ಭಾನುವಾರ, ಸೆಪ್ಟೆಂಬರ್ 19, 2021
28 °C

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯಾಮತಿ: ‘ಸಂವಿಧಾನ ನೀಡಿದಮೀಸಲಾತಿ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು ಎಂದು ರಾಜ್ಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಉಪಾಧ್ಯಕ್ಷ ರಾಯಚೂರಿನ ಅಂಬಣ್ಣ ಆರೋಲಿಕರ್ ದೂರಿದರು.

ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿ ನಡೆದ ತಮಟೆ ಚಳವಳಿಯಲ್ಲಿ ಮಾತನಾಡಿದರು.

‘ಆಯೋಗದ ವರದಿ ಜಾರಿ ಕುರಿತು ಸಚಿವ ಪ್ರಭು ಚವಾಣ್ ಹೇಳಿಕೆ ನೀಡಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ. ಬಂಜಾರ ಸಮುದಾಯಕ್ಕೆ ಸೇವಾಲಾಲ್ ಅವರು ಮೀಸಲಾತಿ ಕೊಟ್ಟಿಲ್ಲ. ಡಾ. ಅಂಬೇಡ್ಕರ್ ಅವರ ಸಂವಿಧಾನ ಕೊಟ್ಟಿದೆ. ಇತರ ರಾಜ್ಯಗಳಲ್ಲಿ ಬಂಜಾರ ಸಮುದಾಯ ಪರಿಶಿಷ್ಟ ಪಂಗಡ ಮತ್ತು ಬಿಸಿಎಂ ವರ್ಗದಲ್ಲಿ ಬರುತ್ತದೆ. ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ನೀಡಲಾಗಿದೆ. ಆದರೂ ವರದಿ ಜಾರಿ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ. ಪರಿಶಿಷ್ಟ ಜಾತಿ ಸೌಲಭ್ಯ ನೀಡುವ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ’ ಎಂದು ಸವಾಲ್ ಹಾಕಿದರು.

‘ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಮಾದಿಗ ಸಮುದಾಯದ ಶಕ್ತಿ. ಅವರ ವಿರುದ್ಧ ಯಾರೇ ಮಾತನಾಡಿದರೂ ಅದನ್ನು ಸಮುದಾಯ ಖಂಡಿಸುತ್ತದೆ. ಮಾದಿಗ ಸಮುದಾಯದ ಮೀಸಲಾತಿ ವಿರುದ್ಧ ಮಾತನಾಡಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕ್ರಾಂತಿ ಗೀತೆಗಳನ್ನು ಹಾಡಿದ ಪ್ರತಿಭಟನಕಾರರು, ಬೆಳಗುತ್ತಿ ಸರ್ಕಲ್‌ನಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದರು. ಪ್ರಭು ಚವಾಣ್ ಭಾವಚಿತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರಭಾರ ತಹಶೀಲ್ದಾರ್ ಎನ್. ನಾಗರಾಜಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು. 

ಮಾದಿಗ ದಂಡೋರ ಸಮಿತಿ ರಾಜ್ಯ ಉಪಾಧ್ಯಕ್ಷ ತಿಮ್ಲಾಪುರ ಲೋಕೇಶ, ಜಿಲ್ಲಾ ಅಧ್ಯಕ್ಷ ಜಗಳೂರು ಕುಬೇರಪ್ಪ, ತಾಲ್ಲೂಕು ಮುಖಂಡರಾದ ರಾಜಪ್ಪ, ಹರೀಶ, ಜಿ. ಸುರೇಶ, ಎಂ.ಎಚ್. ಮಂಜಪ್ಪ, ಬಿ.ಟಿ. ರಂಗನಾಥ, ಎಚ್. ರವಿಕುಮಾರ, ಸೊರಟೂರು ಹನುಮಂತಪ್ಪ, ಅಣ್ಣಪ್ಪ, ಬಸವರಾಜಪ್ಪ, ಹೊನ್ನಾಳಿ ತಮ್ಮಣ್ಣ, ಗುಡದಯ್ಯ, ಶಿಕಾರಿಪುರ ತಾಲ್ಲೂಕು ರೇಣುಕಮ್ಮ ಚಿಕ್ಕಾಪುರ, ಚಂದ್ರಕಲಾ ಈಸೂರು, ಕುಮಾರ ಜೋಗ, ಕುಮಾರ ಚೀಲೂರು, ಬೆಳಗುತ್ತಿ ಹಾಲೇಶ, ನರಸಿಂಹಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.