ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಮೈ ಮರೆಸುವ, ಮನ ತಣಿಸುವ ‘ರ‍್ಯಾಂಬೊ ಸರ್ಕಸ್‌’

Published : 23 ಆಗಸ್ಟ್ 2024, 5:33 IST
Last Updated : 23 ಆಗಸ್ಟ್ 2024, 5:33 IST
ಫಾಲೋ ಮಾಡಿ
Comments

ದಾವಣಗೆರೆ: ಅವು ಸ್ಟೀಲ್‌ನಿಂದ ತಯಾರಿಸಿದ ಬೃಹದಾಕಾರದ ಚಕ್ರಗಳು. ಅವುಗಳ ಮೇಲೆ ನಿಂತು ಅಂದಾಜು 40 ಅಡಿ ಮೇಲಕ್ಕೆ ಹೋಗುವುದನ್ನು ಊಹಿಸಿಕೊಂಡರೂ ಅರೆಕ್ಷಣ ಎದೆ ಝಲ್‌ ಎನ್ನುತ್ತೆ. ಭಯದಿಂದ ಕೈ–ಕಾಲುಗಳು ನಡುಗುತ್ತವೆ. 

ಹೀಗಿರುವಾಗ ಆ ಸಾಹಸಿ, ಗಿರಗಿರನೆ ತಿರುಗುವ ಚಕ್ರಗಳ ಪೈಕಿ ಒಂದರೊಳಗೆ ನಿರ್ಭೀತನಾಗಿ ನಿಲ್ಲುತ್ತಾನೆ. ಬಳಿಕ ಓಡಲು ಶುರುಮಾಡುತ್ತಾನೆ. ನೋಡ ನೋಡುತ್ತಲೇ ಅಲ್ಲಿಂದ ಛಂಗನೆ ಜಿಗಿದು ಮತ್ತೊಂದು ಚಕ್ರದ ಮೇಲೆ ನಿಲ್ಲುತ್ತಾರೆ. ತಿರುಗುವ ಚಕ್ರದ ಮೇಲೆಯೇ ‘ಸ್ಕಿಪ್ಪಿಂಗ್‌’ ಮಾಡುತ್ತಾನೆ....

ಇಂತಹ ಹತ್ತು ಹಲವು ಮೈನವಿರೇಳಿಸುವ ದೃಶ್ಯಗಳನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂದರೆ ನೀವೊಮ್ಮೆ ‘ರ‍್ಯಾಂಬೊ ಸರ್ಕಸ್‌’ಗೆ ಭೇಟಿ ನೀಡಬೇಕು.

ದಾವಣಗೆರೆಯ ವಾಣಿ ಹೋಂಡಾ ಶೋ ರೂಂ ಬಳಿಯ ವಿಶಾಲವಾದ ಮೈದಾನದಲ್ಲಿ ವಿಭಿನ್ನ ಲೋಕವೇ ತಲೆ ಎತ್ತಿದೆ. ಮನೆ ಮಂದಿಯೊಂದಿಗೆ ಅದರೊಳಗೆ ಹೊಕ್ಕು ಅಲ್ಲಿ ಪ್ರದರ್ಶಿತಗೊಳ್ಳುವ ಸಾಹಸಗಳನ್ನು ನೋಡುತ್ತಿದ್ದರೆ ಹೊತ್ತು ಕಳೆಯುವುದೇ ಗೊತ್ತಾಗುವುದಿಲ್ಲ.

ಇಲ್ಲಿ ಜಿರಾಫೆ, ಹೇಸರಗತ್ತೆ ಹೀಗೆ ಯಾವ ಪ್ರಾಣಿಗಳೂ ಇಲ್ಲ. ಆದರೆ, ವೇದಿಕೆಗೆ ಬರುವ ಅವುಗಳ ವೇಷಧಾರಿಗಳ ಹಾವಭಾವವನ್ನು ನೋಡಿದಾಗ ಜೀವಂತ ಪ್ರಾಣಿಗಳೇ ಕಣ್ಣೆದುರು ಓಡಾಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತದೆ.

ಕೆಳಗೊಂದು ಗಟ್ಟಿಮುಟ್ಟಾದ ಬಲೆಕಟ್ಟಿ, ಮೇಲೆ ಕಟ್ಟಿರುವ ಹಗ್ಗದ ಏಣಿಗಳನ್ನೇರಿ ಯುವಕರು ಅತ್ತಿಂದಿತ್ತ ಜಿಗಿದು ಪ್ರದರ್ಶಿಸುವ ಸಾಹಸ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸದೇ ಇರದು. ಮಣಿಪುರದ ಸಂಸ್ಕೃತಿಯನ್ನು ಬಿಂಬಿಸುವ ‘ತಲವಾರ್ ಯೋಗ’ವಂತೂ ಪ್ರೇಕ್ಷಕರ ಮೈ ಜುಮ್‌ ಅನಿಸುವಂತೆ ಮಾಡುತ್ತದೆ. 

ಒಳಾಂಗಣದಲ್ಲಿ ಮೊಳಗುವ ಸಂಗೀತದ ಅಬ್ಬರದ ನಡುವೆ ಯುವತಿಯರು ಪ್ರದರ್ಶಿಸುವ ಜಿಮ್ನಾಸ್ಟಿಕ್‌, ಕಬ್ಬಿಣದ ಟೇಬಲ್‌ವೊಂದರ ಮೇಲೆ ನಿಂತು ಯುವಕ–ಯುವತಿ ಮಾಡುವ ‘ರೋಲರ್‌ ಸ್ಕೇಟಿಂಗ್‌’ನ ಸಾಹಸ ಮೈಮನ ತಣಿಸುವುದಂತೂ ದಿಟ. ಯುವಕನೊಬ್ಬ ಯಾವ ಆಧಾರವೂ ಇಲ್ಲದೆ ಸ್ಟೀಲ್‌ನ ಏಣಿ ಹಿಡಿದು ಏರುವ, ಇಳಿಯುವ, ಹಿಮ್ಮುಖವಾಗಿ ಪಟ ಪಟನೆ ಹತ್ತುವ ಸಾಹಸವೂ ಮುದ ನೀಡುತ್ತದೆ. 

ಎರಡು ಸಣ್ಣ ಕಪ್‌ಗಳಲ್ಲಿನ ಕೆಂಪು ಮತ್ತು ಕಪ್ಪು ವರ್ಣದ ದ್ರಾವಣವನ್ನು ಕುಡಿಯುವ ವ್ಯಕ್ತಿ, ಬಳಿಕ ಮಗ್‌ವೊಂದರಲ್ಲಿನ ನೀರನ್ನೆಲ್ಲಾ ಹೊಟ್ಟೆಗಿಳಿಸಿ, ಬಾಯಿಂದ ಹಸಿರು ಮತ್ತು ಕೆಂಬಣ್ಣದ ನೀರನ್ನು ಹೊರ ಬಿಡುವ ದೃಶ್ಯ ನೋಡುಗರನ್ನು ಚಕಿತರನ್ನಾಗಿಸುತ್ತದೆ. ‘ಪೊಮೇರಿಯನ್‌’ ಶ್ವಾನಗಳು ತರಬೇತುದಾರನ ಅಣತಿಯಂತೆ ಮುಂಗಾಲುಗಳನ್ನು ಮೇಲೆತ್ತಿ ಮೈ ಬಳುಕಿಸುವುದು, ಓಡಿಬಂದು ರಿಂಗ್‌ನೊಳಗಿಂದ ಆಚೆ ಜಿಗಿಯುವುದು, ವಾಕರ್‌ ಹಿಡಿದು ಸಾಗುವುದನ್ನು ನೋಡುವುದೇ ಖುಷಿ. ಶ್ವಾನಗಳ ಈ ತುಂಟಾಟ ಮಕ್ಕಳನ್ನು ನಗೆಗಡಲಲ್ಲಿ ತೇಲಿಸುತ್ತದೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟಿದೆ. ಅದನ್ನೆಲ್ಲಾ ನೇರವಾಗಿ ನೋಡಿದರೆ ಇನ್ನೂ ಚೆಂದ. 

ಕಲಾಕೃತಿಗಳ ಲೋಕ..

ಸರ್ಕಸ್‌ ನೋಡಿ ಹೊರ ಬಂದವರಿಗೆ ಆವರಣದಲ್ಲಿ ಮತ್ತೊಂದು ಲೋಕದ ದರ್ಶನವಾಗುತ್ತದೆ. ಹುಲಿ ನವಿಲು ಘೇಂಡಾ ಮೃಗ ಮೊಲ ಜಿಂಕೆ ಚಿಂಪಾಂಜಿ ಹಸು–ಕರು ಹೀಗೆ ನಾನಾ ಪ್ರಾಣಿಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಅವುಗಳ ಮೇಲೆ ಮಕ್ಕಳನ್ನು ಕೂರಿಸಿ ಮೊಬೈಲ್‌ನಲ್ಲಿ ಫೋಟೊ ಸೆರೆ ಹಿಡಿಯುವುದು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೇ ಒಂದು ಖುಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT