ಮಂಗಳವಾರ, ಡಿಸೆಂಬರ್ 7, 2021
24 °C
ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟೆ ಆಡುವಲ್ಲಿ ನಿಷ್ಣಾತ

ಸಂತೇಬೆನ್ನೂರು: ಅಪರೂಪದ ನೀರು ನಾಯಿ ಪ್ರತ್ಯಕ್ಷ

ಕೆ.ಎಸ್. ವೀರೇಶ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಕಳೆದ ವಾರ ಸುರಿದ ಎಡೆಬಿಡದ ಮಳೆಗೆ ಸೂಳೆಕೆರೆ ಕೋಡಿಯಲ್ಲಿ ಭರ್ಜರಿ ಹೊರ ಹರಿವು ಉಂಟಾಗಿತ್ತು. ಇದಕ್ಕೆ ಹೊಂದಿಕೊಂಡಿರುವ ಮಾವಿನ ತೋಪಿನ ಆಳ ಪ್ರದೇಶದಲ್ಲಿ ಅಪರೂಪದ ಜೀವ ಪ್ರಬೇಧ ನೀರು ನಾಯಿಗಳ ಹಿಂಡು ನೀರಿನಲ್ಲಿ ಮುಳುಗೇಳುವುದನ್ನು ಈಚೆಗೆ ಸಾರ್ವಜನಿಕರು
ಗುರುತಿಸಿದ್ದಾರೆ.

ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ, ಚಪ್ಪಟೆ ತಲೆ, ಬಲವಾದ ಬಾಲ, ಹುಟ್ಟುಗಳಿಂತಿರುವ ಕಾಲು, ಸ್ವರ್ಶ ಸೂಕ್ಷ್ಮ ಮೀಸೆ ಇದರ ದೈಹಿಕ ವಿಶೇಷತೆ. ವೈಜ್ಞಾನಿಕ ನಾಮಧೇಯ ಯುರೇಷಿಯನ ಒಟ್ಟರ್. ಶುದ್ಧ ನೀರಿನಲ್ಲಿ ವಾಸಿಸುವ ನೀರುನಾಯಿ ಚಾಣಾಕ್ಷ ಮೀನು ಬೇಟೆಗಾರ. ಕೆರೆ, ಹಳ್ಳ–ಕೊಳ್ಳದಲ್ಲಿ ಹರಿವ ನೀರಿಗೆ ಹಿಮ್ಮುಖ ಚಲಿಸುವ ಮೀನುಗಳ ಹುಡುಕಾಟದಲ್ಲಿ ಸೂಳೆಕೆರೆಯಲ್ಲಿ ಕಾಣಿಸಿರುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವಿಡಿಯೊ ಚಿತ್ರ ತೆಗೆದ ಕೆರೆಬಿಳಚಿಯ ಅಸ್ಲಂ ಷೇಕ್.

ತಕ್ಷಣಕ್ಕೆ ಮುಂಗುಸಿಯ ಮುಖ ಹೋಲುವ ಇದು ವಿರಳ ಗೋಚರ ಜೀವಿ. ಶಬ್ದ, ಜನರಿಂದ ದೂರವಿರುವ ಅಂಜುಬುರುಕ. ಅಪರೂಪಕ್ಕೆ ಎದುರಾಗುವ ಜಲಚರ, ಮೀನು, ಏಡಿ, ಕಪ್ಪೆ, ಬಾತುಕೋಳಿ, ನೀರುಕೋಳಿ ಬೇಟೆ ಆಡುವಲ್ಲಿ ನಿಷ್ಣಾತ. ಈಚೆಗೆ ನಲ್ಲೂರು ಹಾಗೂ ಪುಟ್ಟಪ್ಪನ ಕೆರೆಯಲ್ಲಿಯೂ ನೀರು ನಾಯಿ ಪ್ರತ್ಯಕ್ಷವಾಗಿ ಕಂಡಿದ್ದೇವೆ ಎನ್ನುತ್ತಾರೆ ನಲ್ಲೂರಿನ
ಸತೀಶ್.

‘ನಲ್ಲೂರು ಕೆರೆಯಲ್ಲಿ ಬೆಳಿಗ್ಗೆ ಮಾತ್ರ ನೀರು ನಾಯಿಗಳ ಗುಂಪು ನೋಡಿದ್ದೇನೆ. ಎರಡು ವರ್ಷಗಳಿಂದ ಗಮನಿಸಿದ್ದೇನೆ. ವಿಡಿಯೊ, ಫೋಟೊ ತೆಗೆಯಲು ಸಾಧ್ಯವಾಗುತ್ತಿಲ್ಲ. ತಕ್ಷಣ ಮರೆಯಾಗುವ ಜೀವಿ. ಎರಡು ವರ್ಷಗಳ ಹಿಂದೆ ಬಸ್ಸಿಗೆ ಸಿಲುಕಿ ಪ್ರಾಣ ಕಳೆದುಕೊಂಡ ನೀರು ನಾಯಿ ಗುರುತಿಸಲಾಗಿತ್ತು’ ಎನ್ನುತ್ತಾರೆ ಅರಣ್ಯ ಇಲಾಖೆ
ಸಿಬ್ಬಂದಿ ರವಿ.

ನೆಲದ ವಾಸ ಕಡಿಮೆ

‘ಮಳೆಯಿಂದ ಎಲ್ಲೆಡೆ ನೀರಿನ ಹರಿವು ಹೆಚ್ಚಾಗಿತ್ತು. ಭದ್ರಾ ಜಲಾಶಯದ ಹಿನ್ನೀರಿನ ಮೂಲಕ ಸೂಳೆಕೆರೆ ತಲುಪಿರುವ ಸಾಧ್ಯತೆ ಹೆಚ್ಚು. ಅಲ್ಲಿ ಇವುಗಳ ಸ್ವಾಭಾವಿಕ ನೆಲೆ ಇದೆ. ನೀರಿನಲ್ಲಿ ಬಲವಾದ ಬೇಟೆಗಾರ. ನೆಲದ ವಾಸ ಕಡಿಮೆ. ಮೀನಿನ ಸಾಂದ್ರತೆ ಹೆಚ್ಚಿರುವ ಪ್ರದೇಶದಲ್ಲಿ ಹಸಿವು ನೀಗಿಸುವ ಸ್ವಾಭಾವಿಕ ಆಯ್ಕೆ’

– ವೀರೇಶ್ ನಾಯ್ಕ್, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು