ಮಾಯಕೊಂಡ: ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಗೆ ಬರಲು ನಲ್ಕುಂದ, ಹಿಂಡಸಕಟ್ಟೆ ಗ್ರಾಮಗಳ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ಸೌಲಭ್ಯವಿಲ್ಲ. ಇದರಿಂದಾಗಿ ಅವರು ಗ್ರಾಮಗಳಿಂದ 7 ಕಿ.ಮೀ. ದೂರದಲ್ಲಿರುವ ಮಾಯಕೊಂಡಕ್ಕೆ ನಿತ್ಯ ನಡೆದುಕೊಂಡು ಬಂದು ಹೋಗಬೇಕಾದ ಸ್ಥಿತಿ ಇದೆ.
ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಮಣ್ಣು ರಸ್ತೆಯ ಇಕ್ಕೆಲಗಳಲ್ಲಿ ಹೊಲ ಗದ್ದೆಗಳಿದ್ದು, ಗಿಡ ಗಂಟಿಗಳೂ ಬೆಳೆದಿವೆ. ನಡೆದು ಹೋಗುವಾಗ ಬಾಲಕಿಯರಿಗೆ ಏನಾದರೂ ತೊಂದರೆಯಾದರೆ ಏನು ಗತಿ ಎಂಬ ಆತಂಕದಲ್ಲಿ ಪಾಲಕರು ನಿತ್ಯವೂ ಕಾಲ ಕಳೆಯುವಂತಾಗಿದೆ.
‘ನಮ್ಮ ಊರಿಗೆ ಒಂದೇ ಒಂದು ಖಾಸಗಿ ಬಸ್ಸು ಬರುತ್ತದೆ. ಅದರಿಂದ ಏನೂ ಪ್ರಯೋಜನವಿಲ್ಲ. ಕಾಲೇಜಿಗೆ ಹೋಗುವ ಹಾಗೂ ತರಗತಿಗಳನ್ನು ಮುಗಿಸಿಕೊಂಡು ಬರುವ ಸಮಯಕ್ಕೆ ಯಾವ ಬಸ್ಸುಗಳೂ ಇಲ್ಲ. ಬಸ್ಸಿಲ್ಲವೆಂದು ಮನೆಯಲ್ಲೇ ಕುಳಿತರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ಕಾರಣದಿಂದಾಗಿಯೇ ಕೆಲವರು ಕಾಲೇಜು ಬಿಟ್ಟಿದ್ದಾರೆ. ಒಂದಷ್ಟು ಜನ ಕಷ್ಟವಾದರೂ ನಡೆದುಕೊಂಡೇ ಕಾಲೇಜಿಗೆ ಹೋಗುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ತಿಳಿಸಿದರು.
‘ಮಳೆ ಹಾಗೂ ಬಿಸಿಲ ಕಾಲದಲ್ಲಿ ನಿತ್ಯವೂ ನಡೆದು ಹೈರಾಣಾಗುತ್ತೇವೆ. ಹುಡುಗರು ದಾರಿ ಮಧ್ಯೆ ಸಿಗುವ ಬೈಕ್‌ಗಳಿಗೆ ಕೈ ಅಡ್ಡ ಹಾಕಿ, ಅವರು ನಿಲ್ಲಿಸಿದರೆ ಬೈಕ್ ಏರಿ ಹೋಗಿ ಬಿಡುತ್ತಾರೆ. ಆದರೆ, ಹೆಣ್ಣುಮಕ್ಕಳಿಗೆ ಹಾಗೆ ಹೋಗಲು ಸಾಧ್ಯವಾಗದ ಕಾರಣ ಸಮಸ್ಯೆ ಎದುರಿಸುವಂತಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಬೆಳೆಗಳು ಬೆಳೆದು ನಿಂತಿದ್ದು ಕಾಡು ಪ್ರಾಣಿ, ಇನ್ನಿತರ ಭಯದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಾಸಕರು, ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಸೂಚಿಸಬೇಕು’ ಎಂದು ಪಾಲಕರು ಮನವಿ ಮಾಡಿದ್ದಾರೆ.
‘ಹಳ್ಳಿಗಳಿಂದ ಮಾಯಕೊಂಡಕ್ಕೆ ಬರುವ ವಿದ್ಯಾರ್ಥಿಗಳಿಗಾಗಿ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಯುವ ಶಕ್ತಿ ಕೇಂದ್ರದ ಎಂ.ಜಿ.ಗುರುನಾಥ್ ಆಗ್ರಹಿಸಿದರು.
‘ನಲ್ಕುಂದ, ಹಿಂಡಸಕಟ್ಟೆ, ಒಂಟಿಹಾಳು, ವಿಠಲಾಪುರ, ಎಚ್.ರಾಂಪುರ, ಹೆದ್ನೆ ಸೇರಿ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಶಾಶ್ವತ ಸಾರಿಗೆ ವ್ಯವಸ್ಥೆ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಮುಖಂಡರಾದ ಎಸ್.ಆರ್. ಶರಣಪ್ಪ, ರಾಜಶೇಖರ ಸಂಡೂರ್, ಗೌಡ್ರ ನಟರಾಜ್, ರಾಮಜೋಗಿ ಪ್ರತಾಪ್, ಗೌಡ್ರ ಅಶೋಕ್, ಪ್ರವೀಣ್. ಬಿ.ಎಂ. ಇತರರು ಮನವಿ ಮಾಡಿದ್ದಾರೆ.
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
-ಕೆ.ಎಸ್. ಬಸವಂತಪ್ಪ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.