ಬುಧವಾರ, ಮೇ 18, 2022
26 °C
ಹಿಂದೂ–ಮುಸ್ಲಿಂ ಭಾವೈಕ್ಯಕ್ಕೆ ಕಾರಣವಾದ ಕಾರ್ಯಕ್ರಮ

ಯುಗಾದಿಗೆ ರೇಷನ್‌ ಕಿಟ್ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯುಗಾದಿ ಪ್ರಯುಕ್ತ ಪಾಲಿಕೆ ಸದಸ್ಯ ಕೆ. ಚಮನ್‌ ಸಾಬ್‌ ಅವರು ತಮ್ಮ ಹುಸೇನಿಯಾ ಫೌಂಡೇಶನ್‌ ವತಿಯಿಂದ 600 ಹಿಂದೂ ಕುಟುಂಬಗಳಿಗೆ ರೇಷನ್‌ ಕಿಟ್‌ ವಿತರಣೆ ಮಾಡುವ ಮೂಲಕ ಭಾವೈಕ್ಯ ಮೆರೆದಿದ್ದಾರೆ.

5 ಕೆ.ಜಿ. ಅಕ್ಕಿ, 1 ಕೆ.ಜಿ. ರವೆ, 750 ಗ್ರಾಂ ಬೇಳೆ, 500 ಗ್ರಾಂ ಶ್ಯಾವಿಗೆ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಗೋಧಿ ಹಿಟ್ಟು, 1 ಕೆ.ಜಿ. ಅವಲಕ್ಕಿ ಇರುವ 600 ರೇಷನ್ ಕಿಟ್‍ಗಳನ್ನು ಪಾಲಿಕೆಯ 14ನೇ ವಾರ್ಡ್‌ನಲ್ಲಿ ವಿತರಿಸಿದರು.

‘ನಾವು ಇಂತಹದೇ ಜಾತಿಯಲ್ಲಿ ಹುಟ್ಟಬೇಕೆಂದು ಇಚ್ಛೆ ಪಟ್ಟಿರುವುದಿಲ್ಲ. ಯಾವುದೇ ಜಾತಿಯವರಾಗಿದ್ದರೂ ಮಾನವೀಯತೆಯಿಂದ ಜೀವನ ನಡೆಸಬೇಕು. ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಬೇಕೆಂಬುದು ನನ್ನ ಧ್ಯೇಯ’ ಎಂದು ಕೆ. ಚಮನ್ ಸಾಬ್‍ ತಿಳಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್‍ ಮಾತನಾಡಿ, ‘ಈ ಹಿಂದೆ ಕೋವಿಡ್ ಸಂಕಷ್ಟದ ಕಾಲದಲ್ಲಿ ಸಾವಿರಾರು ಬಡ ಜನರಿಗೆ ಚಮನ್‍ಸಾಬ್‍ ರೇಷನ್ ಕಿಟ್‍ಗಳನ್ನು ನೀಡಿ ಸ್ಪಂದಿಸಿದ್ದರು. ಇದೀಗ ಯುಗಾದಿ ಹಬ್ಬದ ಸಂದರ್ಭದಲ್ಲಿ 600 ಬಡ ಹಿಂದೂ ಕುಟುಂಬಗಳಿಗೆ ರೇಷನ್ ಕಿಟ್ ನೀಡಿರುವುದು ಸ್ವಾಗತಾರ್ಹ’ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ ಕೋಮುವಾದಿಗಳು ಹಿಂದು-ಮುಸ್ಲಿಂ ಬೇರ್ಪಡೆಗೆ ಗೊಂದಲ ಮೂಡಿಸುತ್ತಿದ್ದಾರೆ. ಇಂತಹ ಸಂಕೀರ್ಣ ಸಂದರ್ಭದಲ್ಲಿ ಯುಗಾದಿ ಉಡುಗೊರೆ ನೀಡಿ ಹಿಂದು–ಮುಸ್ಲಿಂ ಏಕತೆಯನ್ನು ಕೆ. ಚಮನ್ ಸಾಬ್‍ರವರು ತೋರಿದ್ದಾರೆ. ಕನ್ನಡ ನಾಡು ಸಂತ ಶಿಶುನಾಳ ಶರೀಫ್ ಹಾಗೂ ಗುರು ಗೋವಿಂದ ಭಟ್ಟರು ಒಟ್ಟಿಗೆ ಜೀವಿಸಿದ ನಾಡು. ರಾಜಕೀಯ ಕಾರಣಕ್ಕಾಗಿ ಮುಸ್ಲಿಮರ ವಿರುದ್ಧ ಇಲ್ಲಸಲ್ಲದ ಪ್ರಚಾರ ಮಾಡುತ್ತಿರುವ ಕೋಮುವಾದಿಗಳ ಆಟ ನಡೆಯುವುದಿಲ್ಲ‌ ಎಂದು ತಿಳಿಸಿದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ.ಎಸ್. ಮಂಜುನಾಥ ಗಡಿಗುಡಾಳ್, ಹುಸೇನಿಯಾ ಫೌಂಡೇಷನ್ ಕಾರ್ಯದರ್ಶಿ ಕೆ. ಜಬೀವುಲ್ಲಾ ಹಾಗೂ ಟ್ರಸ್ಟಿಗಳಾದ ರಹಮತ್‌ ಉಲ್ಲಾ, ಮಹಮ್ಮದ್ ಜುಬೇರ್ ಹಾಗೂ ಸಲ್ಮಾನ್ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು