ಶುಕ್ರವಾರ, ಡಿಸೆಂಬರ್ 2, 2022
19 °C

ವೀರಶೈವ-ಲಿಂಗಾಯತ ಮಹಾಸಭಾದ ಪ್ರತಿನಿಧಿಗಳ ನೋಂದಣಿ ಪತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ 23ನೇ ಮಹಾ ಅಧಿವೇಶನಕ್ಕೆ ಸಂಬಂಧಿಸಿದಂತೆ ಪ್ರತಿನಿಧಿಗಳ ನೋಂದಣಿ ಪತ್ರಗಳನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅವರ ನಿವಾಸದಲ್ಲಿ ಬುಧವಾರ ಬಿಡುಗಡೆ ಮಾಡಿದರು.

ಡಿ.24 ರಿಂದ 26ರ ವರೆಗೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ನಡೆಯಲಿದೆ ಸುದ್ದಿಗಾರರಿಗೆ ತಿಳಿಸಿದರು.

ಅಧಿವೇಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು. ಎರಡನೇ ದಿನ ಮಹಿಳಾ ಸಮಾವೇಶ, ಯುವ ಸಮಾವೇಶ ನಡೆಯಲಿವೆ. ಮೂರನೇ ದಿನ ಧಾರ್ಮಿಕ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ನಾಡಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಚರ್ಚಾ ಗೋಷ್ಠಿ, ಕೃಷಿ ಮೇಳ ಆಯೋಜಿಸಲಾಗುವುದು ಎಂದು ವಿವರಿಸಿದರು.

ಅಧಿವೇಶನಕ್ಕೆ ಮಹಾಸಭೆಯ ಸದಸ್ಯರು ಸೇರಿ ಒಂದು ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದ್ದು, ಅವರಿಗೆ ಮೂರು ದಿನಗಳ ಕಾಲ ವಸತಿ, ಊಟ, ತಿಂಡಿಯ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಎಲ್ಲ ಉಪ ಪಂಗಡಗಳೂ ಒಂದಾಗಬೇಕು ಎಂಬುದು ನಮ್ಮ ಆಶಯ. ಆಗ ಸಮಾಜದ ಜನಸಂಖ್ಯೆ 2 ಕೋಟಿಯನ್ನು ದಾಟುತ್ತದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಕೇಂದ್ರ ಸರ್ಕಾರದಿಂದ ಒಬಿಸಿ ಮೀಸಲಾತಿ, ರಾಜ್ಯ ಸರ್ಕಾರದಿಂದ ಉಪ ಪಂಗಡಗಳಿಗೆ ಮೀಸಲಾತಿ ಸಿಗಬೇಕು. ದಾವಣಗೆರೆಯ ಶಾಮನೂರು ರಸ್ತೆಯಲ್ಲಿರುವ ನಿವೇಶನದಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಿಸುವ ಕುರಿತು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧಿವೇಶನ ಸ್ಥಳದಲ್ಲಿ 160–200 ಅಡಿ ಅಳತೆಯ ಪೆಂಡಾಲ್ ಹಾಕಲಾಗುವುದು. ಅತಿಥಿಗಳಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಮಾಹಿತಿ ನೀಡಿದರು.

ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎ.ಎಸ್. ವೀರಣ್ಣ, ಎಸ್.ಎಸ್. ಗಣೇಶ್, ಮುಖಂಡರಾದ ಜಿ. ಶಿವಯೋಗಪ್ಪ, ಕಿರುವಾಡಿ ಸೋಮಣ್ಣ, ಸಿದ್ದೇಶ್, ಬಿ.ಜಿ. ರಮೇಶ್, ಸಂದೀಪ್ ಅಣಬೇರು, ಪುಷ್ಪಾ ವಾಲಿ, ವಿನುತಾ ರವಿ, ದ್ರಾಕ್ಷಾಯಿಣಮ್ಮ, ರಜನಿ, ಶುಭಾ ಇದ್ದರು.

ದಾವಣಗೆರೆ ದಕ್ಷಿಣದಿಂದ ಅರ್ಜಿ

‘ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ಈ ಕ್ಷೇತ್ರದಿಂದ ನಾನೊಬ್ಬನೇ ಅರ್ಜಿ ಸಲ್ಲಿಸಿರುವುದು’ ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಮಾಯಕೊಂಡ ಕ್ಷೇತ್ರದಲ್ಲಿ ಭಾರಿ ಆಕಾಂಕ್ಷಿಗಳಿದ್ದಾರೆ. 15–20 ಮಂದಿಯಲ್ಲಿ ಯಾರು ಅಭ್ಯರ್ಥಿಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು