ಭತ್ತ; ಕಟಾವಿನ ನಂತರವೂ ಸಮಸ್ಯೆ
ಮಳೆಯಿಂದಾಗಿ ಕಟಾವು ಮಾಡಿದ ಭತ್ತವನ್ನು ಉಳಿಸಿಕೊಳ್ಳುವುದೇ ರೈತರಿಗೆ ದೊಡ್ಡ ಸವಾಲಾಗಿದೆ. ಭತ್ತವು ತೇವಾಂಶ ಹೊಂದಿರುವ ಕಾರಣಕ್ಕೆ ಮಾರಾಟ ಮಾಡಲೂ ಆಗುತ್ತಿಲ್ಲ. ಬಿಸಿಲಿಗೆ ಒಣಗಿಸಲು ವರುಣ ಬಿಡುತ್ತಿಲ್ಲ. ಹೀಗಾಗಿ ಎಲ್ಲೆಂದರಲ್ಲಿ ಭತ್ತವನ್ನು ರಾಶಿ ಮಾಡಿ ಮೇಲೆ ತಾಡಪಲ್ ಹೊದಿಸುವುದು ರೈತರಿಗೆ ಅನಿವಾರ್ಯವಾಗಿದೆ. ಕೆಲವೆಡೆ ರಾಶಿ ಮಾಡಿದ ಭತ್ತವು ತೀವ್ರ ತೇವಾಂಶದಿಂದಾಗಿ ಮೊಳಕೆಯೊಡೆದು ಹಾಳಾಗುತ್ತಿದೆ. ಇದರಿಂದಲೂ ರೈತರಿಗೆ ಆರ್ಥಿಕವಾಗಿ ನಷ್ಟ ಉಂಟಾಗುತ್ತಿದೆ. ಭತ್ತದ ಕಟಾವು ಮುಗಿಸಿರುವ ರೈತರು ಹಾಳಾಗುತ್ತಿರುವ ಮೇವನ್ನು ಉಳಿಸಿಕೊಳ್ಳುವ ಸವಾಲನ್ನೂ ಎದುರಿಸುತ್ತಿದ್ದಾರೆ. ಕಟಾವಿನ ನಂತರದ ಹಾನಿಯನ್ನೂ ಪರಿಹಾರಕ್ಕೆ ಪರಿಗಣಿಸಬೇಕು ಎಂಬುದೂ ರೈತರ ಕೋರಿಕೆಯಾಗಿದೆ.