ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಗಣೇಶೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ವಾರಾಣಸಿ ಕಾಶಿ ವಿಶ್ವನಾಥ ದೇವಾಲಯ ಶೈಲಿಯ ಅದ್ದೂರಿ ಮಂಟಪ ಸಿದ್ಧಗೊಳ್ಳುತ್ತಿದೆ.
ಕೋಲ್ಕತ್ತ ಮೂಲದ ಸಂಸ್ಥೆಯೊಂದು ಬೃಹತ್ ಮಂಟಪ ನಿರ್ಮಿಸುವ ಹೊಣೆ ಹೊತ್ತಿದ್ದು, ಸಂಸ್ಥೆಯ 25ಕ್ಕೂ ಹೆಚ್ಚು ಕಾರ್ಮಿಕರು ಆಗಸ್ಟ್ 5ರಿಂದಲೇ ಬಿಡುವಿಲ್ಲದೇ ಕೆಲಸದಲ್ಲಿ ತೊಡಗಿದ್ದಾರೆ.
200 ಅಡಿ ಉದ್ದ ಹಾಗೂ 100 ಅಡಿ ಅಗಲದ ವಿಶಾಲವಾದ ಭವ್ಯ ಮಂಟಪವನ್ನು ನಿರ್ಮಿಸುವ ಕಾರ್ಯ ಈಗಾಗಲೇ ಶೇ 60 ರಷ್ಟು ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.
ದೇಶದಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಕಾಶಿ ವಿಶ್ವನಾಥ ದೇವಾಲಯದಲ್ಲಿನ ಜ್ಯೋತಿರ್ಲಿಂಗವೂ ಒಂದಾಗಿದೆ. ಅದನ್ನೇ ಹೋಲುವ ಜ್ಯೋತಿರ್ಲಿಂಗವನ್ನು ಮಂಟಪದೊಳಗೆ ಪ್ರತಿಷ್ಠಾಪಿಸಲಾಗುತ್ತಿದೆ. ಮಂಟಪದ ಹೊರಾಂಗಣ ಹಾಗೂ ಒಳಾಂಗಣವನ್ನು ಭವ್ಯವಾಗಿ ಅಲಂಕರಿಸಲಾಗುತ್ತಿದೆ. ಮಂಟಪಕ್ಕೆ 3 ಗೋಪುರಗಳಿರಲಿವೆ. 4 ಕಡೆ ಪ್ರವೇಶ, 1 ಕಡೆ ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
‘ಗಣೇಶೋತ್ಸವಕ್ಕೆ ಹಿಂದೂ ಸಂಘಟನೆಗಳು, ರಾಜಕಾರಣಿಗಳು, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಯಾವುದೇ ರೀತಿಯ ದೇಣಿಗೆ ಸಂಗ್ರಹಿಸಿಲ್ಲ. ಸಂಪೂರ್ಣವಾಗಿ ಟ್ರಸ್ಟ್‌ನಿಂದಲೇ ವೆಚ್ಚ ಭರಿಸಲಾಗುತ್ತಿದೆ. ಪ್ರಸಾದದ ವ್ಯವಸ್ಥೆಗೆ ದಾನಿಗಳಿಂದ ಆಹಾರ ಧಾನ್ಯ, ತರಕಾರಿ ಸ್ವೀಕರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು’ ಎಂದು ಹಿಂದೂ ಮಹಾಗಣಪತಿ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ತಿಳಿಸಿದರು.
ಜುಲೈ 28ರಂದು ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗಾಗಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ಹಂದರಕಂಬ (ಧ್ವಜಸ್ತಂಭ) ಪೂಜೆ ನೆರವೇರಿಸಿದ್ದರು.
ಸೆ.7ರಂದು ಮೂರ್ತಿ ಪ್ರತಿಷ್ಠಾಪನೆ ನೆರವೇರಲಿದೆ. ಕಳೆದ ವರ್ಷ 28 ದಿನ ಮೂರ್ತಿ ಇಡಲಾಗಿತ್ತು. ಈ ಬಾರಿ 30 ದಿನ ಇಡುವ ಸಾಧ್ಯತೆ ಇದೆ. ನೆರೆಯ ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ಹಿಂದೂ ಮಹಾಗಣಪತಿಯ ಮೂರ್ತಿ ವಿಸರ್ಜನೆ ದಿನಾಂಕವನ್ನು ನೋಡಿಕೊಂಡು ಇಲ್ಲಿ ಶೋಭಾಯಾತ್ರೆಯ ದಿನಾಂಕ ಅಂತಿಮಗೊಳಿಸಲಾಗುತ್ತದೆ.
ಒಂದೇ ದಿನ ಮೂರು ಜಿಲ್ಲೆಗಳಲ್ಲಿ ಶೋಭಾಯಾತ್ರೆ ಹಮ್ಮಿಕೊಂಡರೆ ಭದ್ರತೆ ಕೈಗೊಳ್ಳಲು ಪೊಲೀಸ್ ಇಲಾಖೆಗೆ ತೊಂದರೆಯಾಗಬಹುದು. ಈ ಕಾರಣಕ್ಕೆ ಬೇರೆ ಬೇರೆ ದಿನಗಳಲ್ಲಿ ಶೋಭಾಯಾತ್ರೆ ನಡೆಸಲು ನಿರ್ಧರಿಸಲಾಗಿದೆ.
‘ಕಳೆದ ಬಾರಿ 20,000 ಕ್ಕೂ ಹೆಚ್ಚು ಜನರಿಗೆ ಅನ್ನ ಸಂತರ್ಪಣೆ ನಡೆಸಲಾಗಿತ್ತು. ಈ ಬಾರಿ ಅದಕ್ಕೂ ಹೆಚ್ಚಿನ ಜನರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುತ್ತಿದೆ. ಮೆರವಣಿಗೆ, ಡಿ.ಜೆ ಅಬ್ಬರ, ಸಾಂಸ್ಕೃತಿಕ ಕಾರ್ಯಕ್ರಮವೂ ಸೇರಿದಂತೆ ಈ ಬಾರಿ ಅದ್ದೂರಿ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಟ್ರಸ್ಟ್‌ನ ಮುಖಂಡರು ಹೇಳುತ್ತಾರೆ.
ಟ್ರಸ್ಟ್‌ನಿಂದ ನಗರದಲ್ಲಿ 2018ರಿಂದ ವೈಭವಯುತವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ.
₹ 2 ಲಕ್ಷ ಮೊತ್ತದ ವಿನಾಯಕ ಮೂರ್ತಿ ಶಿವನ ಅವತಾರದಲ್ಲಿ ನಿಲ್ಲಲಿರುವ ವಿಘ್ನೇಶ್ವರ ಭವ್ಯ ಮಂಟಪದಲ್ಲಿ ಜ್ಯೋತಿರ್ಲಿಂಗ ದರ್ಶನ
ದೂರದ ವಾರಾಣಸಿ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗಿ ಬರುವುದು ಬಡ ಜನರಿಗೆ ವೆಚ್ಚದಾಯಕ. ಹೀಗಾಗಿ ದೇವಾಲಯದ ಶೈಲಿಯಲ್ಲೇ ಮಂಟಪ ನಿರ್ಮಿಸುತ್ತಿದ್ದು ಎಲ್ಲರೂ ಇಲ್ಲಿಯೇ ಕಣ್ತುಂಬಿಕೊಳ್ಳಬಹುದುಜೊಳ್ಳಿ ಗುರು ಸಂಸ್ಥಾಪಕ ಅಧ್ಯಕ್ಷ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.