ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ, ಸಮಾನತೆ ತಂದ ಮಹಾನ್‌ ಪುರುಷ ತರಳಬಾಳು ಶಿವಕುಮಾರ ಶಿವಾಚಾರ್ಯ ಶ್ರೀ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ: ದಾಸೋಹಕ್ಕೆ ಭಕ್ತಿ ಸಮರ್ಪಣೆ
Last Updated 18 ಸೆಪ್ಟೆಂಬರ್ 2018, 15:56 IST
ಅಕ್ಷರ ಗಾತ್ರ

ದಾವಣಗೆರೆ: ‘ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಯಾವ ಸಂವಿಧಾನವೂ ಇಲ್ಲದ ಕಾಲದಲ್ಲಿ ಸಮಾಜದಲ್ಲಿ ಸೌಹಾರ್ದ, ಸಮಾಜತೆಯನ್ನು ತಂದ ಮಹಾನ್‌ ಪುರುಷರಾಗಿದ್ದರು’ ಎಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ 26ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘ, ದಾವಣಗೆರೆ ಎಪಿಎಂಸಿ ವರ್ತಕರು ಹಾಗೂ ಸಮಾಜದವರು ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಕ್ತಿ (ಅಕ್ಕಿ) ಸಮರ್ಪಿಸುವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಈ ಮಠ ಒಂದು ಜಾತಿಯ ಚೌಕಟ್ಟಿಗೆ ಸೇರಿದ್ದರೂ, ಅದು ಜಾತಿ ಚೌಕಟ್ಟನ್ನು ಮೀರಿ ಜಾತ್ಯತೀತವಾಗಿ ಬೆಳೆದಿದೆ. ಸಂವಿಧಾನ, ಕಾನೂನು ಈಗ ಸಮಾನತೆಯನ್ನು ಪ್ರತಿಪಾದಿಸುತ್ತಿದೆ. ಹೀಗಿದ್ದರೂ ದೇಶದಲ್ಲಿ ಜಾತಿ ಸಂಘರ್ಷಗಳು ಬಹಳ ನಡೆಯುತ್ತಿವೆ. ಆ ಕಾಲದಲ್ಲೇ ಹಿರಿಯ ಗುರುಗಳು ನಾಡಿನಾದ್ಯಂತ ಶಾಲಾ– ಕಾಲೇಜುಗಳನ್ನು ಸ್ಥಾಪಿಸಿದ್ದರು. ಅಲ್ಲಿ ಎಲ್ಲಾ ವರ್ಗಗಳ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

‘ಮೊದಲು ನಮ್ಮ ಮಠವನ್ನು ದುಗ್ಗಾಣಿ ಮಠ ಎಂದು ಮೂದಲಿಸುತ್ತಿದ್ದರು. ಹಿರಿಯ ಗುರುಗುಳು ಮಠವನ್ನಷ್ಟೇ ಬೆಳೆಸಲಿಲ್ಲ; ಬದಲಾಗಿ ಮಠದ ಶಿಷ್ಯರನ್ನೂ ಬೆಳೆಸಿದರು. ಅವರವರ ಆಸಕ್ತಿಗೆ ತಕ್ಕಂತೆ ವಿವಿಧ ಕ್ಷೇತ್ರಗಳಿಗೆ ಕಳುಹಿಸಿ ಅಲ್ಲಿ ಬೆಳೆಯುವಂತೆ ಮಾಡಿದರು’ ಎಂದರು.

ರಚನಾತ್ಮಕ ಕಾರ್ಯ ಮಾಡಿ:

‘ಮುಂದಿನ ಬಾರಿ ಭಕ್ತಿ ಸಮರ್ಪಕ ಕಾರ್ಯಕ್ರಮವನ್ನು ಶ್ರಾವಣ ಮಾಸದ ಸಂದರ್ಭದಲ್ಲೇ ಇಟ್ಟುಕೊಳ್ಳಿ. ಅಂದು ಬೆಳಿಗ್ಗೆ ನೇತ್ರ ತಪಾಸಣೆ, ರಕ್ತದಾನ, ಆರೋಗ್ಯ ತಪಾಸಣೆಯಂತಹ ರಚನಾತ್ಮಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು’ ಎಂದು ಸ್ವಾಮೀಜಿ ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌. ಜಯದೇವಪ್ಪ, ‘1992ರಲ್ಲಿ ಡಿ.ಜಿ. ಬಸವನಗೌಡರು ಹೊನ್ನಾಳಿಯಲ್ಲಿ ಒಂದು ಲಾರಿ ಅಕ್ಕಿ ಕಳುಹಿಸಿ ಭಕ್ತಿ ಸಮರ್ಪಣೆ ಕಾರ್ಯಕ್ರಮನ್ನು ಮೊದಲ ಬಾರಿಗೆ ಮಾಡಿದರು. ಅಂದಿನಿಂದಲೂ ಹೊನ್ನಾಳಿಯಲ್ಲಿ ಇದು ನಡೆಯುತ್ತಿದೆ. ಕ್ರಮೇಣ ಭದ್ರಾವತಿ, ಶಿವಮೊಗ್ಗ, ಹರಿಹರದಲ್ಲೂ ಆರಂಭಗೊಂಡಿತು. ಕಳೆದ ವರ್ಷ ದಾವಣಗೆರೆಯಿಂದ 2 ಲಾರಿ ಅಕ್ಕಿಯನ್ನು ಕಳುಹಿಸಲಾಗಿತ್ತು. ಈ ವರ್ಷ ಒಂದು ಲಾರಿ ಅಕ್ಕಿ (100 ಕ್ವಿಂಟಲ್‌) ಕಳುಹಿಸಲಾಗುತ್ತಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಸಿರಿಗೆರೆ ಮಠಕ್ಕೆ ತೆರಳಲು ರಸ್ತೆ ಇರಲಿಲ್ಲ. ವಿದ್ಯುತ್‌ ದೀಪ ಸೇರಿ ಯಾವುದೇ ಮೂಲಸೌಲಭ್ಯ ಇರಲಿಲ್ಲ. ಇದರ ನಡುವೆಯೂ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಠವನ್ನು ಬೆಳೆಸಿದರು. ಸಮಾಜವನ್ನೂ ಸುಸ್ಥಿತಿಗೆ ಬರುವಂತೆ ಮಾಡಿದರು’ ಎಂದು ಸ್ಮರಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ‘ಧರ್ಮ ಕಾರ್ಯಕ್ಕೆ ವರ್ತಕರು ಕೈಜೋಡಿಸಿರುವುದು ಶ್ಲಾಘನೀಯ ಸಂಗತಿ. ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದರೆ ಉನ್ನತ ಹುದ್ದೆಗೆ ಏರಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

ದಲಾಲರ ಸಂಘದ ಅಧ್ಯಕ್ಷ ಜಿ.ಎಸ್‌. ಪರಮೇಶ್ವರಗೌಡ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ‘ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸುಮಾರು 40 ವರ್ಷಗಳ ಕಾಲ ಮಠವನ್ನು ಕಟ್ಟಿ ಬೆಳೆಸಿದರು. ಈ ಸಮಾಜವನ್ನು ಒಂದುಗೂಡಿಸಿದರು’ ಎಂದು ಸ್ಮರಿಸಿದರು.

ತರಳಬಾಳು ಬಡಾವಣೆಯ ನಿವಾಸಿಗಳು ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ₹ 1,09,009 ಕಾಣಿಕೆಯನ್ನು ಸಿರಿಗೆರೆ ಶ್ರೀಗಳಿಗೆ ಸಮರ್ಪಿಸಿದರು.

ಬಿ.ಎಂ. ಸದಾಶಿವಪ್ಪ ನಿರೂಪಿಸಿದರು. ಕದಳಿ ವೇದಿಕೆಯ ಗಾಯಕಿಯರು ವಚನ ಹಾಡಿದರು.

ಕಾಸಿಗಿಂತ ಕಾಲಕ್ಕೆ ಬೆಲೆ

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕಾಸಿಗಿಂತಲೂ ಕಾಲಕ್ಕೆ ಹೆಚ್ಚು ಬೆಲೆ ನೀಡುತ್ತಿದ್ದರು ಎಂದು ಸಿರಿಗೆರೆ ಶ್ರೀಗಳು ಸ್ಮರಿಸಿದರು.

‘ಭದ್ರಕರ್ಣ (ಕ್ಷೌರ) ಮಾಡಲು ಬರುವಂತೆ ಶಿಷ್ಯನಿಗೆ ಪತ್ರ ಬರೆಯುವಂತೆ ಹಿರಿಯ ಗುರುಗಳಿಗೆ ಒಮ್ಮೆ ಹೇಳಿದರು. ಶಿಷ್ಯ ಇನ್‌ಲ್ಯಾಂಡ್‌ ಲೆಟರ್‌ ತಂದಾಗ, ಇದಕ್ಕೆಲ್ಲ ಏಕೆ ಹೆಚ್ಚಿನ ಹಣ ಖರ್ಚು ಮಾಡಬೇಕು? ಅಂಚೆ ಕಾರ್ಡ್‌ನಲ್ಲಿ ಬರೆದರೆ ಸಾಕು ಎಂದರು. ಆದರೆ, ಬಳಿಕ ಕಾರ್ಡ್‌ ಅನ್ನು ಪೋಸ್ಟ್‌ ಮಾಡಲು ಚಿಕ್ಕಜಾಜೂರಿಗೆ ಕಾರು ಕೊಟ್ಟು ಕಳುಹಿಸಿಕೊಟ್ಟಿದ್ದರು’ ಎಂದು ಸ್ವಾಮೀಜಿ ಹಳೆಯ ಘಟನೆ ಮೆಲುಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT