ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ ವಿಜ್ಞಾನಿಗಳ ‘ಸ್ಮಾರ್ಟ್‌’ ಪ್ರದರ್ಶನ

ಜೈನ್ ವಿಜ್ಞಾನದಲ್ಲಿ ಜಿಲ್ಲಾ ಮಟ್ಟದ ಇನ್‌ಸ್ಪೈರ್ ಅವಾರ್ಡ್‌ ಮಾನಕ್ ಸ್ಪರ್ಧೆ
Last Updated 27 ಜನವರಿ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ವಿಧ್ವಂಸಕ ಕೃತ್ಯ ಎಲ್ಲೇ ಕಂಡು ಬಂದರೂ ಮಾಹಿತಿ ನೀಡಬಲ್ಲ. ಇದರಿಂದಾಗಿ ವೈರಿಗಳೂ ಎಲ್ಲೇ ಅಡಗಿದ್ದರೂ ಅವರನ್ನು ಸದೆಬಡಿಯಬಹುದು.

–ಇಲ್ಲಿನ ಜೈನ್ ವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಡಿಎಸ್ಇಆರ್‌ಟಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಇನ್‌ಸ್ಪೈರ್‌ ಅವಾರ್ಡ್‌ ಮಾನಕ್ ಸ್ಪರ್ಧೆಯಲ್ಲಿ ಜೈನ್ ವಿದ್ಯಾಲಯ (ಸಿಬಿಎಸ್‌ಇ) ಶಾಲೆಯ ವಿದ್ಯಾರ್ಥಿ ಗೀತಾನ್ಸ್ ಕೆ.ಜೈನ್ ತಯಾರಿಸಿದ ‘ಬೇಸಿಕ್ ಸರ್ವೇಲೆನ್ಸ್ ಮಲ್ಟಿಫಂಕ್ಷನಿಂಗ್ ರೊಬೊ’ ಆಕರ್ಷಿಸಿತು.

ಈ ದೇಶದೊಳಗೆ ನುಸುಳುಕೋರರು ನುಗ್ಗಿದರೆ ಅಥವಾ ಯಾವುದೇ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳು ನಡೆಯುತ್ತಿದ್ದರೆ ಈ ರೊಬೊಟ್ ಕ್ಯಾಮೆರಾದ ಮೂಲಕ ವಿಡಿಯೊ ಹಾಗೂ ಚಿತ್ರಗಳನ್ನು ಕಳುಹಿಸುತ್ತದೆ. ಆಗ ಸುಲಭವಾಗಿ ಕುಕೃತ್ಯಗಳನ್ನು ತಡೆಯಬಹುದು ಎಂಬುದು ಗೀತಾನ್ಸ್ ಅನಿಸಿಕೆ.

ದಾವಣಗೆರೆ ಸ್ಮಾರ್ಟ್ ಸಿಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಹೌಸ್‌, ಫ್ಲೈಓವರ್, ಪಾರ್ಕಿಂಗ್ ವಿಷಯಗಳನ್ನು ಕುರಿತು ಪ್ರಾಜೆಕ್ಟ್‌ಗಳನ್ನು ಮಂಡಿಸಿದರು.

ಮೊಬೈಲ್‌ ನೆಟ್‌ವರ್ಕ್ ಸಮಸ್ಯೆಗೆ ಚನ್ನಗಿರಿ ತಾಲ್ಲೂಕಿನ ಎಂ.ಎನ್‌.ಹಳ್ಳಿ ಬಸವ ಇಂಟರ್ ನ್ಯಾಷನಲ್ ಶಾಲೆಯ ಘನಶೇಖರ ಜಿ.ಎಸ್. ಪರಿಹಾರ ಕಂಡು ಹಿಡಿದಿದ್ದ. ಆತನ ಪ್ರಕಾರ ‘ಒಂದು ಅಲ್ಯುಮಿನಿಯಂ ತಟ್ಟೆಗೆ ತಾಮ್ರದ ವೈರ್ ಅಳವಡಿಸಿ ಅದಕ್ಕೆ ಆಂಟೆನಾ ಅಳವಡಿಸಿದರೆ ಕಾಡಿಗೆ ಹೋದರೂ ನಿಮಗೆ ನೆಟ್‌ ವರ್ಕ್ ಸಿಗುತ್ತದೆ’ ಎನ್ನುತ್ತಾನೆ.

ಹಾಲಿವಾಣದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಗೀತಾ ಕೆ.ಟಿ. ಸಂಶೋಧಿಸಿದ ಪರಿಸರ ಸ್ನೇಹಿ ರೆಫ್ರಿಜರೇಟರ್, ಬಸವಾಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆದರ್ಶ್ ‘ಟರ್ನಿಂಗ್ ಟು ವೇಸ್ಟ್‌ ಪವರ್’ ನಿಟ್ಟೂರು ಶಾಲೆಯ ಸಾವಯವ ಸೊಳ್ಳೆ ಬತ್ತಿ, ಕುಂಬಳೂರು ಸರ್ಕಾರಿ ಶಾಲೆಯ ಅಭಿಷೇಕ್ ಮಳೆ ನೀರಿನಿಂದ ಅಂತರ್ಜಲ ಸಂರಕ್ಷಣೆ ಮಾಡುವ ಕುರಿತು ಪ್ರದರ್ಶಿಸಿದ ಪ್ರಾಜೆಕ್ಟ್‌ಗಳು ಗಮನ ಸೆಳೆದವು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್‌.ಎ.ರವೀಂದ್ರನಾಥ್‌ ‘ಇಂದು ಪ್ರತಿಯೊಬ್ಬರಿಗೂ ವಿಜ್ಞಾನದ ಅರಿವು ಬಹಳ ಮುಖ್ಯ. ರೈತನಿಗೆ ಬೆಳೆ ಬೆಳೆಯಲು ಹಾಗೂ ಗೊಬ್ಬರ, ಔಷಧ ಸಿಂಪಡಿಸಲು ವಿಜ್ಞಾನ ಬೇಕೇ ಬೇಕು. ವಿದ್ಯಾರ್ಥಿಗಳು ಕೇವಲ ಬಹುಮಾನಕ್ಕಾಗಿ ಭಾಗವಹಿಸದೇ ವಿಷಯ ತಿಳಿದುಕೊಳ್ಳಲು ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಪೋಷಕರು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಡಯಟ್ ಪ್ರಾಂಶುಪಾಲ ಎಚ್.ಕೆ‌. ಲಿಂಗರಾಜ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ತೀರ್ಪುಗಾರರಾದ ಗುಜರಾತ್‌ನ ಸಂಶೋಧಕ ಚಂದನ್ ಗೌತಮ್, ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಾಸುದೇವ ನಾಯಕ, ಮೋತಿ ವೀರಪ್ಪ ಕಾಲೇಜಿನ ಶ್ರೀನಿವಾಸ್ ಇದ್ದರು. ಉಮೇಶ್ ಜಾಂಬೋರೆ ವಂದಿಸಿದರು.

ಜಿಲ್ಲೆಯ 1968 ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ಗೆ ನಾಮಿನೇಷನ್ ಅಪ್ ಲೋಡ್ ಮಾಡಿದ್ದು, 352 ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ₹10 ಸಾವಿರ ಅವರ ವೈಯಕ್ತಿಕ ಖಾತೆಗೆ ಮಂಜೂರಾಗಿದೆ.

ಕೊಳಚೆ ನೀರು ಸಂಸ್ಕರಣೆ ಕೃಷಿಗೆ ಲಾಭ

ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ‘ಕೊಳಚೆ ನೀರಿನ ಸಂಸ್ಕರಣೆಯ ಹೊಸ ತಂತ್ರಜ್ಞಾನ ಕೃಷಿ ಮತ್ತು ಕೈಗಾರಿಕೆಗೆ ವರದಾನ’ ಪ್ರಾಜೆಕ್ಟ್ ಕೊಳಚೆ ನೀರನ್ನು ಮೀನುಗಾರಿಕೆ ಹಾಗೂ ಕೃಷಿಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿತು.

ಒಳಚರಂಡಿ ಸಂಸ್ಕರಣಾ ಘಟಕಗಳ ಬಳಿ ಕೊಳಚೆ ನೀರು ಹರಿಯುವ ಸ್ಥಳಗಳಲ್ಲಿ ನೆಟ್‌ಗಳನ್ನು ಅಳವಡಿಸಿ ಘನ ಹಾಗೂ ದ್ರವ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ರಾಡಿಯನ್ನು ಬಯೋಗ್ಯಾಸ್ ಬಳಕೆಗೂ ನೀರನ್ನು ಮೀನುಗಾರಿಗೆ ಹಾಗೂ ಜಲಕೃಷಿಗೆ ಬಳಸಬಹುದು ಎಂಬುದು ಅವರ ಕಲ್ಪನೆ. ಇದರಲ್ಲಿ ಜಲಮಾಲಿನ್ಯ ತಡೆಗಟ್ಟುವುದರ ಜೊತೆಗೆ ಕಡಿಮೆ ವೆಚ್ಚ ಹಾಗೂ ಪರಿಸರಸ್ನೇಹಿಯಾಗಿರುತ್ತದೆ. ದಾವಣಗೆರೆಯ ಸ್ಮಾರ್ಟ್‌ ಸಿಟಿಯವರಿಗೆ ಆಲೋಚನೆಯನ್ನು ಹೇಳಿದ್ದೇವೆ’ ಎನ್ನುತ್ತಾರೆ ಶಾಲೆಯ ಶಿಕ್ಷಕಿ.

ಯಾವ ತಾಲ್ಲೂಕಿನಲ್ಲಿ ಎಷ್ಟು ಪ್ರಾಜೆಕ್ಟ್

ಚನ್ನಗಿರಿ 159

ದಾವಣಗೆರೆ ಉತ್ತರ 25

ದಾವಣಗೆರೆ ದಕ್ಷಿಣ 46

ಹರಪನಹಳ್ಳಿ 13

ಹರಿಹರ 43

ಹೊನ್ನಾಳಿ 55

ಜಗಳೂರು 12

***

ಮೂಲ ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ಬೇಕು. ಶಾಲಾ ಮಟ್ಟದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗಳನ್ನು ಕೈಗೊಳ್ಳಲು ಅಧಿಕ ಅನುದಾನವನ್ನು ಕೇಂದ್ರ ಸರ್ಕಾರ ನೀಡಬೇಕು.
-ಶೈಲಜಾ ಬಸವರಾಜ್, ಜಿಲ್ಲಾ ಪಂಚಾಯಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT