ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಮಕ್ಕಳ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿ: ನ್ಯಾಯಾಧೀಶ ಶ್ರೀಪಾದ

ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎನ್. ಶ್ರೀಪಾದ ಸಲಹೆ
Last Updated 19 ನವೆಂಬರ್ 2022, 6:15 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಭವಿಷ್ಯ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಅಗಾಧ. ಆದರೆ ಮಕ್ಕಳ ಕ್ಷೇತ್ರಕ್ಕೆ ಇಡಲಾಗಿರುವ ಅನುದಾನ ತೀರಾ ಕಡಿಮೆ. ಸರ್ಕಾರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಎಫ್.ಟಿ.ಎಸ್.ಸಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಶ್ರೀಪಾದ ಎನ್. ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಡಿ.ಆರ್.ಆರ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ನಗರದ ಡಿ.ಆರ್.ಆರ್. ಕಾಲೇಜಿನಲ್ಲಿ ಮಕ್ಕಳ ಹಕ್ಕುಗಳ ಮಾಸಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಜನಸಂಖ್ಯೆಯಲ್ಲಿ ಶೇ 40ರಷ್ಟು ಮಕ್ಕಳಿದ್ದಾರೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ದೇಶದ ಭವಿಷ್ಯ. ಮುಂಬರುವ ದಿನಗಳಲ್ಲಿ ಮಕ್ಕಳು ದೇಶದ ವಿವಿಧ ಸ್ತರದಲ್ಲಿ ಕೆಲಸ ಮಾಡುವ ಜತೆಗೆ ರಾಷ್ಟ್ರವನ್ನು ಮುನ್ನಡೆಸುವ ವ್ಯಕ್ತಿಗಳು ಆಗಬೇಕು ಎಂದು
ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ವಿವಿಧ ಸ್ತರಗಳಲ್ಲಿ ದೌರ್ಜನ್ಯ ನಡೆಯುತ್ತಿದ್ದು ಅದಕ್ಕಾಗಿ ಪೋಕ್ಸೊ ಕಾಯ್ದೆ ಜಾರಿಗೆ ತರಲಾಗಿದೆ. ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು.

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ಮಾಧ್ಯಮವೂ ಉತ್ತಮ ರೀತಿಯಲ್ಲಿ ಸುದ್ದಿಗಳನ್ನು ಬಿತ್ತರಿಸಬೇಕಿದೆ. ಇಲ್ಲವಾದರೆ ಅದನ್ನೇ ಸಮಾಜ ನಂಬುತ್ತದೆ. ಇತ್ತೀಚಿನ ದಿನಗಳಲ್ಲಿ ದೃಶ್ಯ ಮಾಧ್ಯಮಗಳು ಬೇಡವಾದ ಸುದ್ದಿಗಳನ್ನೇ ವೈಭವೀಕರಣ ಮಾಡಿ ತೋರಿಸುತ್ತಿವೆ. ಇದು ಸರಿಯಾದ ಮಾರ್ಗ ಅಲ್ಲ ಎಂದುಹಿರಿಯ ಸಿವಿಲ್ ನ್ಯಾಯಾಧೀಶ ಪ್ರವೀಣ ನಾಯಕ ಬೇಸರಿಸಿದರು.

ಮಕ್ಕಳ ಮೇಲೆ ನಿಗಾ ವಹಿಸುವುದು ಪೋಷಕರು ಹಾಗೂ ಶಿಕ್ಷಕರ ಕರ್ತವ್ಯ. ಪೋಷಕರು ಮನೆಯಲ್ಲಿ, ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅವರಿಗೆ ಎದುರಾಗುವ ತೊಂದರೆಗಳ ನಿವಾರಣೆಗೆ ಮುಂದಾಗಬೇಕು. ಪೊಲೀಸ್, ನ್ಯಾಯಾಲಯ ಇದೆ. ಆದರೆ, ಅವೆಲ್ಲವೂ ನಂತರದ ಹಂತದಲ್ಲಿ ಬರಲಿವೆ. ಆದ್ದರಿಂದ ಅಹಿತಕರ ಘಟನೆಗಳು ನಡೆಯದಂತೆ ಆರಂಭಿಕ ಹಂತದಲ್ಲಿ ತಡೆಯಬೇಕು ಎಂದು ಅವರು ಸಲಹೆ ನೀಡಿದರು.

ಡಿ.ಆರ್.ಆರ್ ವಿದ್ಯಾಸಂಸ್ಥೆಯ ಟ್ರಸ್ಟಿ ಸ್ವಾತಿ ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಕೀಲ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿದರು. ವಕೀಲರಾದ ಟಿ.ಎಂ.ಅನ್ನಪೂರ್ಣ, ಡಿಸಿಎಂ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಆರ್.ಭೋಜರಾಜ್ ಯಾದವ್, ಎಂ.ಎಂ. ಬಸವನಗೌಡ, ಎಚ್.ಎಸ್.ಹಾಲೇಶ್, ಕೆ.ಎಸ್.ರಾಧಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT