ಗುರುವಾರ , ಸೆಪ್ಟೆಂಬರ್ 16, 2021
29 °C
ಹದಗೆಟ್ಟಿರುವ ಶಿವಮೊಗ್ಗ-– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13

ನಾಲ್ಕು ವರ್ಷಗಳಿಂದ ಅರ್ಧಕ್ಕೇ ನಿಂತ ಶಿವಮೊಗ್ಗ- ಚಿತ್ರದುರ್ಗ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಶಿವಮೊಗ್ಗ- ಚಿತ್ರದುರ್ಗ ನಗರ ಪ್ರದೇಶಗಳು ಹಾಗೂ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 13ರ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡು ನಾಲ್ಕು ವರ್ಷಗಳು ಕಳೆದಿವೆ. ಇದಕ್ಕೆ ಗುತ್ತಿಗೆದಾರರು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣಎಂದು ಸಾರ್ವಜನಿಕರು ದೂರಿದ್ದಾರೆ.

2014-15 ನೇ ಸಾಲಿನಲ್ಲಿ ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ₹ 375 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಶಾಸಕರಾಗಿ ವಡ್ನಾಳ್ ರಾಜಣ್ಣ ಹಾಗೂ ಸಂಸದರಾಗಿ ಜಿ.ಎಂ. ಸಿದ್ದೇಶ್ವರ ಇದ್ದರು. ‘ನಾನು ಅನುದಾನ ಬಿಡುಗಡೆ ಮಾಡಿಸಿದ್ದು’ ಎಂದು ಅಂದಿನ ಶಾಸಕ ವಡ್ನಾಳ್ ರಾಜಣ್ಣ, ‘ಅನುದಾನವನ್ನು ನಾನು ಬಿಡುಗಡೆ ಮಾಡಿಸಿದ್ದು’ ಎಂದು ಸಂಸದ ಸಿದ್ದೇಶ್ವರ ಅವರು ಸಭೆ, ಸಮಾರಂಭಗಳಲ್ಲಿ ಹೇಳುತ್ತಿದ್ದರು. ಆದರೆ ಕಾಮಗಾರಿ ನಡೆಸಲು ಇಚ್ಛಾಶಕ್ತಿ ತೋರಿರಲಿಲ್ಲ.

ನಂತರ ಟೆಂಡರ್ ಮುಕ್ತಾಯಗೊಂಡು 1 ವರ್ಷದವರೆಗೆ ಗುತ್ತಿಗೆದಾರ ಕಾಮಗಾರಿಯನ್ನು ತೀವ್ರಗತಿ
ಯಲ್ಲಿ ನಡೆಸಿದರು. ಬಳಿಕ ಕಾಮಗಾರಿ ಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿದರು. ಈ ನಾಲ್ಕು ವರ್ಷಗಳಲ್ಲಿ ಕಾಮಗಾರಿ ನಡೆಯದ ಕಾರಣ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ವಾಹನಗಳು ಹರಸಾಹಸಪಟ್ಟು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಕಿಕೆರೆ ಕಣಿವೆ, ಹೆಬ್ಬಳಗೆರೆ ಹಾಗೂ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಬಳಿ ಇರುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ವೃತ್ತ ಅಪಘಾತ ವಲಯಗಳಾಗಿ ರೂಪಗೊಂಡಿದ್ದವು. ಪ್ರತಿ ದಿನ ಈ ಮೂರು ಸ್ಥಳಗಳಲ್ಲಿ ಒಂದಾದರೂ ಅಪಘಾತ ಸಂಭವಿಸಿ, ವಾಹನಗಳ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಹೆದ್ದಾರಿ ಪ್ರಾಧಿಕಾರದವರು ಕಾಮಗಾರಿ ಮುಂದುವರಿಸುವ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ.

ರಾತ್ರಿ ವೇಳೆ ಅನೇಕ ವಾಹನಗಳು ತಿರುವಿನ ಪಕ್ಕದಲ್ಲಿ ವಾಹನಗಳಲ್ಲಿ ನಿಲ್ಲಿಸಿಕೊಳ್ಳುವುದರಿಂದ ಎದುರು ಬರುವಂತಹ ವಾಹನಗಳು ಕಾಣಿಸದೆ ಅಪಘಾತಗಳು ಸಂಭವಿಸುವಂತಾಗಿದೆ. ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಅಪಘಾತಗಳನ್ನು ನಿಯಂತ್ರಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಮೊದಲು ಹೆದ್ದಾರಿ ಕಾಮಗಾರಿ ಆರಂಭಿಸಿ, ಬೈಪಾಸ್ ರಸ್ತೆ ನಿರ್ಮಿಸಿ, ವಾಹನಗಳಿಗೆ ಆಗುತ್ತಿರುವ ತೊಂದರೆ
ಯನ್ನು ತಪ್ಪಿಸಲು ಹೆದ್ದಾರಿ ಪ್ರಾಧಿಕಾರ ದವರು ಮುಂದಾಗಬೇಕು ಎಂದು ಪಟ್ಟಣದ ಗಂಗಾಧರಪ್ಪ ಆಗ್ರಹಿಸಿದ್ದಾರೆ.

ಪ್ರಥಮ ದರ್ಜೆ ಕಾಲೇಜು ಬಳಿಯಿಂದ ಬೈಪಾಸ್ ರಸ್ತೆ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದ್ದರೂ ರಸ್ತೆ ನಿರ್ಮಿಸಿಲ್ಲ. ನಾಲ್ಕು ವರ್ಷಗಳ ಹಿಂದೆಯೇ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಬಹುತೇಕ ಭೂಮಿಗಳ ಮಾಲೀಕರಿಗೆ ಪರಿಹಾರ  ನೀಡಲಾಗಿದೆ. ಸರ್ಕಾರ ನೀಡಿರುವ ಪರಿಹಾರದ ಹಣ ಖಾಲಿಯಾದರೂ ರಸ್ತೆ ನಿರ್ಮಾಣ ಪ್ರಾರಂಭವಾಗಿಲ್ಲ. ಬೈಪಾಸ್ ರಸ್ತೆ ನಿರ್ಮಾಣವಾದರೆ ಪಟ್ಟಣದೊಳಗೆ ವಾಹನಗಳ ದಟ್ಟಣೆ ಕಡಿಮೆಯಾಗಿ ಸುಗಮ ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗುತ್ತಿಗೆದಾರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರಿಂದ ಮರು ಟೆಂಡರ್‌ ಕರೆದು ಹೊಸ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು. ಹೆದ್ದಾರಿಯಲ್ಲಿ ಗುಂಡಿಗಳನ್ನು ಮುಚ್ಚಲಾಗಿದೆ. ಅತಿ ಮಳೆಯಾದ ಕಾರಣ ಹೆದ್ದಾರಿಯಲ್ಲಿ ಮತ್ತೆ ಗುಂಡಿಗಳು ಬಿದ್ದಿವೆ. ಈ ಬಗ್ಗೆ ಗಮನಹರಿಸಲಾಗುವುದು ಎಂದು ಶಿವಮೊಗ್ಗ ಹೆದ್ದಾರಿ ಪ್ರಾಧಿಕಾರದ ಎಇಇ ಅಶೋಕ್ ಕುಮಾರ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು