ಸಾಸ್ವೆಹಳ್ಳಿ: ಇಲ್ಲಿನ ಚೌಡೇಶ್ವರಿ ಬೀದಿಯ ಜನರ ಪಾಲಿಗೆ ದೊಡ್ಡ ತಲೆನೋವಾಗಿದ್ದ ಚರಂಡಿ ಸಮಸ್ಯೆಗೆ ಕೊನೆಗೂ ಮುಕ್ತಿ ದೊರೆತಿದೆ.
ಇಲ್ಲಿ ದಶಕದ ಹಿಂದೆ ನಿರ್ಮಾಣವಾಗಿದ್ದ ಚರಂಡಿಗಳ ಕಾಮಗಾರಿ ಅವೈಜ್ಞಾನಿಕವಾಗಿತ್ತು. ಇದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿರಲಿಲ್ಲ. ಕೊಳಚೆ ನೀರು ನಿಂತು ಗಬ್ಬು ನಾರುತ್ತಿತ್ತು. ಸಾಂಕ್ರಾಮಿಕ ರೋಗಕ್ಕೂ ಇದು ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯ ಆಗಸ್ಟ್ 2ರ ಸಂಚಿಕೆಯಲ್ಲಿ ‘ಸಾಸ್ವೆಹಳ್ಳಿ: ಚರಂಡಿಯೇ ಇಲ್ಲಿ ದೊಡ್ಡ ಸಮಸ್ಯೆ!’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಈ ವರದಿಯು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗಮನ ಸೆಳೆದಿತ್ತು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದ ಇಲಾಖೆಯ ಅಧಿಕಾರಿಗಳು ₹ 4 ಲಕ್ಷ ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ ಹೊಸದಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆ.
‘ಅಧಿಕಾರಿಗಳು ‘ಪ್ರಜಾವಾಣಿ’ ಪತ್ರಿಕೆಯ ವರದಿಯಿಂದ ಎಚ್ಚೆತ್ತು ಚೌಡೇಶ್ವರಿ ಬೀದಿಯ ಜನರ 15 ವರ್ಷಗಳ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಇದು ಸಂತಸ ನೀಡಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಸವಿತಾ ರಮೇಶ್ ತಿಳಿಸಿದರು.