ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ರಂಗಭೂಮಿ ಮರುಹುಟ್ಟಿನ ಚಿಂತನೆ ನಡೆಯಲಿ

ವೃತ್ತಿ ರಂಗಭೂಮಿ ಕಲಾವಿದರ ಸಂಘದ 23ನೇ ವಾರ್ಷಿಕೋತ್ಸವದಲ್ಲಿ ಬಾ.ಮ. ಬಸವರಾಜಯ್ಯ
Last Updated 19 ಡಿಸೆಂಬರ್ 2018, 14:11 IST
ಅಕ್ಷರ ಗಾತ್ರ

ದಾವಣಗೆರೆ: ವೃತ್ತಿ ರಂಗಭೂಮಿಯ ಅಭಿರುಚಿ ಕಡಿಮೆಯಾಗಿತ್ತಿದೆ. ಹೀಗಾಗಿ, ವೃತ್ತಿ ರಂಗಭೂಮಿಯ ಮರುಹುಟ್ಟು ಆಗಬೇಕಿದ್ದು, ಈ ಬಗ್ಗೆ ಕಲಾಸಕ್ತರು, ಕಲಾ ಪೋಷಕರು ಚಿಂತನೆ ನಡೆಸಬೇಕಿದೆ ಎಂದು ಲೇಖಕ ಬಾ.ಮ. ಬಸವರಾಜಯ್ಯ ಹೇಳಿದರು.

ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ 23ನೇ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದು ವೃತ್ತಿ ರಂಗಭೂಮಿಗೆ ಆಶ್ರಯ ನೀಡಿದ ಊರು. ಎಲ್ಲೆಡೆ ವೃತ್ತಿ ರಂಗಭೂಮಿಯ ಅಭಿರುಚಿ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲೂ ದಾವಣಗೆರೆಯಲ್ಲಿ ವೃತ್ತಿ ರಂಗಭೂಮಿ ಮೇಲಿನ ಪ್ರೀತಿ ಉಳಿದುಕೊಡಿದೆ. ಆದರೆ, ಅದು ಅಗಾಧವಾಗಿ ಬೆಳೆಯಬೇಕು ಎಂದು ಆಶಿಸಿದರು.

ದೃಶ್ಯಮಾಧ್ಯಮಗಳ ಹಾವಳಿಯಿಂದಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮೌಲ್ಯಗಳು, ಸಂದೇಶಗಳೇ ಇಲ್ಲದ ಕಾರ್ಯಕ್ರಮಗಳು ಹೆಣ್ಣನ್ನು ಖಳನಾಯಕಿಯಂತೆ ಬಿಂಬಿಸುತ್ತಿವೆ. ಹೀಗಾಗಿ, ಮತ್ತೆ ನಾಟಕದ ಪ್ರಪಂಚಕ್ಕೆ ಹಿಂತಿರುಗುವ ಮನಸ್ಸು ಜನರಲ್ಲೂ ಮೂಡುತ್ತಿದೆ ಎಂದು ಹೇಳಿದರು.

ವೃತ್ತಿ ರಂಗಭೂಮಿ ಕಲಾವಿದರ ಭಾಷಾಜ್ಞಾನ, ಭಾಷಾಶುದ್ಧಿ ಚೆನ್ನಾಗಿರುತ್ತದೆ. ಹೀಗಾಗಿ, ಈ ಕಲಾವಿದರಿಗೆ ಅಪಾರ ಸಾಮರ್ಥ್ಯವಿರುತ್ತದೆ. ವೃತ್ತಿ ರಂಗಭೂಮಿ ಕಲಾವಿದರಿಗೆ ಮಾತ್ರ ಹಳೆಗನ್ನಡವನ್ನು ಶುದ್ಧವಾಗಿ ಪ್ರಯೋಗಿಸಲು ಸಾಧ್ಯ. ವೃತ್ತಿ ರಂಗಭೂಮಿಯಿಂದ ಬಂದಿದ್ದರಿಂದಲೇ ರಾಜ್‌ಕುಮಾರ್‌ ದೊಡ್ಡ ನಟರಾದರು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ‘ವೃತ್ತಿ ರಂಗಭೂಮಿ ಕಲಾವಿದರದ್ದು ಜನಬಳಕೆಯ ಭಾಷೆ, ಜನರದ್ದೇ ಕಥೆ. ಹೀಗಾಗಿ, ಈ ನಾಟಕಗಳು ಜನರಿಗೆ ಆಪ್ತವಾಗುತ್ತವೆ. ಆದರೆ, ಹವ್ಯಾಸಿ ಕಲಾವಿದರ ನಾಟಕಗಳು ಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ. ಆ ನಾಟಕಗಳನ್ನು ನೋಡಲು ವಿಶೇಷ ಸಿದ್ಧತೆ ಬೇಕಾಗುತ್ತದೆ. ಎಷ್ಟೇ ಜನಪ್ರಿಯವಾದರೂ ವೃತ್ತಿರಂಗಭೂಮಿಯಷ್ಟು ದೇಸಿತನ ಹವ್ಯಾಸಿ ರಂಗಭೂಮಿಗೆ ಇಲ್ಲ’ ಎಂದು ಹೇಳಿದರು.

ಕೊಂಡಜ್ಜಿಯಲ್ಲಿ ‘ವೃತ್ತಿ ರಂಗಭೂಮಿ ರೆಪರ್ಟರಿ’ ಶುರುವಾದರೆ ಕಲಾವಿದರಿಗೆ ಆರ್ಥಿಕ ತೊಂದರೆಗಳು ಕಡಿಮೆಯಾಗಬಹುದು. ಕಲಾವಿದರಿಗೆ ತರಬೇತಿ ಮತ್ತು ವೇತನ ಸಿಗಲಿದೆ ಎಂದರು.

ವೃತ್ತಿರಂಗಭೂಮಿ ಕಲಾವಿದರು ವೈಮನಸ್ಸುಗಳನ್ನು ದೂರಮಾಡಿಕೊಂಡು ಒಗ್ಗಟ್ಟಿನಿಂದ ಸಾಗಬೇಕು. ಸಂಘಟನೆಗಳನ್ನು ಒಡೆಯಬಾರದು ಎಂದು ಸಲಹೆ ನೀಡಿದರು.

ಆಕ್ಸ್‌ಫರ್ಡ್‌ ಶಾಲೆ ಅಧ್ಯಕ್ಷ ಕೆ.ಸಿ. ಲಿಂಗರಾಜು, ಸಂಘದ ಗೌರವ ಅಧ್ಯಕ್ಷ ತಿಪ್ಪೇಸ್ವಾಮಿ ಚೌವ್ಹಾಣ್‌ ಮಾತನಾಡಿದರು. ಸಂಘದ ಅಧ್ಯಕ್ಷ ಎ. ಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮಹೇಶ್ವರಪ್ಪ ದೊಡ್ಡಮನಿ ನಿರೂಪಿಸಿದರು.

ಮೈಸೂರಿನ ಸಮುರೈ ರಂಗತಂಡದ ಕಲಾವಿದರು ‘ದುರ್ಯೋಧನ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT