ಭಾನುವಾರ, ಮೇ 22, 2022
21 °C
ಶಾಸಕ ಎಂ.ಪಿ. ರೇಣುಕಾಚಾರ್ಯ ಅನಿಸಿಕೆ

ನಾನು ತಪ್ಪು ಮಾಡಿದ್ದಿದ್ದರೆ ಸಿದ್ದರಾಮಯ್ಯ ಬಿಡುತ್ತಿದ್ದರೇ: ರೇಣುಕಾಚಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊನ್ನಾಳಿ: ‘ಪರಿಶಿಷ್ಟ ಜಾತಿ ಪ್ರಮಾಣಪತ್ರದ ವಿಷಯದಲ್ಲಿ ಒಂದು ವೇಳೆ ನಾನು ತಪ್ಪು ಮಾಡಿದ್ದಿದ್ದರೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ನನ್ನನ್ನು ಸುಮ್ಮನೆ ಬಿಡುತ್ತಿದ್ದರೇ?’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಬಿಜೆಪಿಯ ತಾಲ್ಲೂಕು ಮಂಡಳ ಹಾಗೂ ತಾಲ್ಲೂಕು ‌ಎಸ್‌ಸಿ, ಎಸ್‌ಟಿ ಮೋರ್ಚಾ ವತಿಯಿಂದ ನಗರದ ಅಗಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜಯಂತಿ ಹಾಗೂ ಎಸ್‌ಸಿ, ಎಸ್‌ಟಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನನ್ನ ಮಗಳಿಗೆ ಎಸ್‌ಸಿ ಪ್ರಮಾಣಪತ್ರವನ್ನು ನಾನು ಕೊಡಿಸಿಲ್ಲ. ನನ್ನ ಸಹೋದರ ನನ್ನ ಮಗಳು ಚಿಕ್ಕವಳಿದ್ದಾಗಲೇ ಕೊಡಿಸಿದ್ದ. ನಾನು ಅದನ್ನು ವಾಪಸ್‌ ಮಾಡಿದ್ದೇನೆ. ಈ ವಿಷಯವನ್ನು ನಾನು ಸದನದಲ್ಲಿಯೇ ಸ್ಪಷ್ಟಪಡಿಸಿದ್ದೇನೆ. ಒಂದು ವೇಳೆ ನಾನೇ ಈ ತಪ್ಪು ಮಾಡಿದ್ದರೆ ಸಿದ್ದರಾಮಯ್ಯ ಅವರು ನನ್ನನ್ನು ಸುಮ್ಮನೆ ಬಿಡುತ್ತಿರಲಿಲ್ಲ’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರು ಎರಡು ಬಾರಿ ಸಂಸತ್ತು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್ ಪಕ್ಷವೇ ಅವರ ಸೋಲಿಗೆ ಕಾರಣವಾಗಿತ್ತು.
ಅಂಬೇಡ್ಕರ್ ನಿಧನರಾದಾಗ ಅವರ ಮೃತದೇಹ ಹೂಳಲು ಜವಾಹರಲಾಲ್ ನೆಹರೂ ಅವರು ಒಂದಿಷ್ಟು ಜಾಗ ಕೊಡಲಿಲ್ಲ. ಅಂತಹ ಹೀನ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು. ಬಿಜೆಪಿ ಎಂದರೆ ಕೇವಲ ಬ್ರಾಹ್ಮಣರ, ಲಿಂಗಾಯತರ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರಿಂದು ಸರ್ವ ಜನಾಂಗಗಳ ಪಕ್ಷವಾಗಿ  ಹೊರಹೊಮ್ಮಿದೆ’ ಎಂದು ಹೇಳಿದರು.

‘ನಾನು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದೇನೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಅವರು ತಮ್ಮ ಗೆಸ್ಟ್ ಹೌಸ್‌ನಲ್ಲಿ ಎಸ್‌ಸಿ, ಎಸ್‌ಟಿ ಮುಖಂಡರ ಸಭೆ ಕರೆದು ಗೇಲಿ ಮಾಡಿದರು. ರೇಣುಕಾಚಾರ್ಯ ಈಗ ಖೆಡ್ಡಾಕ್ಕೆ ಬಿದ್ದಿದ್ದಾನೆ. ಅವನ ಕತೆ ಮುಗಿಯಿತು. ದಲಿತರು ಅವರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಕುಮ್ಮಕ್ಕು ನೀಡಿದ್ದರು. ಆದರೆ, ಅದು ವಿಫಲವಾಯಿತು’ ಎಂದರು.

ಎಸ್‌ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹನುಮಂತನಾಯ್ಕ, ತಾಲ್ಲೂಕು ಅಧ್ಯಕ್ಷ ಉಮೇಶ್ ಬೇಲಿಮಲ್ಲೂರು, ಬಿಜೆಪಿ ತಾಲ್ಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಬಣಜಾರ್ ಸಂಘದ ತಾಲ್ಲೂಕು ಅಧ್ಯಕ್ಷ ಜುಂಜಾನಾಯ್ಕ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಕೆರೆ ನಾಗರಾಜ್ ಇತರರು ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಇದಕ್ಕೂ ಮುನ್ನ ದೇವನಾಯಕನಹಳ್ಳಿ ಕನಕದಾಸ ವೃತ್ತದಿಂದ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಹೊರಟ ದಲಿತ ಮುಖಂಡರೊಂದಿಗೆ ಎಂ.ಪಿ. ರೇಣುಕಾಚಾರ್ಯ ನೃತ್ಯ ಮಾಡಿದರು.

ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷ ಬಾಬು ಹೋಬಳದಾರ್, ಉಪಾಧ್ಯಕ್ಷ ರಂಜಿತಾ ಚನ್ನಪ್ಪ, ಮುಖಂಡರಾದ ದಿಡಗೂರು ಫಾಲಾಕ್ಷಪ್ಪ, ನೆಲಹೊನ್ನೆ ಮಂಜುನಾಥ್, ತಾಲ್ಲೂಕು ಎಸ್‌ಟಿ ಮೋರ್ಚಾ ಅಧ್ಯಕ್ಷ ಜೆಸಿಬಿ ಹನುಮಂತಪ್ಪ, ಕೆವಿ. ಚನ್ನಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.