ಸೋಮವಾರ, ಸೆಪ್ಟೆಂಬರ್ 26, 2022
22 °C

ಶೌಚಾಲಯ ನಿರ್ಮಿಸಲು ಒತ್ತಾಯ: ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲೇಬೆನ್ನೂರು: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿ, ಎಸ್‍ಡಿಎಂಸಿ ಪದಾಧಿಕಾರಿಗಳು ಹಾಗೂ ಪೋಷಕರು ಪುರಸಭೆಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶಾಲೆಯ ಹಾಲಿ ಶೌಚಾಲಯ ಗಬ್ಬೆದ್ದು ನಾರುತ್ತಿದ್ದು, ಮೂಗು ಮುಚ್ಚಿಕೊಂಡು ಹೋಗುವುದೂ ಕಷ್ಟವಾಗಿದೆ. ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ರೋಗ ರುಜಿನಗಳ ತಾಣವಾಗಿದೆ.

‘ಶೌಚಾಲಯ ಬಳಸಿದ ಮಕ್ಕಳು ಈಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಮ್ಮೆ ಪರಿಶೀಲಿಸಿದರೆ ಮಕ್ಕಳ ಕಷ್ಟ ಏನೆಂದು ಅರ್ಥವಾಗುತ್ತದೆ’ ಎಂದು ಹರಿಹಾಯ್ದರು.

‘ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳಿಗೆ ಹೊಸ ಶೌಚಾಲಯ ನಿರ್ಮಿಸಿಕೊಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆಯಲ್ಲಿ ನಗರೋತ್ಥಾನ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಂದಿದೆ. ದಯವಿಟ್ಟು ಶೌಚಾಲಯ ನಿರ್ಮಿಸಿಕೊಡಿ’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್‍ಗೆ ಮನವಿ ಪತ್ರ ನೀಡಿದರು.

‘ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ₹ 21 ಲಕ್ಷ ಅನುದಾನವಿದೆ. ಶಾಲೆ ಆಯ್ಕೆ ಆಗಿಲ್ಲ. ಈ ಶಾಲೆಗೆ ಶೌಚಾಲಯದ ಅವಶ್ಯಕತೆ ಇರುವ ಬಗ್ಗೆ ವರದಿ ನೀಡುತ್ತೇನೆ. ಸ್ವಲ್ಪ ಕಾಲಾವಕಾಶ ಅಗತ್ಯ’ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್
ತಿಳಿಸಿದರು.

‘ಅನುದಾನ ಬರಲಿ, ಬಿಡಲಿ. ತುರ್ತು ಶೌಚಾಲಯ ಬೇಕಿರುವುದರಿಂದ ತಕ್ಷಣ ಶಾಲೆಯ ಹಳೆಯ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ ಕೊಡುತ್ತೇವೆ. ಪೋಷಕರೂ ಸಹಕರಿಸಿ’ ಎಂದು ಪುರಸಭೆ ಮಾಜಿ ಸದಸ್ಯ ಆರೀಫ್ ಅಲಿ ಹಾಗೂ ಸದಸ್ಯ ಕೆ.ಜಿ. ಲೋಕೇಶ್
ಹೇಳಿದರು.

‘ಈಗಾಗಲೇ ಶೌಚಾಲಯ ನಿರ್ಮಿಸಲು ಪೋಷಕರ ಸಮಿತಿ ರಚಿಸಲಾಗಿದೆ. ಶೀಘ್ರದಲ್ಲೇ ಶೌಚಾಲಯ ನಿರ್ಮಿಸಲಾಗುವುದು’ ಎಂದು ಎಸ್‍ಡಿಎಂಸಿ ಅಧ್ಕಕ್ಷ ಬಸವರಾಜ್ ತಿಳಿಸಿದರು.

ಪ್ರಭಾರ ಮುಖ್ಯ ಶಿಕ್ಷಕ ನಿರಂಜನ್, ಪೋಷಕರಾದ ಕೊಪ್ಪದ ಗಿರೀಶ್, ರಾಜೀವ್, ಪವನ್‍ಕುಮಾರ್, ಕಿರಣ್, ಚಂದ್ರು, ರಾಧಾ, ರೂಪ, ಹನುಮಂತಪ್ಪ, ದೇವೇಂದ್ರಪ್ಪ, ರಜಿಯಾ, ರೋಜಾ, ಆಶಾ, ಜ್ಯೋತಿ, ದಿವ್ಯ, ಶೃತಿ
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.