ಭಾನುವಾರ, ಮಾರ್ಚ್ 7, 2021
22 °C
ಗಣೇಶ ಚುತುರ್ಥಿ, ಮೊಹರಂ: ರಕ್ಷಣೆಗೆ ಪೊಲೀಸ್‌ ಇಲಾಖೆ ಸಜ್ಜು –ಕಮಲ್‌ ಪಂತ್‌

ನಾಲ್ಕು ಜಿಲ್ಲೆಗಳಲ್ಲಿ ಭದ್ರತೆಗೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ಗಣೇಶ ಚತುರ್ಥಿ ಹಾಗೂ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಪೂರ್ವ ವಲಯ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ ಕಮಲ್‌ ಪಂತ್‌ ಹೇಳಿದರು.

ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಹಿಂದೆ ಕೋಮು ಘರ್ಷಣೆ ನಡೆದಿವೆ. ಹಾವೇರಿಯಲ್ಲೂ ಒಮ್ಮೆ ಅಹಿತಕರ ಘಟನೆ ನಡೆದಿತ್ತು. ಚಿತ್ರದುರ್ಗದ ಗಣೇಶ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಹೆಚ್ಚು ಜನ ಸೇರಿದರೂ ಅಲ್ಲಿ ಕೋಮು ಘರ್ಷಣೆ ನಡೆಯುವಂಥ ವಾತಾವರಣ ಇಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಲ್ಕೂ ಜಿಲ್ಲೆಗಳ ವ್ಯಾಪ್ತಿಯಲ್ಲಿ ಶಾಂತಿ–ಸೌಹಾರ್ದ ಸಭೆಗಳನ್ನು ನಡೆಸಲಾಗಿದೆ. ಸಮಾಜದ ಶಾಂತಿ ಕದಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಹರಿಬಿಡುವವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಗಣೇಶ ವಿಸರ್ಜನೆ ಮೆರವಣಿಗೆಗಳಲ್ಲಿ ಡಿಜೆ ಬಳಸಲು ಅವಕಾಶ ನೀಡುವುದಿಲ್ಲ. ಆದರೆ, ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿರುವಂತೆ ಸೀಮಿತ ಧ್ವನಿವರ್ಧಕಗಳನ್ನು ಬಳಸಲು ಮಾತ್ರ ಅವಕಾಶವಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಎಸ್‌ಪಿ ಆರ್‌. ಚೇತನ್‌, ಹಾವೇರಿ ಎಸ್‌ಪಿ ಕೆ. ಪರಶುರಾಮ್‌,  ಚಿತ್ರುದರ್ಗ ಎಸ್‌ಪಿ ಶ್ರೀನಾಥ ಎಂ. ಜೋಷಿ ಅವರೂ ಇದ್ದರು.

ನಲ್ಲೂರಿನಲ್ಲಿ ಠಾಣೆ ತೆರೆಯಲು ಚಿಂತನೆ:

ಚನ್ನಗಿರಿ ತಾಲ್ಲೂಕಿನ ನಲ್ಲೂರು ಗ್ರಾಮದಲ್ಲಿ ಪೊಲೀಸ್‌ ಠಾಣೆ ಆರಂಭಿಸುವ ಪ್ರಸ್ತಾವ ಹಿಂದೆಯೇ ಇತ್ತು. ಅದನ್ನು ಮರು ಪರಿಶೀಲಿಸಿ, ಅಗತ್ಯವಿದ್ದರೆ ಪೊಲೀಸ್‌ ಠಾಣೆ ತೆರೆಯಲಾಗುವುದು ಎಂದು ಕಮಲ್‌ ಪಂತ್‌ ತಿಳಿಸಿದರು.

ರಾಜ್ಯದಲ್ಲಿ 23 ಸಾವಿರ ಪೊಲೀಸ್‌ ಸಿಬ್ಬಂದಿಯ ಕೊರತೆಯಿದೆ. ಹಣಕಾಸು ಪರಿಸ್ಥಿತಿ ಆಧರಿಸಿ, ಸಿಬ್ಬಂದಿ ನೇಮಕ ಹಾಗೂ ಹೊಸ ಪೊಲೀಸ್‌ ಠಾಣೆಗಳನ್ನು ಆರಂಭಿಸುವ ಪ್ರಕ್ರಿಯೆಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ಒತ್ತು:

ಬೀಟ್‌ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ಸಿಬ್ಬಂದಿಗೆ ಸಮಾಜದೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಕೌಶಲ ತರಬೇತಿ ಕಾರ್ಯಾಗಾರಗಳನ್ನು ನಿಯಮಿತವಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಬಾಂಗ್ಲಾದೇಶದ ಅಕ್ರಮ ವಲಸಿಗರ ಸಮಸ್ಯೆ ಎಲ್ಲೆಡೆಯೂ ಇದೆ. ದಾವಣಗೆರೆ ಜಿಲ್ಲೆಯಲ್ಲಿ ಬಾಂಗ್ಲಾ ವಲಸಿಗರು ವಾಸವಿರುವ ಮಾಹಿತಿ ಬಂದರೆ ಎಸ್‌ಪಿ ನೇತೃತ್ವದ ಅಧಿಕಾರಿಗಳ ತಂಡ ತನಿಖೆ ನಡೆಸಲಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

* * *

ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಟೋಪಿ ಬದಲಿಸುವ ಬಗ್ಗೆ ಉನ್ನತ ಮಠದ ಚರ್ಚೆ ನಡೆದಿತ್ತು. ಆದರೆ, ಅದನ್ನು ಬದಲಿಸುವ ಪ್ರಸ್ತಾವ ಸದ್ಯಕ್ಕೆ ಇಲಾಖೆಯ ಮುಂದಿಲ್ಲ.

–ಕಮಲ್‌ ಪಂತ್‌, ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು