ಮೀಸಲಾತಿ ನಮ್ಮ ಹಕ್ಕು, ನಮಗೆ ಕೊಡಿ

ಹೊನ್ನಾಳಿ: ‘ಕುರುಬರಿಗೆ ಬ್ರಿಟಿಷರ ಕಾಲದಲ್ಲಿದ್ದ ಎಸ್ಟಿ ಮೀಸಲಾತಿ ಸೌಲಭ್ಯದ ಹಕ್ಕನ್ನು ನಮಗೆ ಮರಳಿ ಕೊಡಿ’ ಎಂದು ರಾಜ್ಯ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಖಜಾಂಚಿ ಕೆ.ಇ. ಕಾಂತೇಶ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಭಾನುವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಎಸ್ಟಿ ಮೀಸಲಾತಿ ಹೋರಾಟದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ನಾಲ್ಕೈದು ತಿಂಗಳುಗಳಿಂದ ಕಾಗಿನೆಲೆ ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಮ್ಮ ಹಕ್ಕಿಗಾಗಿ ಹೋರಾಟ ಆರಂಭಿಸಿದ್ದೇವೆ. ಕುರುಬರಿಗೆ ಅಂದಿನಿಂದ ಎಸ್ಟಿ ಸೌಲಭ್ಯ ಕೊಡುವ ಕುರಿತು ರಾಜ್ಯದಾದ್ಯಂತ ಚರ್ಚೆ ನಡೆಯುತ್ತಿದೆ. ಹಲವೆಡೆ ಸಮಾವೇಶ ನಡೆದಿದೆ. ಸ್ವಾಮೀಜಿಗಳ ನೇತೃತ್ವದಲ್ಲಿ ಕೆ.ಎಸ್. ಈಶ್ವರಪ್ಪ ಸೇರಿ ಹಲವು ಮುಖಂಡರು ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರಾದ ರೇಣುಕಾಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ’ ಎಂದು ಹೇಳಿದರು.
ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆದಿದೆ. ಜ. 4ರಂದು ಸಿಂಧನೂರಿನಲ್ಲಿ ಎಸ್ಟಿ ಹೋರಾಟದ ಸಮಾವೇಶ ನಡೆಯಲಿದೆ. ಡಿ. 6 ರಂದು ದಾವಣಗೆರೆಯಲ್ಲಿ, ಡಿ. 7 ರಂದು ಶಿಕಾರಿಪುರದಲ್ಲಿ ಎಸ್.ಟಿ.ಹೋರಾಟದ ಸಮಾವೇಶಗಳು ನಡೆಯುತ್ತವೆ. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನಂತರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಸಮಾವೇಶಕ್ಕೆ ಸಮುದಾಯವರನ್ನು ಆಹ್ವಾನಿಸಿದರು. ಮುಖಂಡರಾದ ಎಂ. ರಮೇಶ್, ಬಿಸಾಟಿ ಸುರೇಶ್, ನವೀನ್ ಇಂಚರ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್. ಮಹೇಶ್, ಕೆ.ವಿ. ಚನ್ನಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೆ.ವಿ. ಶ್ರೀಧರ್, ಮಾಜಿ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮರಿಕನ್ನಪ್ಪ, ಕತ್ತಿಗೆ ನಾಗರಾಜ್, ಶ್ರೀನಿವಾಸ್, ಗುಂಡು ಚಂದ್ರು ಇದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.