‘ರತ್ನಮಂಜರಿ’ 17ಕ್ಕೆ ಬಿಡುಗಡೆ

ಶನಿವಾರ, ಮೇ 25, 2019
28 °C

‘ರತ್ನಮಂಜರಿ’ 17ಕ್ಕೆ ಬಿಡುಗಡೆ

Published:
Updated:
Prajavani

ದಾವಣಗೆರೆ: ಅನಿವಾಸಿ ಕನ್ನಡಿಗರೇ ಸೇರಿ ನಿರ್ಮಾಣ ಮಾಡಿರುವ ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾ ಹಂದರ ಇರುವ ಚಿತ್ರ ‘ರತ್ನಮಂಜರಿ’ ಮೇ 17ರಂದು ರಾಜ್ಯದಾದ್ಯಂತ ಬಿಡುಗಡೆಗೊಳ್ಳಲಿದೆ.

‘ಅಮೆರಿಕದ ನೈಜ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ’ ಎಂದು ಚಿತ್ರದ ನಿರ್ದೇಶಕ ಪ್ರಸಿದ್ಧ್‌ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಿತ್ರದಲ್ಲಿ ಮೂವರು ನಾಯಕಿಯರಾಗಿ ಅಭಿನಯಿಸಿದ್ದಾರೆ. ಈ ಮೂವರಲ್ಲಿ ರತ್ನಮಂಜರಿ ಯಾರು ಎನ್ನುವುದೇ ಚಿತ್ರದ ಕುತೂಹಲಕಾರಿ ಅಂಶ. ಹರ್ಷವರ್ಧನ್‌ರಾಜ್‌ ಸಂಗೀತ ಸಂಯೋಜನೆ ಮಾಡಿದ್ದು, ಛಾಯಾಗ್ರಹಣವನ್ನು ಪ್ರೀತಂ ತೆಗ್ಗಿನಮನೆ ಮಾಡಿದ್ದಾರೆ. ಎಸ್‌. ಸಂದೀಪ್‌ ಕುಮಾರ್‌, ನಟರಾಜ್‌ ಹಳೇಬೀಡು ಹಾಗೂ ಡಾ. ನವೀನ್‌ಕೃಷ್ಣ ಬಂಡವಾಳ ಹೂಡಿದ್ದಾರೆ ಎಂದು ವಿವರಿಸಿದರು.

ರತ್ನಮಂಜರಿ ಶೀರ್ಷಿಕೆಯಡಿ ಹಿಂದೆ ಬಂದ ಚಿತ್ರ ಮತ್ತು ಈ ಚಿತ್ರ ಎರಡೂ ಸಂಗೀತಮಯ ಚಿತ್ರಗಳು ಎಂಬುದನ್ನು ಬಿಟ್ಟರೆ ಮತ್ಯಾವ ಹೋಲಿಕೆಗಳಿಲ್ಲ. ಈ ಚಿತ್ರ ಅರ್ಧದಷ್ಟು ಅಮೆರಿಕದಲ್ಲಿ ಚಿತ್ರೀಕರಣಗೊಂಡಿದ್ದು, ಉಳಿದ ಭಾಗ ಕೊಡಗಿನಲ್ಲಿ ಚಿತ್ರೀಕರಿಸಲಾಗಿದೆ ಎಂದರು.

ನಾಯಕನಟ ರಾಜ್‌ಚರಣ್‌, ‘ಸಿದ್ಧಾಂತ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಮೆರಿಕದಲ್ಲಿ ಸಸ್ಯ ವಿಜ್ಞಾನಿಯಾಗಿರುತ್ತೇನೆ. ನನ್ನಲ್ಲಿರುವ ವಿಶೇಷ ಫೋಟೊಗ್ರಫಿಕ್‌ ಮೆಮೊರಿಯಿಂದ ಅಮೆರಿಕದಲ್ಲಿ ನಡೆದ ಕೊಲೆಯೊಂದರ ಮೂಲ ಹುಡುಕುತ್ತಾ ಹೋಗುತ್ತೇನೆ. ಆಗ ನೂರಾರು ಕಷ್ಟಗಳು ಎದುರಾಗುತ್ತವೆ. ಅದನ್ನೆಲ್ಲ ಧೈರ್ಯದಿಂದ ಎದುರಿಸಿ ಕೊಲೆಗಾರರನ್ನು ಹೇಗೆ ಕಂಡು ಹಿಡಿಯುತ್ತೇನೆ ಎಂಬುದೇ ಈ ಚಿತ್ರದ ಕತೆ’ ಎಂದು ಹೇಳಿದರು.

ನಾಯಕಿನಟಿ ಅಖಿಲಾ ಪ್ರಕಾಶ್‌, ‘ಫ್ಯಾಷನ್‌ ಡಿಸೈನರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅಮೆರಿಕದಲ್ಲಿದ್ದರೂ ಸಂಪ್ರದಾಯ ಮರೆತಿರುವುದಿಲ್ಲ. ಹಾಡುಗಳನ್ನು ಮಲೇಷ್ಯಾ, ಕೊಡಗಿನಲ್ಲಿ ಚಿತ್ರೀಕರಿಸಲಾಗಿದೆ’ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌. ಸಂದೀಪ್‌ಕುಮಾರ್‌, ನಟರಾಜ್‌ ಹಳೇಬೀಡು, ಪಲ್ಲವಿರಾಜು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !