ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಬೆನ್ನೂರು | ಮಳೆ ಕೊರತೆ: ಮೆಕ್ಕೆಜೋಳ ಬೆಳೆ ತೆರವು

Published 10 ಸೆಪ್ಟೆಂಬರ್ 2023, 6:22 IST
Last Updated 10 ಸೆಪ್ಟೆಂಬರ್ 2023, 6:22 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಹೋಬಳಿಯಾದ್ಯಂತ ಸತತ ಮಳೆ ಕೊರತೆಯಿಂದಾಗಿ ಮೆಕ್ಕೆಜೋಳದ ಬೆಳೆ ಒಣಗಿದ್ದು, ರೈತರು ಅದನ್ನು ಕೊಯ್ದು ದನಗಳ ಮೇವಿಗೆ ಬಳಸುತ್ತಿದ್ದಾರೆ. 

‘ಆಗಸ್ಟ್ ತಿಂಗಳಲ್ಲಿ ಮಳೆ ಬಾರದ ಕಾರಣ ಮೆಕ್ಕೆಜೋಳದ ದಂಟುಗಳು ಮೇಲೇಳಲೇ ಇಲ್ಲ. ಸುಡುಬಿಸಿಲಿಗೆ ಇನ್ನಷ್ಟು ಬಾಡಿದವು. ಈಗ ಮೋಟುದ್ದ ಬೆಳೆದ ಮೆಕ್ಕೆಜೋಳದಲ್ಲಿ ತೆನೆ ಒಡೆಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ದಂಟಿನ ತುದಿಯಲ್ಲಿ ಸೂಲಂಗಿ ಮಾತ್ರ ಕಾಣುತ್ತಿವೆ. ಗರಿಗಳ ನಡುವೆ ತೆನೆ ಬಿಟ್ಟಿಲ್ಲ. ಹಾಗಾಗಿ 6 ಎಕರೆಯಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳವನ್ನು ತೆರವು ಮಾಡುತ್ತಿರುವೆ’ ಎಂದು ಕುಳೇನೂರಿನ ರೈತ ಸಿದ್ಧಲಿಂಗಪ್ಪ ಬೇಸರದಿಂದ ಹೇಳಿದರು.

‘ಜುಲೈ ಮೊದಲ ವಾರದಲ್ಲಿ ಮುಂಗಾರು ಚುರುಕುಗೊಂಡಿದ್ದರಿಂದ ಜೋಳ ಬಿತ್ತನೆ ಮಾಡಿದ್ದೆವು. ಮೊದಲ ಕಳೆ, ಗೊಬ್ಬರ ನೀಡುವವರೆಗೆ ಉತ್ತಮ ಮಳೆ ಇತ್ತು. ನಂತರ ಭೂಮಿ ಹದಗೊಳ್ಳುವಷ್ಟು ಮಳೆ ಸುರಿಯಲಿಲ್ಲ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಒಂದು ಬಾರಿ ಉತ್ತಮ ಮಳೆ ಆಯಿತು. ಆದರೆ ಮೆಕ್ಕೆಜೋಳ ಬೆಳೆ ಚೇತರಿಸಿಕೊಳ್ಳುವ ಯಾವ ಲಕ್ಷಣವೂ ಇಲ್ಲ. ಕುಳೇನೂರು ಗ್ರಾಮದಲ್ಲಿಯೇ 300 ಎಕರೆ ಮೆಕ್ಕೆಜೋಳವನ್ನು ಹೊಲಗಳಿಂದ ತೆರವುಗೊಳಿಸಲಾಗುತ್ತಿದೆ’ ಎಂದು ರೈತರಾದ ಕೆ.ಎನ್.ರಂಗಣ್ಣ, ಅಜ್ಜಿಹಳ್ಳಿ ಮರಿಯಪ್ಪ, ಪುಟ್ಟಸ್ವಾಮಿ ಹೇಳಿದರು.

ಚನ್ನಗಿರಿ ತಾಲ್ಲೂಕು ಬರ ಪೀಡಿತ ಎಂದು ಘೋಷಣೆ ಆಗಿದೆ. ಬೆಳೆ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದಿಂದ ಸೂಚನೆ ನೀಡಲಾಗಿದೆ.
ಕುಮಾರ್, ಕೃಷಿ ಅಧಿಕಾರಿ

‘ಪಾಪ್ ಕಾರ್ನ್ ತಳಿಯ ಮೆಕ್ಕೆಜೋಳ ಶೇ 50ರಷ್ಟು ಬರುವ ನಿರೀಕ್ಷೆ ಇತ್ತು. ಗಿಳಿಗಳ ಹಿಂಡು ಶೇ 40ರಷ್ಟು ಬೆಳೆ ತಿಂದಿದೆ. ಉಳಿದ ಶೇ 10ರಷ್ಟು ಇಳುವರಿ ಬಂದರೆ ಹೆಚ್ಚು. ಸಂತೇಬೆನ್ನೂರು, ಕಾಕನೂರು, ದೊಡ್ಡಬ್ಬಿಗೆರೆ, ದೊಡ್ಡೇರಿಕಟ್ಟೆ, ಅರಳಿಕಟ್ಟೆ, ಸಿದ್ಧನಮಠ, ಮಂಗೇನಹಳ್ಳಿ, ದೇವರಹಳ್ಳಿ, ನುಗ್ಗಿಹಳ್ಳಿ, ನೀತಿಗೆರೆ, ಚಿಕ್ಕಗಂಗೂರು ಭಾಗಗಳಲ್ಲಿ ಮೆಕ್ಕೆಜೋಳದ ಫಸಲು ಕೈಗೆ ಬರುವ ನಿರೀಕ್ಷೆ ಇಲ್ಲ’ ಎನ್ನುತ್ತಾರೆ ಕಾಕನೂರಿನ ಅಣ್ಣಪ್ಪ.

‘ಎಕರೆಗೆ ₹15,000ಕ್ಕಿಂತ ಹೆಚ್ಚು ಹಣ ಖರ್ಚಾಗಿದೆ. ರೈತರ ಗೋಳು ಮುಗಿಲು ಮಟ್ಟಿದೆ. ಸಮೀಕ್ಷೆ ನಡೆಸಿ ನಷ್ಟದ ಅಂದಾಜು ಮಾಡಬೇಕು. ಅದರ ಆಧಾರದಲ್ಲಿ ಕೂಡಲೇ ಪರಿಹಾರ ಘೋಷಣೆ ಮಾಡಬೇಕು’ ಎಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT