ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ |ಗ್ರಾಹಕರಿಗೆ ಮೂರು ತಿಂಗಳೊಳಗೆ ಪರಿಹಾರ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಎನ್. ಶ್ರೀನಿವಾಸಯ್
Last Updated 24 ಡಿಸೆಂಬರ್ 2019, 16:22 IST
ಅಕ್ಷರ ಗಾತ್ರ

ದಾವಣಗೆರೆ: ಗ್ರಾಹಕರಿಗೆ ಶೀಘ್ರವಾಗಿ ನ್ಯಾಯ ಒದಗಿಸಲು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸದಾ ಸಿದ್ಧವಿದೆ. ಮೋಸಕ್ಕೆ ಒಳಗಾದ ಗ್ರಾಹಕರಿಗೆ 3 ತಿಂಗಳೊಳಗೆ ಪರಿಹಾರ ಒದಗಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ.ಎನ್. ಶ್ರೀನಿವಾಸಯ್ಯ ಹೇಳಿದರು.

ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಜನತಾ ಬಜಾರ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೌಟಿಲ್ಯನ ಕಾಲದಿಂದಲೂ ‘ಗ್ರಾಹಕ’ ಎಂಬ ಪದವಿದೆ. ಗ್ರಾಹಕರಿಗೆ ಮೋಸವಾದಾಗ ಮೋಸ ಮಾಡಿದ ವ್ಯಕ್ತಿಗೆ ಅದೇ ವಸ್ತುವನ್ನು ಅವನ ಕೊರಳಿಗೆ ಆಗಿ ಶಿಕ್ಷೆ ನೀಡಲಾಗುತ್ತಿತ್ತು. 1986ರಲ್ಲಿ ರಾಜೀವ್ ಗಾಂಧಿ ಕಾಲದಲ್ಲಿ ಜಾರಿಗೆ ಬಂದಿತು. ಜನರು ಕೋರ್ಟ್‌ಗೆ ಅಲೆಯಬೇಕಾಗುತ್ತದೆ ಎಂಬ ಆಲೋಚನೆಯಿಂದ ಕೋರ್ಟ್‌ಗೆ ಬರಲು ಹಿಂಜರಿಯುತ್ತಾರೆ. ಪರಿಹಾರದ ಮೊತ್ತವನ್ನು ಹೆಚ್ಚಿಸಿದ್ದು, ಗ್ರಾಹಕರು ಯಾವುದೇ ಭಯ ಮತ್ತು ಅನುಮಾನವಿಲ್ಲದೇ ಪಾರದರ್ಶಕವಾಗಿ ಪರಿಹಾರವನ್ನು ಪಡೆಯಬಹುದು’ ಎಂದು ಸಲಹೆ ನೀಡಿದರು.

‘ಯಾವುದೇ ಗ್ರಾಹಕರು ವಸ್ತುವನ್ನು ಕೊಂಡ ತಕ್ಷಣ ಬಿಲ್ ಅನ್ನು ಕಡ್ಡಾಯವಾಗಿ ಪಡೆಯಬೇಕು. ಇಲ್ಲದಿದ್ದರೆ ಪರಿಹಾರ ಪಡೆಯಲು ಆಗುವುದಿಲ್ಲ. 2 ವರ್ಷದೊಳಗೆ ನೀವು ಕೊಂಡ ವಸ್ತುವಿನಲ್ಲಿ ಮೋಸವಿದ್ದರೇ ದೂರನ್ನು ನೀಡಬಹುದು. ಆನ್‍ಲೈನ್‍ಗೆ ಸಂಬಂಧಿಸಿದ ವ್ಯಾವಹಾರ, ತಾಂತ್ರಿಕ ವ್ಯಾವಹಾರಗಳಲ್ಲಿ ಮೋಸಹೋದ ಗ್ರಾಹಕರು ಪರಿಹಾರವನ್ನು ಪಡೆಯಬಹುದಾಗಿದೆ. ಆರೋಗ್ಯ ವಿಮೆ ಮತ್ತು ವಾಹನ ವಿಮೆಗಳನ್ನು ನೀಡುವಲ್ಲಿ ವಿಳಂಬ ಮಾಡುವುದೂ ಗ್ರಾಹಕರ ವಂಚನೆ ವ್ಯಾಪ್ತಿಗೆ ಬರುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ನಜ್ಮಾ ಮಾತನಾಡಿ, ‘ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಸಿಗಬೇಕು. ವರ್ತಕರು ಬರೀ ವ್ಯಾಪಾರವನ್ನು ನೋಡದೇ ನ್ಯಾಯಯುತ ಬೆಲೆಗೆ ವಸ್ತುಗಳನ್ನು ನೀಡಬೇಕು. ಆ ಮೂಲಕ ಗ್ರಾಹಕರು ಇನ್ನಷ್ಟು ಹತ್ತಿರವಾಗುತ್ತಾರೆ. ಅವಧಿ ಮುಗಿದ ಪದಾರ್ಥಗಳನ್ನು ಮಾರಾಟ ಮಾಡಬಾರದು’ ಎಂದು ಸಲಹೆ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಗ್ರಾಹಕರ ಸಮಗ್ರ ಕಲ್ಯಾಣ ಸಾಧಿಸಲು ಗ್ರಾಹಕರ ಜಾಗೃತಿಯು ನಿರಂತರವಾಗಿರಬೇಕು. ಶಾಲೆಗಳಲ್ಲಿ ಗ್ರಾಹಕರ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 2020ರ ಮಾರ್ಚ್ ತಿಂಗಳಲ್ಲಿ ಗ್ರಾಹಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆನಾಸ ಹಾಗೂ ಗ್ರಾಹಕರ ವ್ಯವಹಾರಗಳ ನಿರ್ದೇಶಕ ವ್ಯವಸ್ಥಾಪಕರಾದ ಪಿ.ಅಂಜನಪ್ಪ ‘ಗ್ರಾಹಕರ ರಕ್ಷಣಾ ಕಾಯ್ದೆಯ’ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಜ್ಯೋತಿ ರಾಜೇಶ್ ಜಂಬಗಿ, ಜಿಲ್ಲಾ ಆಹಾರ ಮತ್ತು ನಾಗರಿಕ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷ. ಕಾನೂನು ಮಾಪನ ಶಾಸ್ತ್ರ ಇಲಾಖೆಯ ಟಿ.ಎನ್. ದೆವರಾಜ್, ನ್ಯಾಯಬೆಲೆ ಅಂಗಂಡಿಗಳ ಅಧ್ಯಕ್ಷ ಗುರುಸ್ವಾಮಿ ಉಪಸ್ಥಿತರಿದ್ದರು.
(ಫೋಟೋ ಇದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT