ಸೋಮವಾರ, ಏಪ್ರಿಲ್ 19, 2021
30 °C
ಜಿಎಸ್‌ಟಿ ಮಾಹಿತಿ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್‌ ಗೌಡ

ಜಿಎಸ್‌ಟಿ ಕೌನ್ಸಿಲ್‌ನಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಎಸ್‌ಟಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದ್ದರೂ ತಿಳಿಸಿ. ಇಲ್ಲಿಯೇ ಪರಿಹಾರಿಸಲು ಸಾಧ್ಯವಾಗದ್ದನ್ನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಚರ್ಚೆ ಮಾಡಿ ಸರಿಪಡಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ (ಆಡಳಿತ) ರಮೇಶ್‌ ಗೌಡ ತಿಳಿಸಿದರು.

ಜಿಲ್ಲಾ ತೆರಿಗೆ ಸಲಹಾಗಾರರ ಸಂಘವು ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ತೆರಿಗೆ ಸಲಹೆಗಾರರಿಗೆ, ಲೆಕ್ಕ ಬರಹಗಾರರಿಗೆ, ವ್ಯಾಪಾರಸ್ತರಿಗೆ, ಕೈಗಾರಿಕೋದ್ಯಮಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊರೊನಾ ಕಾಲದಲ್ಲಿ 30 ಬಾರಿ ತಿದ್ದುಪಡಿ ಮಾಡಲಾಗಿದೆ. ಬಹುಶಃ ಮನೆಯಲ್ಲಿಯೇ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದರಿಂದ ಅವರು ಮನೆಯಲ್ಲಿ ಏನಾದರೂ ಮಾಡಬೇಕಲ್ಲ ಎಂದು ತಿದ್ದುಪಡಿ ಮಾಡುತ್ತಾ ಕುಳಿತಿರಬೇಕು. ಇವೆಲ್ಲವನ್ನು ಸರಿಪಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ತೆರಿಗೆ ಸಲಹಾಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ತೆರಿಗೆ ಸಲಹೆಗಾರರಿಗೆ ಇದು ಬಿಟ್ಟು ಬೇರೆ ವೃತ್ತಿ ಇಲ್ಲ. ಜಿಎಸ್‌ಟಿಗಳಿಗೆ ದಿನಕ್ಕೊಂದು ತಿದ್ದುಪಡಿ ತರುತ್ತಾ ನಮ್ಮನ್ನು ರುಬ್ಬುತ್ತಾ ಇದ್ದಾರೆ’ ಎಂದು ನೋವು ತೋಡಿಕೊಂಡರು.

ಕ್ಯುಆರ್‌ಎಂಪಿ ಬಂದ ಮೇಲೆ ತೆರಿಗೆ ಸಲಹೆಗಾರರಿಗೆ ಮಾತ್ರವಲ್ಲ, ವ್ಯಾಪಾರಿಗಳಿಗೂ ಬಹಳ ತೊಂದರೆಯಾಗುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೌನ್ಸಿಲ್‌ ಸದಸ್ಯರಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಜಿಎಸ್‌ಟಿ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಲಾಗುವುದು. ತೆರಿಗೆ ಸಲಹೆಗಾರರಿಗೆ ಹೇಗಾದರೂ ಅನುಕೂಲ ಮಾಡಿಕೊಡಬೇಕು ಎ‌ಂದು ಕೋರಿದರು.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ (ಇ–ಆಡಳಿತ) ಡಾ.ಮುರಳಿಕೃಷ್ಣ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಹಿರಿಯ ಚಾರ್ಟೆಡ್ ಎಕೌಂಟೆಂಟ್‌ ಅಥಣಿ ವೀರಣ್ಣ, ಇಲಾಖೆಯ ಜಂಟಿ ಆಯುಕ್ತ (ಮೇಲ್ಮನವಿ) ಶ್ರೀನಿವಾಸ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಗೌರವಾಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಎಚ್.ಎಸ್. ಮಂಜುನಾಥ್, ಕೋಶಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಎಂ.ಡಿ. ರೇವಣಸಿದ್ದಯ್ಯ ಸ್ವಾಗತಿಸಿದರು. ನಿರ್ದೇಶಕ ಸಿ. ವಿನಯ್ ವಂದಿಸಿದರು.

‘ಲೆಕ್ಕ ಪರಿಶೋಧಕರಿಗೆ ನೋಟು ರದ್ದತಿಯ ಹೊಡೆತ’

ಕಪ್ಪು ಹಣ ಪತ್ತೆಗಾಗಿ 2016ರಲ್ಲಿ ನೋಟು ಅಮಾನ್ಯ ಮಾಡಲಾಗಿತ್ತು. ಆದರೆ ಶೇ 98ಕ್ಕೂ ಅಧಿಕ ನೋಟು ವಾಪಸ್‌ ಬಂದಿದ್ದರಿಂದ ಕಪ್ಪು ಹಣ ಪತ್ತೆಯಾಗಲಿಲ್ಲ. ಇದಕ್ಕೆಲ್ಲ ಲೆಕ್ಕ ಪರಿಶೋಧಕರೇ ಕಾರಣ ಎಂಬ ತೀರ್ಮಾನಕ್ಕೆ ಪ್ರಧಾನಿ ಬಂದಿದ್ದು, ಅದನ್ನು ಸ್ಪಷ್ಟವಾಗಿ ತಿಳಿಸಿದ್ದರು. ಅಲ್ಲಿಂದ ಲೆಕ್ಕ ಪರಿಶೋಧಕರಿಗೆ ಪ್ರೋತ್ಸಾಹ ನೀಡದಿರಲು ಫೇಸ್‌ಲೆಸ್‌ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ತಿಳಿಸಿದರು.

ಆದಾಯ ತೆರಿಗೆ ಇಲಾಖೆಯು ಜಾರಿಗೆ ತಂದಿರುವ ಕರ್ ಸಮಾಧಾನ ವ್ಯವಸ್ಥೆ ಉಪಯುಕ್ತವಾಗಿಲ್ಲ. ಪೂರ್ಣ ತೆರಿಗೆ ಪಾವತಿಸಿ ವಿನಾಯಿತಿ ಪಡೆಯಿರಿ ಎಂದರೆ ಪ್ರಯೋಜನವಾಗದು ಎಂದರು.

‘ದಿನ ದಿನ ಬದಲಾಗುವ ಜಿಎಸ್‌ಟಿಯ ತಿದ್ದುಪಡಿಗಳನ್ನು ಕೂಡಲೇ ತಿಳಿದುಕೊಳ್ಳಬೇಕಾಗುತ್ತದೆ. ನಮಗೇ ಅರ್ಥವಾಗದೇ ಇದ್ದರೆ ಉಳಿದವರಿಗೆ ಸಲಹೆಯನ್ನು ನೀಡುವುದಾದರೂ ಹೇಗೆ? ಜಿಎಸ್‌ಟಿ ಚೆನ್ನಾಗಿದೆ. ಆದರೆ ಅವಸರದಲ್ಲಿ ಜಾರಿಗೆ ತಂದಿದ್ದರಿಂದ ತೊಂದರೆಯಾಘಿದೆ’ ಎಂದು ತಿಳಿಸಿದರು.‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು