ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತರೂ ಬಿಜೆಪಿ ನಾಯಕರಿಗೆ ಬುದ್ಧಿ ಬಂದಿಲ್ಲ: ಎಂ.ಪಿ. ರೇಣುಕಾಚಾರ್ಯ

Published 27 ಜೂನ್ 2023, 16:06 IST
Last Updated 27 ಜೂನ್ 2023, 16:06 IST
ಅಕ್ಷರ ಗಾತ್ರ

ಹೊನ್ನಾಳಿ: ‘ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಬಿಜೆಪಿ ನಾಯಕರಿಗೆ ಇನ್ನೂ ಬುದ್ಧಿ ಬಂದಂತೆ ಕಾಣುತ್ತಿಲ್ಲ’ ಎಂದು ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಟೀಕಿಸಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚುನಾವಣೆ ಮುಗಿದು ಒಂದೂವರೆ ತಿಂಗಳು ಕಳೆದರೂ ಪಕ್ಷದ ವರಿಷ್ಠರಿಗೆ ವಿಧಾನಸಭೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ, ಈವರೆಗೂ ನೀಡಿಲ್ಲ. ರಾಜೀನಾಮೆ ನೀಡಿದ್ದಾಗಿ ಒಮ್ಮೆ ಹೇಳುತ್ತಾರೆ. ಮತ್ತೊಮ್ಮೆ ರಾಜೀನಾಮೆ ನೀಡಿಲ್ಲ ಎನ್ನುತ್ತಾರೆ’ ಎಂದು ದೂರಿದರು.

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ರಾಜ್ಯ ಸುತ್ತುವುದು ಮುಖ್ಯವಲ್ಲ. ಅವರಿಗೆ ಮತಗಳನ್ನು ತರುವ ಶಕ್ತಿ ಇರಬೇಕು. ಸಿದ್ದರಾಮಯ್ಯ ಹಾಗೂ  ಡಿ.ಕೆ. ಶಿವಕುಮಾರ್ ಅವರ ಜೋಡಿ ರಾಜ್ಯದಾದ್ಯಂತ ಸಂಚರಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತಂದಿದೆ. ನಮ್ಮವರು ಸೂಜಿ– ದಾರದಂತೆ ಪೋಣಿಸುವ ಕೆಲಸ ಮಾಡದೇ ಕತ್ತರಿಸುವ ಕತ್ತರಿಯಾದರು. ಕಾಲೆಳೆದು ನಮ್ಮ ಸೋಲಿಗೆ ಕಾರಣರಾದರು. ಒಳ ಹೊಡೆತಗಳಿಂದ ನಮ್ಮ ಸೋಲಾಯಿತು’ ಎಂದು ಅವರು ವಿಶ್ಲೇಷಿಸಿದರು.

‘ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಸೋಲಿಗೆ ಪ್ರಮುಖ ಕಾರಣ. ಅವರ ಕಣ್ಣೀರಿನಲ್ಲಿ ಬಿಜೆಪಿಯೂ ಕೊಚ್ಚಿ ಹೋಗಲಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆಯೇ ಬಿಜೆಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು’ ಎಂದರು.

‘ಒಳಮೀಸಲಾತಿ ಜಾರಿಗೆ ತನ್ನಿ ಎಂದು ನಮ್ಮನ್ನು ಯಾರೂ ಕೇಳಿರಲಿಲ್ಲ. ಮೀಸಲಾತಿ ವಿಚಾರಕ್ಕೆ ಕೈಹಾಕಬೇಡಿ ಎಂದು ನಾನೂ ಸೇರಿದಂತೆ ಹಲವು ಮುಖಂಡರು ಹೇಳಿದರೂ ನಮ್ಮ ಸಲಹೆಯನ್ನು ಪರಿಗಣಿಸಲಿಲ್ಲ. ಇದರ ಪರಿಣಾಮ ಬಿಜೆಪಿಯ ಘಟಾನುಘಟಿಗಳೆಲ್ಲರೂ ಸೋಲಬೇಕಾಯಿತು’ ಎಂದರು.

ಬಿಜೆಪಿ ಸರ್ಕಾರ ಪಡಿತರ ಅಕ್ಕಿಯ ಪ್ರಮಾಣವನ್ನೂ ಕಡಿತಗೊಳಿಸಿತು. ಓಪಿಎಸ್ ಜಾರಿಗಾಗಿ ನೌಕರರು ಮಾಡಿದ ಮನವಿಯನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಜಗದೀಶ್ ಶೆಟ್ಟರ್ ಹಾಗೂ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ನಾಯಕರಿಗೆ ಟಿಕೆಟ್ ತಪ್ಪಿಸಿದ್ದೂ ಸೋಲಿಗೆ ಪ್ರಮುಖ ಕಾರಣವಾಯಿತು ಎಂದರು.

‘ಪಕ್ಷದ ಹಿರಿಯ ಮುಖಂಡ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗನಿಗೆ ಚನ್ನಗಿರಿ ಕ್ಷೇತ್ರದ ಟಿಕೆಟ್ ನೀಡಬೇಕಾಗಿತ್ತು. ಅದನ್ನು ತಪ್ಪಿಸಿದ್ದು ಸರಿಯಲ್ಲ’ ಎಂದ ಅವರು, ‘ರಾಜ್ಯದಲ್ಲಿ 72 ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದೂ ಸೋಲಿಗೆ ಕಾರಣ’ ಎಂದರು.

ಲೋಕಸಭೆ ಚುನಾವಣೆ ಆಕಾಂಕ್ಷಿ:

‘ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನ ಜನತೆ ಸೇರಿದಂತೆ ಜಿಲ್ಲೆಯ ಕಾರ್ಯಕರ್ತರು ಲೋಕಸಭೆ ಚುನಾವಣೆಯ ಸ್ಪರ್ಧಿಸಿದರೆ ಗೆಲ್ಲಿಸುವುದಾಗಿ ಹೇಳುತ್ತಿದ್ದಾರೆ. ಸಾಧಕ– ಭಾಧಕ ಅವಲೋಕಿಸಿ ತೀರ್ಮಾನಿಸಿದ್ದೇನೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರೆದುರು ಈ ಕುರಿತ ಇಂಗಿತ ವ್ಯಕ್ತಪಡಿಸಿದ್ದೇನೆ. ಪಕ್ಷ ಟಿಕೆಟ್ ಕೊಟ್ಟರೆ ಚುನಾವಣೆ ಎದುರಿಸಲು ಸಿದ್ದನಿದ್ದೇನೆ ಎಂದರು.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ:

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಲು ಅನೇಕರು ಸಮರ್ಥರಿದ್ದಾರೆ. ನನಗೂ ಅವಕಾಶ ಸಿಕ್ಕರೆ ಆ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.

ಅರ್ಧ ಲೀಟರ್ ಹಾಲು ಯಾರೀಗ್ ಬೇಕು?

‘ಜನವರಿ ತಿಂಗಳಿನಿಂದಲೇ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಆದರೆ ಬಿಜೆಪಿ ನಾಯಕರು ಆಗ ಮಲಗಿದ್ದು ಚುನಾವಣೆ ಒಂದು ವಾರ ಇರುವಾಗ ಅರ್ಧ ಲೀಟರ್ ಹಾಲು ನೀಡುವುದಾಗಿ ಘೋಷಿಸಿದರು. ಬಿಜೆಪಿ ಪ್ರಣಾಳಿಕೆ ತಯಾರಿಕೆ ಹೊಣೆಯನ್ನು ಹಿರಿಯರಿಗೆ ವಹಿಸದೇ ಕೆ.ಸುಧಾಕರ್‌ ಅವರಿಗೆ ನೀಡಿದ್ದರಿಂದ ಪಕ್ಷ ಸೋಲಬೇಕಾಯಿತು’ ಎಂದು ರೇಣುಕಾಚಾರ್ಯ ಟೀಕಿಸಿದರು.

‘ನಮ್ಮ ಹಳ್ಳಿಯ ಜನ ಹಾಲು ಕೇಳಿದರೆ ಕೊಡದ ತುಂಬ ಕೊಡುವ ಪದ್ಧತಿ ಅನುಸರಿಸುತ್ತಾರೆ. ಅಂಥದ್ದರಲ್ಲಿ ಅವರಿಗೆ ಅರ್ಧ ಲೀಟರ್ ಹಾಲು ಕೊಡಲು ಹೋಗಿದ್ದು ತಪ್ಪು. ನಾವು ಅಧಿಕಾರದಲ್ಲಿ ಇದ್ದಾಗ 10 ಕೆ.ಜಿ. ಅಕ್ಕಿ ಕೊಡಲಿಲ್ಲ. 3 ಉಚಿತ ಸಿಲಿಂಡರ್‌ಗಳನ್ನು ಆಗಲೇ ಕೊಡಬೇಕಿತ್ತು’ ಎಂದರು. ‘ಚುನಾವಣೆಗೆ ಮುಂಚೆ ಬಿಜೆಪಿಯಲ್ಲಿ ಜಾತಿ ಸಮೀಕರಣ ನಡೆಯಲಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಖರ್ಗೆ ಎಚ್.ಸಿ. ಮಹದೇವಪ್ಪ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕ ಮುಖಂಡರನ್ನು ಒಳಗೊಂಡ ಜಾತಿ ಸಮೀಕರಣ ನಡೆದಿದ್ದು ಅವರ ಗೆಲುವಿಗೆ ಕಾರಣವಾಯಿತು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT