ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಸಿಟಿ ಬಸ್‌ ನಿಲ್ದಾಣಗಳಿಗೀಗ ನಾಮಕರಣ ಗೊಂದಲ

ದಾವಣಗೆರೆ ಜಿಲ್ಲೆ: ಬಸ್‌ ತಂಗುದಾಣಗಳಲ್ಲಿಲ್ಲ ಮೂಲಸೌಕರ್ಯ
Last Updated 12 ಡಿಸೆಂಬರ್ 2022, 6:41 IST
ಅಕ್ಷರ ಗಾತ್ರ

ದಾವಣಗೆರೆ: ತಾತ್ಕಾಲಿಕ ಕಟ್ಟಡಗಳಲ್ಲಿ ಇರುವ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳು ಶೀಘ್ರದಲ್ಲೇ ‘ಸ್ಮಾರ್ಟ್‌ ಸಿಟಿ’ ನಿರ್ಮಿತ ನೂತನ ಸುಸಜ್ಜಿತ ಕಟ್ಟಡಗಳಿಗೆ ಸ್ಥಳಾಂತರಗೊಳ್ಳಲಿರುವುದು ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.

ಇಲ್ಲಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ದಿನಕ್ಕೆ 1,136 ಬಸ್‌ಗಳು ಓಡಾಡುತ್ತವೆ. 1ನೇ ಡಿಪೊ ವ್ಯಾಪ್ತಿಯಲ್ಲಿ 484 ಚಾಲಕ–ನಿರ್ವಾಹಕರು, 2ನೇ ಡಿಪೊ ವ್ಯಾಪ್ತಿಯಲ್ಲಿ 260 ಚಾಲಕ–ನಿರ್ವಾಹಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ 26 ಸಿಬ್ಬಂದಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ₹ 108 ಕೋಟಿ ವೆಚ್ಚದಲ್ಲಿ ಕೆಎಸ್ಆರ್‌ಟಿಸಿಯಸುಸಜ್ಜಿತ ಬಸ್ ನಿಲ್ದಾಣ,₹ 25 ಕೋಟಿ ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗಳು ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ನಡೆಯುತ್ತಿದ್ದು ಅಂತಿಮ ಹಂತದಲ್ಲಿವೆ.

ಈಗಾಗಲೇ ಉದ್ಘಾಟನೆಗೊಂಡಿರುವ ಜಗಳೂರು, ಹರಪನಹಳ್ಳಿ ಕಡೆ ಹೋಗುವ ಖಾಸಗಿ ಬಸ್‌ ನಿಲ್ದಾಣ ಉದ್ಘಾಟನೆಗೊಂಡು 6 ತಿಂಗಳು ಕಳೆದರೂ ಶೌಚಾಲಯ, ಮಹಿಳೆಯರ ವಿಶ್ರಾಂತಿ ಕೊಠಡಿಗಳ ಬಾಗಿಲು ತೆರೆದಿಲ್ಲ. ಆವರಣದಲ್ಲೂ ಸ್ವಚ್ಛತೆಯ ಕೊರತೆ ಕಾಣುತ್ತಿದೆ.

‘ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಫ್ಲೋರಿಂಗ್‌ ಕಾಮಗಾರಿ ನಡೆಯುತ್ತಿದೆ. ಉಳಿದ ಕಾಮಗಾರಿಗಳು ಪೂರ್ಣಗೊಳ್ಳಲು ಏಪ್ರಿಲ್‌–ಮೇ ಆಗಬಹುದು. ಸದ್ಯದಲ್ಲೇ ಮಳಿಗೆಗಳಿಗೆ ಟೆಂಡರ್‌ ಕರೆಯಲಿದ್ದೇವೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ.

‘ಹೊಸದಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್‌ ನಿಲ್ದಾಣ ಪೂರ್ಣ ವಾಣಿಜ್ಯೀಕರಣಗೊಂಡಿದೆ. ಕೇವಲ ಮಳಿಗೆಗಳಿಂದ ಬರುವ ಬಾಡಿಗೆಯನ್ನಷ್ಟೇ ಗಮನದಲ್ಲಿಟ್ಟುಕೊಂಡು ನಿರ್ಮಿಸಿದಂತಿದೆ. ಮೂಲಭೂತವಾಗಿ ಬಸ್‌ ನಿಲ್ಲಿಸಲು ಬೇಕಾದ ಗತ್ಯ ಜಾಗವನ್ನೇ ಇಕ್ಕಟ್ಟುಗೊಳಿಸಲಾಗಿದೆ. 8–10 ಬಸ್‌ಗಳು ನಿಲ್ಲಲಷ್ಟೇ ಜಾಗವಿದೆ. ದಿನಕ್ಕೆ 280 ಖಾಸಗಿ ಬಸ್‌ಗಳು ದಾವಣಗೆರೆಯಿಂದ ಓಡಾಡುತ್ತಿರುವಾಗ ಈ ಜಾಗ ಎಲ್ಲಿ ಸಾಕಾಗುತ್ತದೆ, ಪಾರ್ಕಿಂಗ್‌ ಜಾಗದಿಂದ ವಾಹನವನ್ನು ಹೊರ ತರುವಲ್ಲೂ ಬಹಳ ಇಕ್ಕಟ್ಟು ಮಾಡಲಾಗಿದೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಗೌರವಾಧ್ಯಕ್ಷ ಮಂಜುನಾಥ ಕಂಬತ್ತಹಳ್ಳಿ ದೂರುತ್ತಾರೆ.

‘ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೆಸರನ್ನು 2004–05ರಲ್ಲೇ ನಿರ್ಣಯ ಕೈಗೊಂಡು ಖಾಸಗಿ ಬಸ್‌ ನಿಲ್ದಾಣಕ್ಕೆ ಇಡಲಾಗಿದೆ. ಈಗ ವಿನಾಕಾರಣ ದ್ವೇಷ ರಾಜಕಾರಣ ಮಾಡುತ್ತಿರುವ ಬಿಜೆಪಿ ಈ ಹೆಸರನ್ನು ಬದಲಿಸಲು ಹೊರಟಿದೆ’ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಮಂಜುನಾಥ್‌ ಗಡಿಗುಡಾಳ್‌ ಆರೋಪಿಸಿದ್ದಾರೆ.

‘ದಾವಣಗೆರೆ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ. ಹಿರಿಯರಾದ ಅವರ ಹೆಸರಿನ ಬದಲು ಬೇರೆ ಹೆಸರು ಇಡುವುದು ಅಗತ್ಯವಿಲ್ಲ. ನಿಲ್ದಾಣದ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಾಲಿಕೆ ಗಮನಹರಿಸಲಿ. ನಗರದ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಿಗೆ ತರಳಬಾಳು ಮಠದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಕೊಡುಗೆ ಅಪಾರ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಅವರ ಹೆಸರು ಇಡುವುದು ಸೂಕ್ತ’ ಎಂದು ಅವರು ತಿಳಿಸಿದ್ದಾರೆ.

ವೃತ್ತಿ ರಂಗಭೂಮಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ದಿವಂಗತ ಚಿಂದೋಡಿ ಲೀಲಾ ಅವರ ಹೆಸರನ್ನು ಖಾಸಗಿ ಬಸ್‌ ನಿಲ್ದಾಣಕ್ಕೆ ಇರಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಹರಿಹರಕ್ಕೆ ಬೇಕು ಹೈಟೆಕ್‌ ಬಸ್‌ ನಿಲ್ದಾಣ

* ಇನಾಯತ್‌ ಉಲ್ಲಾ ಟಿ.

ಹರಿಹರ: ಜಿಲ್ಲೆಯಲ್ಲೇ ಅತಿ ಹೆಚ್ಚು ಬಸ್‌ಗಳು ಬಂದು ಹೋಗುವ ಜಂಕ್ಷನ್‌ ನಿಲ್ದಾಣ ಇಲ್ಲಿದೆ. ರಾಜ್ಯದ ಎಲ್ಲ ಮೂಲೆಗಳಿಗೆ ತಲುಪಿಸುವ ಬಸ್ ಸಿಗುವ ನಿಲ್ದಾಣ ಎಂಬ ಹೆಗ್ಗಳಿಕೆ ಇಲ್ಲಿಯ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಸಲ್ಲುತ್ತದೆ.

ದಿನಕ್ಕೆ 1,400 ಬಸ್‌ಗಳು ಬಂದು ಹೋಗುವುದರಿಂದ ಸಾರಿಗೆ ಇಲಾಖೆಯ ದೃಷ್ಟಿಯಿಂದ ರಾಜ್ಯದ ಪ್ರಮುಖ ನಿಲ್ದಾಣಗಳಲ್ಲಿ ಇದೂ ಒಂದು. ದಿನಕ್ಕೆ ಅಂದಾಜು 40,000 ಪ್ರಯಾಣಿಕರು ನಿಲ್ದಾಣವನ್ನು ಉಪಯೋಗಿಸುತ್ತಾರೆ. ಉತ್ತಮ ಲಾಭ ನೀಡುತ್ತ ಮಹತ್ವದ ನಿಲ್ದಾಣವೆನಿಸಿದ್ದರೂ ಸಾರಿಗೆ ಸಂಸ್ಥೆಯವರು ಈ ನಿಲ್ದಾಣದ ಅಭಿವೃದ್ಧಿಗೆ ಈವರೆಗೂ ಮನಸ್ಸು ಮಾಡಿಲ್ಲ.

ಈಗಿನ ನಿಲ್ದಾಣ ನಿರ್ಮಾಣವಾಗಿದ್ದು 1995ರಲ್ಲಿ. ಈ ನಡುವೆ ಬಸ್‌ ಮತ್ತು ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಆ ಸಂಖ್ಯೆಗೆ ತಕ್ಕ ಸೌಲಭ್ಯಗಳಿಲ್ಲ.

ಕೆಲ ಮಾರ್ಗಗಳ ಬಸ್ಸಿಗೆ ಹತ್ತಲು ನೂಕು–ನುಗ್ಗಲು ಕಂಡುಬರುವುದರಿಂದ ಇಲ್ಲಿ ಕಳವಿನ ನೂರಾರು ಪ್ರಕರಣಗಳು ನಡೆದಿವೆ. ಆದರೆ, ಆರೋಪಿಗಳ ಪತ್ತೆಗೆ ಅಗತ್ಯವಾದ ಸಿ.ಸಿ. ಟಿವಿ ಕ್ಯಾಮೆರಾಗಳು ಇಲ್ಲಿಲ್ಲ. ಪೊಲೀಸ್ ಚೌಕಿಯ ಅಗತ್ಯವೂ ಇದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಕುಳಿತುಕೊಳ್ಳಲು ಬೆಂಚುಗಳಿದ್ದರೂ ಅದು ‘ಬಕಾಸುರನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಹಿರಿಯರು, ಮಕ್ಕಳು, ಮಹಿಳೆಯರು ಸೇರಿದಂತೆ ಶೇ75ಕ್ಕಿಂತ ಹೆಚ್ಚಿನ ಜನ ತಮ್ಮ ಬಸ್ ಬರುವವರೆಗೆ ನಿಲ್ಲಬೇಕಾದ ಶಿಕ್ಷೆಗೆ ಒಳಗಾಗುತ್ತಾರೆ. ಇಲ್ಲಿರುವ ಶೌಚಾಲಯವೂ ಹಳತಾಗಿದೆ. ಈಗಿನ ಬಳಕೆದಾರರ ಸಂಖ್ಯೆ, ಕಾಲಕ್ಕೆ ತಕ್ಕುದಾಗಿಲ್ಲ. ಮಳೆಗಾಲದಲ್ಲಿ ನಿಲ್ದಾಣದ ತಗಡಿನ ಚಾವಣಿ ಸೋರುತ್ತದೆ. ನಿಲ್ದಾಣವೆಲ್ಲ ಜಲಮಯವಾಗಿ ಪ್ರಯಾಣಿಕರು ನಿಲ್ಲುವುದೂ ದುಸ್ತರವಾಗುತ್ತದೆ.

ರಾಜ್ಯದ ಹಲವು ನಿಲ್ದಾಣಗಳಲ್ಲಿ ಇರುವಂತೆ ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಅಗತ್ಯವಿದೆ. ಪಕ್ಕದಲ್ಲೇ ರೈಲು ನಿಲ್ದಾಣವೂ ಇರುವುದರಿಂದ 2-3 ಗಂಟೆ ವಿಶ್ರಾಂತಿ ಪಡೆಯಲು ಪುರುಷರು ಮತ್ತು ಮಹಿಳೆಯರಿಗೆ ಬೆಡ್ ಲಾಡ್ಜ್ ಅಥವಾ ಡಾರ್ಮಿಟರಿ ಅಗತ್ಯವಿದೆ.

ಈ ಹಿಂದೆ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ ಅವರು ನಿಲ್ದಾಣಕ್ಕೆ ಭೇಟಿ ನೀಡಿ ಹೈಟೆಕ್ ನಿಲ್ದಾಣ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಭರವಸೆ ಈವರೆಗೂ ಈಡೇರಿಲ್ಲ. ನಂತರ ಬಂದು ಹೋದ ಸ್ಥಳೀಯ ಶಾಸಕರೂ ಸಮಸ್ಯೆಗೆ ಪರಿಹಾರ ಸೂಚಿಸಿಲ್ಲ.

‘ಡೈರೆಕ್ಟೋರೇಟ್ ಆಫ್ ಅರ್ಬನ್ ಲ್ಯಾಂಡ್ ಟ್ರಾನ್ಸ್‌ಪೋರ್ಟ್ (ಡಲ್ಟ್) ಸಂಸ್ಥೆಗೆ ಈ ಹಿಂದೆ ಹೈಟೆಕ್ ನಿಲ್ದಾಣಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದರೆ ಹೊಸ ನಿಲ್ದಾಣ ನಿರ್ಮಿಸಬಹುದು’ ಎನ್ನುತ್ತಾರೆ ಘಟಕ ವ್ಯವಸ್ಥಾಪಕ ಸಂದೀಪ್ ಎಸ್.

ದಾಖಲೆಗಳ ಪ್ರಕಾರ ಖಾಸಗಿ ಬಸ್‌ ನಿಲ್ದಾಣಕ್ಕೆ ಹೆಸರಿಲ್ಲ

ದಾವಣಗೆರೆ ಮಹಾನಗರ ಪಾಲಿಕೆಯ ದಾಖಲೆಗಳ ಪ್ರಕಾರ ಖಾಸಗಿ ಬಸ್‌ ನಿಲ್ದಾಣಕ್ಕೆ ಯಾವುದೇ ಹೆಸರು ಇಲ್ಲ. ವಾಜಪೇಯಿ ಅಭಿಮಾನಿಗಳ ಸಂಘದಿಂದ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರು ಇಡುವಂತೆ ಮನವಿ ಬಂದಿತ್ತು. ನಮಗೂ ಅದು ಸರಿಯೆನಿಸಿತು. ಹೀಗಾಗಿ ಅವರ ಹೆಸರು ಇಡಲು ಸ್ಥಾಯಿ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಖಾಸಗಿ ಬಸ್‌ ನಿಲ್ದಾಣದಲ್ಲಿ 1 ಗಂಟೆಯಲ್ಲಿ ನಿಲ್ಲಬಹುದಾದ ಬಸ್‌ಗಳನ್ನು ಗಣನೆಗೆ ತೆಗೆದುಕೊಂಡೇ ವೈಜ್ಞಾನಿಕವಾಗಿ ಬಸ್‌ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಖಾಸಗಿ ಬಸ್‌ ಮಾಲೀಕರ ಬಳಿಯೂ ಚರ್ಚಿಸಿಯೇ ಯೋಜನೆ ಸಿದ್ಧ ಪಡಿಸಲಾಗಿತ್ತು ಎಂದು ಸ್ಮಾರ್ಟ್‌ ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಜಾಗದ ಕೊರತೆಯಾಗುವ ಸಂಭವವಿಲ್ಲ. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣಗಳೆರಡಲ್ಲೂ ಪ್ರಯಾಣಿಕರಿಗೆ ಎಲ್ಲ ಮೂಲ ಅವಶ್ಯಕತೆಗಳೂ ಲಭಿಸುವಂತೆ ವ್ಯವಸ್ಥೆ ಮಾಡಲಾಗಿದೆ.

– ಎಸ್‌.ಟಿ. ವೀರೇಶ್‌, ಮಹಾನಗರ ಪಾಲಿಕೆ ಸದಸ್ಯ (ಮಾಜಿ ಮೇಯರ್‌)

***

ಒಂದೇ ಬಸ್‌ ನಿಲ್ದಾಣ: ಖಾಸಗಿ–ಸರ್ಕಾರಿ ತಿಕ್ಕಾಟ

* ಎಚ್‌.ವಿ. ನಟರಾಜ್‌

ಚನ್ನಗಿರಿ: ಜಿಲ್ಲೆಯಲ್ಲಿಯೇ ಅತಿ ದೊಡ್ಡ ತಾಲ್ಲೂಕು ಕೇಂದ್ರ ಎಂಬ ಹೆಗ್ಗಳಿಕೆ ಹೊಂದಿರುವ ಚನ್ನಗಿರಿಯಲ್ಲಿ ನಿತ್ಯ ಓಡಾಡುವ 150ಕ್ಕಿಂತ ಹೆಚ್ಚು ಖಾಸಗಿ ಹಾಗೂ 100ಕ್ಕಿಂತ ಹೆಚ್ಚು ಕೆಎಸ್ಆರ್‌ಟಿಸಿ ಬಸ್‌ಗಳಿಗಾಗಿ ಇರುವುದು ಒಂದೇ ನಿಲ್ದಾಣ.

ಪುರಸಭೆಯಿಂದ 2002ರಲ್ಲಿ ನಿರ್ಮಿಸಿರುವ ಈ ಏಕೈಕ ಖಾಸಗಿ ಬಸ್ ನಿಲ್ದಾಣದೊಳಗೇ ಕೆಎಸ್ಆರ್‌ಟಿಸಿ ಬಸ್‌ಗಳನ್ನೂ ನಿಲುಗಡೆ ಮಾಡಲಾಗುತ್ತದೆ. ಖಾಸಗಿ ಬಸ್‌ ಏಜೆಂಟರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಚಾಲಕರ ನಡುವೆ ಮಾತಿನ ಚಕಮಕಿ, ತಿಕ್ಕಾಟ ಪ್ರತಿ ದಿನ ನಡೆಯುತ್ತಿರುತ್ತದೆ. ಜಗಳ ತಾರಕಕ್ಕೇರಿ ಪೊಲೀಸ್ ಠಾಣೆಗೆ ದೂರು ಹೋದ ಪ್ರಕರಣಗಲೂ ನಡೆದಿವೆ. ಖಾಸಗಿ ಬಸ್‌ನವರು ಬಸ್ ನಿಲ್ದಾಣದೊಳಗೆ ಪ್ರವೇಶ ಮಾಡಲು ದಿನಕ್ಕೆ 1 ಬಸ್‌ಗೆ ₹ 20 ಶುಲ್ಕವನ್ನು ಪುರಸಭೆಗೆ ಪಾವತಿಸುತ್ತಾರೆ. ಕೆಎಸ್ಆರ್‌ಟಿಸಿ ಬಸ್‌ಗಳಿಗೆ ಈ ಶುಲ್ಕವಿಲ್ಲ ಎಂಬುದೇ ಖಾಸಗಿ ಬಸ್‌ನವರ ಆಕ್ಷೇಪ.

‘ಜಾಗದ ಕೊರತೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣ ಇನ್ನೂ ಸಾಧ್ಯವಾಗಿಲ್ಲ. ಶಾಸಕರು ಪ್ರತ್ಯೇಕ ನಿಲ್ದಾಣ ನಿರ್ಮಿಸುತ್ತಾರೆ ಎಂಬ ಭರವಸೆ ಇದೆ. ಖಾಸಗಿ ಬಸ್ ನಿಲ್ದಾಣವನ್ನೂ ನವೀಕರಿಸಬೇಕಿದೆ’ ಎನ್ನುತ್ತಾರೆ ಕನ್ನಡ ಪರ ಸಂಘಟನೆಗಳ ಹೋರಾಟಗಾರ ಬುಳ್ಳಿ ನಾಗರಾಜ್.

‘ಪ್ರಯಾಣಿಕರ ಸಂಖ್ಯೆ ಹೆಚ್ಚಿರುವುದರಿಂದ ಆಸನ ಕೊರತೆ ಹಾಗೂ ಮಹಿಳೆಯರ ವಿಶ್ರಾಂತಿ ಕೊಠಡಿಗಳ ಕೊರತೆ ಇದೆ. ಈ ನಿಲ್ದಾಣದ ನವೀಕರಣ ಕಾಮಗಾರಿಯನ್ನು ಕೈಗೊಳ್ಳಲು ₹ 90 ಲಕ್ಷ ಅನುದಾನ ಮೀಸಲಿಡಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ನಡೆಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಕೆ. ಪರಮೇಶ್ ತಿಳಿಸಿದರು.

ಬಸ್ ನಿಲ್ದಾಣವೇ ಇಲ್ಲದ ತಾಲ್ಲೂಕು ಕೇಂದ್ರ

* ಡಿ.ಎಂ. ಹಾಲಾರಾಧ್ಯ

ನ್ಯಾಮತಿ: 75 ಹಳ್ಳಿಗಳನ್ನು ಒಳಗೊಂಡ, ತಾಲ್ಲೂಕು ಕೇಂದ್ರವಾಗಿ ನಾಲ್ಕೂವರೆ ವರ್ಷ ಗತಿಸಿದರೂ ಇಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣವಾಗಿಲ್ಲ.

ಇಲ್ಲಿಂದ ಶಿವಮೊಗ್ಗ- ದಾವಣಗೆರೆ, ಶಿಕಾರಿಪುರ, ಹಾವೇರಿ ಕಡೆ ಪ್ರತಿದಿನ ನೂರಾರು ಖಾಸಗಿ ಬಸ್‌ಗಳು, ಸರ್ಕಾರಿ ಗ್ರಾಮಾಂತರ ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಈ ಹಿಂದೆ ಮಂಡಲ ಪಂಚಾಯಿತಿ ಅಸ್ತಿತ್ವದಲ್ಲಿದ್ದ ಅವಧಿಯಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಈಗ ಆ ಕಟ್ಟಡ ಶಿಥಿಲಾವಸ್ಥೆ ತಲುಪಿ ನಾಯಿಗಳ ವಾಸಸ್ಥಾನವಾಗಿದೆ. ಗುಬ್ಬಚ್ಚಿ ಗೂಡಿನಂತಹ ಬಸ್‌ ತಂಗುದಾಣವಿದ್ದರೂ ಖಾಸಗಿ ವಾಹನಗಳು, ಸಂಚಾರಿ ಮಾಂಸಾಹಾರಿ ಹೋಟೆಲ್‌ಗಳ ಬಳಕೆಗೆ ಸೀಮಿತವಾಗಿದೆ. ಈಚೆಗೆ ರಸ್ತೆ ಗುತ್ತಿಗೆದಾರ ಈ ನಿಲ್ದಾಣವನ್ನು ಮರಳು, ಸಿಮೆಂಟ್ ಸಂಗ್ರಹಿಸುವ ಸ್ಥಳವನ್ನಾಗಿಯೂ ಮಾಡಿಕೊಂಡಿದ್ದಾರೆ.

ಹಿಂದಿನ ಗ್ರಾಮಾಡಳಿತವು, ‘ವೀರ ಮದಕರಿನಾಯಕ ಬಸ್‌ನಿಲ್ದಾಣ’ ಎಂಬ ನಾಮಕರಣವನ್ನೂ ಅಳವಡಿಸಿದೆ. ಆದರೆ ಸ್ವಚ್ಛತೆ ಮತ್ತು ದುರಸ್ತಿಗೆ ಪಟ್ಟಣ ಪಂಚಾಯಿತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಲ್ಲೂಕು ಕೇಂದ್ರದಲ್ಲಿ ಸುಸಜ್ಜಿತ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ ನಿರ್ಮಿಸುವ ತುರ್ತು ಅಗತ್ಯ ಇದೆ. ಶಾಸಕ ಎಂ.ಪಿ. ರೇಣುಕಾಚಾರ್ಯ ಈ ಬಗ್ಗೆ ರಾಜಕೀಯ ಇಚ್ಛಾಶಕ್ತಿ ತೋರಬೇಕಿದೆ ಎಂಬುದು ತಾಲ್ಲೂಕಿನ ಜನತೆಯ
ಒತ್ತಾಯ.

‘ನ್ಯಾಮತಿ ಪಟ್ಟಣವು ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ ಒಳಪಟ್ಟಿದ್ದು, ಬಸ್‌ನಿಲ್ದಾಣಕ್ಕೆ 2 ಎಕರೆ ಜಾಗ ಬೇಕು ಎಂದು ಇಲಾಖೆಯವರು ಕೇಳಿದ್ದಾರೆ. ಈಗಿರುವ ಜಾಗದ ವಿಸ್ತೀರ್ಣದ ಮಾಹಿತಿ ನೀಡಿ, ಅಭಿವೃದ್ಧಿಗೆ ಗಮನಹರಿಸುವಂತೆ ಕೆಎಸ್‌ಆರ್‌ಟಿಸಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ.ಕೆ. ಕೊಟ್ರೇಶಿ ತಿಳಿಸಿದರು.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT