ಲ. ಈ ಕಾರ್ಯಕ್ರಮ ಪ್ರಚಾರಕ್ಕೆ ಸೀಮಿತವಾಗಿ ಇಲ್ಲಿ ನಿಲ್ಲಬಾರದು. ಜನರಿಗೆ 24X7 ಸೇವೆ ನೀಡುವಂತಾಗಬೇಕು’ ಎಂದು ಕಿವಿಮಾತು ಹೇಳಿದರು.

ಮನೆ ಕಂದಾಯ ಸ್ವೀಕೃತಿಯನ್ನು ಉದ್ಘಾಟಿಸಿದ ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ‘ಹಿಂದೆ ಗಾಂಧಿನಗರ ವಾರ್ಡ್‌ನಲ್ಲಿ ಓಡಾಡಲೂ ಆಗದಂತ ಪರಿಸ್ಥಿತಿ ಇತ್ತು. ಶಾಮನೂರು ಶಿವಶಂಕರಪ್ಪ ಅವರು ಅನುದಾನ ತಂದು ಅಭಿವೃದ್ಧಿ ಮಾಡಿದರು. ರಸ್ತೆಗಳನ್ನು ಕಾಂಕ್ರಿಟೀಕರಣಗೊಳಿಸಿದರು. ಈಗ ನಗರೋತ್ಥಾನದಲ್ಲಿ ₹ 125 ಕೋಟಿ ಅನುದಾನ ಬರುತ್ತಿದೆ. ಅದರ ಕ್ರಿಯಾಯೋಜನೆಯಲ್ಲಿ ಐದಾರು ವಾರ್ಡ್‌ಗಳಿಗೆ ಯಾವುದೇ ಕಾಮಗಾರಿ ಇಟ್ಟಿಲ್ಲ. ಈ ಅನ್ಯಾಯವನ್ನು ಸರಿಪಡಿಸಬೇಕು. ಇದಲ್ಲದೇ ಪ್ರತ್ಯೇಕವಾಗಿ ಪ್ರತಿ ವಾರ್ಡ್‌ಗೆ ತಲಾ ₹ 1 ಕೋಟಿ ಅನುದಾನ ನೀಡಿದರೆ ಕಾಮಗಾರಿಗಳು ನಡೆಸಲು ಸಾಧ್ಯ’ ಎಂದರು.

ಉಪ ಮೇಯರ್‌ ಸೌಮ್ಯಾ ಎಸ್‌. ನರೇಂದ್ರಕುಮಾರ್‌, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಸ್‌.ಟಿ. ವೀರೇಶ್‌, ಕೆ. ಪ್ರಸನ್ನ ಕುಮಾರ್‌, ಗೌರಮ್ಮ ಗಿರೀಶ್‌, ಜಯಮ್ಮ ಗೋಪಿನಾಯ್ಕ್‌, ವಾರ್ಡ್‌ ಸದಸ್ಯ ಜೆ.ಡಿ. ಪ್ರಕಾಶ್‌, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ರಾಜೀವ್‌ ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸ್ವಾಗತಿಸಿದರು. ಉಪ ಆಯುಕ್ತೆ ರೇಷ್ಮಾ ಹಾನಗಲ್‌ ವಂದಿಸಿದರು.

‘ಪ್ರತಿ ವಾರ್ಡ್‌ಗೆ ₹ 10 ಕೋಟಿ ಅಗತ್ಯ’

ಪ್ರತಿ ವಾರ್ಡ್‌ನಲ್ಲಿ ಕನಿಷ್ಠ ₹ 10 ಕೋಟಿ ವೆಚ್ಚದ ಕಾಮಗಾರಿಗಳನ್ನು ಮಾಡಿದರೆ ಜನರಿಗೆ ಎಲ್ಲ ಸೌಲಭ್ಯ ಒದಗಿಸಿದಂತಾಗಲಿದೆ. ಅದಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ತಿಳಿಸಿದರು.

ದಾವಣಗೆರೆಯನ್ನು ಸ್ವಚ್ಛನಗರ, ಹಸಿರುನಗರ, ಬೆಳಕಿನ ನಗರ ಮಾಡುವ ಕನಸು ಇದೆ. ಪ್ರತಿ ವಾರ್ಡ್‌ನಲ್ಲಿ ತಲಾ 100ರಂತೆ ಈಗ ಹಣ್ಣಿನ ಗಿಡಗಳನ್ನು ನೆಡಲಾಗುತ್ತಿದೆ. ಮುಂದಿನ ಜೂನ್‌ನಲ್ಲಿ ಎಲ್ಲ ಗಿಡಗಳನ್ನು ನೆಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಇರುವ 21 ಸಾವಿರ ಬೀದಿದೀಪಗಳನ್ನು ಎಲ್‌ಇಡಿ ದೀಪಗಳಾಗಿ ಪರಿವರ್ತಿಸಲಾಗುವುದು. ಖಾಸಗಿ ಮತ್ತು ಸಾರ್ವಜನಿಕ ಸಹಕಾರದಲ್ಲಿ ಈ ಕೆಲಸ ಮಾಡಲಾಗುವುದು. ಈಗ ಅವುಗಳ ದ್ಯುತ್‌ ಬಿಲ್‌ ವರ್ಷಕ್ಕೆ ₹ 80 ಲಕ್ಷ ಬರುತ್ತಿದ್ದು, ಎಲ್‌ಇಡಿ ದೀಪ ಅಳವಡಿಸಿದರೆ ₹ 30 ಲಕ್ಷಕ್ಕೆ ಇಳಿಯಲಿದೆ. ಖಾಸಗಿಯವರಿಗೆ ₹ 32 ಲಕ್ಷವನ್ನು 80 ತಿಂಗಳುಗಳ ಕಾಲ ನೀಡಿದರೆ ಆಯಿತು’ ಎಮದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.