ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಚಾರಿಕ ಹಾಡುಗಳೊಂದಿಗೆ ಶಿವಕುಮಾರ ಸ್ವಾಮೀಜಿಗೆ ನುಡಿನಮನ

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಇಪ್ಟಾ, ಸಿಪಿಐನಿಂದ ಶ್ರದ್ಧಾಂಜಲಿ
Last Updated 22 ಜನವರಿ 2019, 13:02 IST
ಅಕ್ಷರ ಗಾತ್ರ

ದಾವಣಗೆರೆ: ಭಾರತೀಯ ಜನಕಲಾ ಸಮಿತಿ (ಇಪ್ಟಾ) ಕಲಾವಿದರು ಹಾಗೂ ಭಾರತ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಮುಖಂಡರು ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಹಲವು ವೈಚಾರಿಕೆ ಗೀತೆಗಳನ್ನು ಹಾಡುವ ಮೂಲಕ ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ನುಡಿನಮನ ಸಲ್ಲಿಸಿದರು.

ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಇಪ್ಟಾ ಕಲಾವಿದರು ಒಂದೊಂದೇ ಹಾಡುಗಳನ್ನು ಹೇಳುವ ಮೂಲಕ ಚಿಂತನೆಗೆ ಹಚ್ಚಿದರು. ಕಲಾವಿದರಾದ ಐರಣಿ ಚಂದ್ರು ಹಾಗೂ ಅಂಜಿನಪ್ಪ ಲೋಕಿಕೆರೆ ಅವರು ಸಂಗಡಿಗರೊಂದಿಗೆ ಕುವೆಂಪು ಅವರು ರಚಿಸಿದ ‘ಓ ನನ್ನ ಚೇತನ ಆಗು ನೀ ಅನಿಕೇತನ...’ ಹಾಡಿನೊಂದಿಗೆ ನುಡಿನಮನ ಆರಂಭಿಸಿದರು. ‘ಅನಂತ ತಾನು ಅನಂತನಾಗಿ, ಆಗು ನಿತ್ಯಯೋಗಿ...’ ಎಂದು ಶಿವಕುಮಾರ ಸ್ವಾಮೀಜಿಯನ್ನು ಸ್ಮರಿಸಿದರು. ‘ಶರಣಯ್ಯ ಶರಣು, ಶರಣು ಶರಣಯ್ಯ...’ ಹಾಡುವ ಮೂಲಕ ಭಕ್ತಿ ಸಮರ್ಪಿಸಿದರು.

‘ಮನುಜ ಜಾತಿ ತಾನೊಂದೆ ವಲಂ, ಜಾತಿ ಮತಗಳ ಗೋಡೆ ದಾಟಿ, ದೇಶ–ಭಾಷೆಗಳ ಎಲ್ಲೆ ಮೀರಿ...’ ಹಾಗೂ ‘ದೇಶ ಕೋಶಗಳ ತಿಳಿದು ಜಗದ ದುಃಖಗಳ ಅರಿತು, ಕಷ್ಟಕೆ ಕಾರಣ ಕಂಡು ಹಿಡಿದ ಬುದ್ಧ ಆಗಲಿಲ್ಲ ನಮಗೆ ಆದರ್ಶ ಅದಕ್ಕೆ ಇಂಥ ಸಂಘರ್ಷ...’ ಹೀಗೆ ಹಲವು ಗೀತೆಗಳನ್ನು ಹಾಡುವ ಮೂಲಕ ವೈಚಾರಿಕತೆಯ ಪ್ರಜ್ಞೆ ಮೂಡಿಸಿದರು.

ಈ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ‘ಸೇವೆಯ ಮೂಲಕ ಸಮಾಜದಲ್ಲಿ ಐಕ್ಯತೆ ಮೂಡಿಸಿದ್ದ ಶಿವಕುಮಾರ ಸ್ವಾಮೀಜಿ ನಮಗೆ ಆದರ್ಶರಾಗಬೇಕೆ ಹೊರತು, ಐಕ್ಯತೆಗೆ ಭಂಗ ತರುವಂಥವರು ಮುಖ್ಯ ಆಗಬಾರದು. ಬಹುತೇಕ ದಾರ್ಶನಿಕರು ರೈತರ, ಕಾರ್ಮಿಕರ ಮಕ್ಕಳೇ ಆಗಿದ್ದಾರೆ. ಎ.ಪಿ.ಜೆ. ಅಬ್ದುಲ್‌ ಕಲಾಂ, ಶಿಶುನಾಳ ಷರೀಫ್‌, ಕಬೀರ್‌ ಅವರು ಇಲ್ಲದವರ ಮನೆಯಲ್ಲೇ ಹುಟ್ಟಿ, ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಶಿವಕುಮಾರ ಸ್ವಾಮೀಜಿ ಅವರು ಹಳ್ಳಿಗಾಡು, ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಭಕ್ತರಿಂದ ಭಿಕ್ಷೆ ಪಡೆದು ಶಿಕ್ಷಣ ಸಂಸ್ಥೆಯನ್ನು ಬೆಳೆಸಿ ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡಿದ್ದರು. ಜಾತಿ–ಭಾಷೆ, ಧರ್ಮ ರಹಿತ ಸಮತಾ ಸಮಾಜ ನಿರ್ಮಿಸಲು ಬಸವಣ್ಣ ಹಾಕಿಕೊಟ್ಟ ಮಾರ್ಗದಲ್ಲಿ ಸಿದ್ಧಗಂಗಾ ಶ್ರೀಗಳು ನಡೆಯುವ ಮೂಲಕ ಉಳಿದವರಿಗೂ ಆದರ್ಶಪ್ರಾಯ ಆಗಿದ್ದಾರೆ. ಅವರು ಹಾಕಿಕೊಟ್ಟ ಆದರ್ಶದ ಹೆದ್ದಾರಿಯಲ್ಲಿ ನಾವು ಸಾಗಬೇಕು’ ಎಂದರು.

‘ಮಾನವರಾಗಿ ಹುಟ್ಟಿದ್ದ ಸಿದ್ಧಗಂಗಾ ಶ್ರೀಗಳನ್ನು ನಾವು ದೇವರನ್ನಾಗಿ ಮಾಡುವುದು ಬೇಡ. ದೇವರು ಏನು ಕೊಡುಗೆಯನ್ನೂ ಕೊಟ್ಟಿಲ್ಲ. ಆದರೆ, ಈ ಮಾನವ ದೇವರು ದೇಶಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರೊಬ್ಬ ಮಹಾನ್‌ ಸಾಧಕ ಮನುಷ್ಯ ಎಂಬುದನ್ನು ಮನಗಂಡು ನಾವೂ ಮುನ್ನಡೆಯಬೇಕು’ ಎಂದು ಹೇಳಿದರು.

ಮುಖಂಡ ಕೆ.ಜಿ. ಶಿವಕುಮಾರ್‌, ‘ಮಾಣಿಕ್ಯವನ್ನು ಕಳೆದುಕೊಂಡಂತಾಗಿದೆ. ಮಠಕ್ಕೆ ಬಂದ ಮಕ್ಕಳನ್ನು ತಮ್ಮ ಮಕ್ಕಳಂತೆ ಬೆಳೆಸಿದ್ದ ಸ್ವಾಮೀಜಿ, ಪ್ರಪಂಚದ ನಾನಾ ಕ್ಷೇತ್ರಗಳಲ್ಲಿ ಸೇವೆ ಮಾಡುವಂತೆ ಮಾಡಿದ್ದಾರೆ. ಈಗಾಗಲೇ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಸ್ವಾಮೀಜಿಗೆ ನೀಡಲಾಗಿದೆ. ಅವರು ಮಾಡಿರುವ ಸೇವೆಗೆ ಪ್ರಶಸ್ತಿಗಳು ತೃಣ ಸಮಾನ. ಹೀಗಿದ್ದರೂ ‘ಭಾರತ ರತ್ನ’ವನ್ನು ನೀಡಿ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ಎಚ್‌.ಜಿ. ಉಮೇಶ್‌, ಮುಖಂಡರಾದ ಆನಂದರಾಜ್‌, ಆವರಗೆರೆ ವಾಸು, ಎನ್‌.ಟಿ. ಬಸವರಾಜಪ್ಪ, ಕೆ. ಬಾನಪ್ಪ, ಕಲಾವಿದರಾದ ಮಹಾಂತೇಶ್‌, ಪರಶುರಾಮ, ಪಾಲವನಹಳ್ಳಿ ಪ್ರಸನ್ನಕುಮಾರ್‌, ಪಿ. ಷಣ್ಮುಖಸ್ವಾಮಿ ಪಾಲ್ಗೊಂಡಿದ್ದರು. ಆವರಗೆರೆ ಚಂದ್ರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT