ಮತದಾನಕ್ಕೆ ಪ್ರೇರಣೆ ನೀಡುತ್ತಿರುವ ಶತಾಯುಷಿ ಶಾಂತಮ್ಮ

ಭಾನುವಾರ, ಮೇ 26, 2019
28 °C

ಮತದಾನಕ್ಕೆ ಪ್ರೇರಣೆ ನೀಡುತ್ತಿರುವ ಶತಾಯುಷಿ ಶಾಂತಮ್ಮ

Published:
Updated:
Prajavani

ಬಸವಾಪಟ್ಟಣ: ಮತದಾನದ ಮಹತ್ವವನ್ನು ಸಾರುತ್ತಾ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ ಸಮೀಪದ ಸಾಗರಪೇಟೆಯ ಗೌಡರ ಕರಿಬಸಪ್ಪನವರ ಪತ್ನಿ ಶತಾಯುಷಿ ಶಾಂತಮ್ಮ (105). 

1914 ರಲ್ಲಿ ಜನಿಸಿದ ಅವರು ಇದುವರೆಗೂ ಒಮ್ಮೆಯೂ ಮತದಾನದಿಂದ ದೂರ ಉಳಿದಿಲ್ಲ.

1928 ರಲ್ಲಿ ಇಲ್ಲಿನ ಕರಿಬಸಪ್ಪನವರ ಮಡದಿಯಾಗಿ ಬಂದಾಗಲೇ ಮನೆಯಲ್ಲಿ ನಡೆಯುತ್ತಿದ್ದ ಸ್ವಾತಂತ್ಯ ಚಳವಳಿಯ ಸುದ್ದಿಗಳನ್ನು ಕೇಳುತ್ತಾ ದೇಶಪ್ರೇಮವನ್ನು ಬೆಳೆಸಿಕೊಂಡವರು. ನಾಲ್ಕನೇ ತರಗತಿಯವರೆಗೆ ಶಿಕ್ಷಣ ಪಡೆದ ಅವರಿಗೆ ದೇಶಕ್ಕೆ ಸ್ವತಂತ್ರ ಬಂದಾಗ 33ರ ಹರೆಯ.

ಮಹಾತ್ಮ ಗಾಂಧೀಜಿ, ಸುಭಾಷ್‌ ಚಂದ್ರಬೋಸ್‌, ಜವಹರಲಾಲ್‌ ನೆಹರೂ ಮುಂತಾದ ನಾಯಕರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ಅವರು 1951 ರಲ್ಲಿ ಸಾರ್ವಜನಿಕ ಚುನಾವಣೆಗಳು ಆರಂಭವಾದಾಗಿನಿಂದ ಈವರೆಗೂ ಮತ ಚಲಾಯಿಸುತ್ತಾ ಬಂದಿದ್ದಾರೆ.

ಕಿವಿ ಸ್ವಲ್ಪ ಮಂದ ಎನ್ನುವುದನ್ನು ಬಿಟ್ಟರೆ ಅಪಾರ ಜ್ಞಾಪಕ ಶಕ್ತಿ, ಕಣ್ಣಿನ ದೃಷ್ಟಿಯನ್ನು ಹೊಂದಿರುವ ಶಾಂತಮ್ಮನವರು, ಈವರೆಗೆ ನಡೆದ ಗ್ರಾಮ ಪಂಚಾಯಿತಿ, ತಾಲ್ಲೂಕು ಬೋರ್ಡ್‌, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನಸಭೆ ಮತ್ತು ಲೋಕ ಸಭಾ ಚುನಾವಣೆಗಳಲ್ಲಿ ಒಮ್ಮೆಯೂ ತಪ್ಪಸಿಕೊಳ್ಳದೇ ವೋಟು ಹಾಕಿದ್ದಾರಂತೆ.

‘ಮತದಾನ ನಮಗೆ ಸಂವಿಧಾನ ನೀಡಿದ ಹಕ್ಕು. ನಾವು ತಪ್ಪದೇ ನಮಗೆ ಸೂಕ್ತ ಎನಿಸಿದ ವ್ಯಕ್ತಿಯನ್ನು ವೋಟ್‌ ಹಾಕುವುದರ ಮೂಲಕ ಆಯ್ಕೆ ಮಾಡಬೇಕು. ಆಗ ಉತ್ತಮ ಸರ್ಕಾರ ರಚನೆಯಾಗಲು ಸಾಧ್ಯ. ನಾನು ಬಾಣಂತಿಯಾಗಿದ್ದಾಗಲೂ ಒಮ್ಮೆ ಮತಗಟ್ಟೆಗೆ ಹೋಗಿ ಮತದಾನ ಮಾಡಿದ್ದೇನೆ. ನನಗೆ ಆರು ಜನ ಮಕ್ಕಳು, ಮೂವರು ಸೊಸೆಯರು, 13 ಜನ ಮೊಮ್ಮಕ್ಕಳು, 23 ಜನ ಮರಿ ಮಕ್ಕಳು ಇದ್ದಾರೆ. ಅವರೆಲ್ಲರಿಗೂ ಮತದಾನದ ಮಹತ್ವವನ್ನು ತಿಳಿಸಿದ್ದೇನೆ’ ಎಂದು ಹೇಳುತ್ತಾರೆ ಅವರು.

‘ನಮ್ಮ ಮನೆಯಲ್ಲಿ ಮತದಾನದ ಹಕ್ಕನ್ನು ಪಡೆದ 16 ಜನರಿದ್ದಾರೆ. ಎಲ್ಲರನ್ನೂ ಮತಗಟ್ಟೆಗೆ ಕಳಿಸಿ, ಅವರು ವೋಟು ಹಾಕಿ ಬೆರಳಿಗೆ ಹಚ್ಚಿಸಿಕೊಂಡು ಬಂದ ಗುರುತನ್ನು ನೋಡಿ ಸಂತಸಗೊಂಡಿದ್ದೇನೆ. ನಮ್ಮ ಬಂಧು ಮಿತ್ರರಿಗೂ ಮತದಾನದ ಮಹತ್ವವನ್ನು ತಿಳಿಸುತ್ತಿದ್ದೇನೆ ಎನ್ನುವ ಶಾಂತಮ್ಮ ಮತಹಾಕಿ ಬಂದ ದಿನ ಸಂತೋಷದಿಂದ ಆ ವಿಚಾರವನ್ನು ಮೊಮ್ಮಕ್ಕಳು ಮತ್ತು ಮರಿ ಮಕ್ಕಳೊಂದಿಗೆ ಈಗಲೂ ಹಂಚಿಕೊಳ್ಳುತ್ತೇನೆ’ ಎಂದು ಖುಷಿಯಿಂದ ಹೇಳಿದರು.

‘ಹಿಂದೆ ಪತಿಯೊಂದಿಗೆ ಮತಗಟ್ಟೆಗೆ ಹೋಗುತ್ತಿದ್ದೆ. ಈಗ ಮಕ್ಕಳೊಂದಿಗೆ ಹೋಗಿ ಮತಹಾಕಿ ಬರುತ್ತೇನೆ. ಚುನಾವಣೆಯ ದಿನ ಎಲ್ಲರೂ ಮತದಾನ ಮಾಡಿ ನಮ್ಮ ಹಕ್ಕನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !