ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಎಂಕೆ ನಗರ ಆರೋಗ್ಯ ಕೇಂದ್ರಕ್ಕೆ ‘ಗುಣಮಟ್ಟ ಖಾತ್ರಿ’ಯ ಗರಿ

ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡಕ್ಕೆ ಆಯ್ಕೆಯಾದ ಜಿಲ್ಲೆಯ ಏಕೈಕ ಕೇಂದ್ರ
Published 17 ಸೆಪ್ಟೆಂಬರ್ 2023, 7:42 IST
Last Updated 17 ಸೆಪ್ಟೆಂಬರ್ 2023, 7:42 IST
ಅಕ್ಷರ ಗಾತ್ರ

ಚಂದ್ರಶೇಖರ ಆರ್.

ದಾವಣಗೆರೆ: ಇಲ್ಲಿನ ಎಸ್‌.ಎಂ.ಕೆ. ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೇಂದ್ರ ಸರ್ಕಾರದ ‘ರಾಷ್ಟ್ರೀಯ ಗುಣಮಟ್ಟ ನಿರ್ವಹಣಾ ಪ್ರಮಾಣ ಪತ್ರ’ ಲಭಿಸಿದ್ದು, ರಾಜ್ಯದ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜತೆ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಸ್ಥಾನ ಪಡೆದ ಏಕೈಕ ಕೇಂದ್ರ ಎಂಬ ಗರಿಮೆ ಪಡೆದಿದೆ.

ಈ ಪ್ರಮಾಣಪತ್ರ ಪಡೆದ ಇತರ ಕೇಂದ್ರಗಳೆಂದರೆ ಬಳ್ಳಾರಿಯ ಕೌಲ್‌ ಬಜಾರ್‌ನ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿಯ ಮಿಯಾರು ಹಾಗೂ ರಾಯಚೂರಿನ ಚಿಕ್ಕನಕೋನಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಗುಣಮಟ್ಟ ಭರವಸೆ ಮಾನದಂಡ (ಎನ್‌ಕ್ಯುಎಎಸ್‌)ದ ದ್ವಿಸದಸ್ಯ ತಂಡ ರಾಜ್ಯದ ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ಸೌಲಭ್ಯಗಳನ್ನು ಪರಿಶೀಲಿಸಿ ಮೌಲ್ಯಮಾಪನ ನಡೆಸಿತ್ತು. ಈ ಮೌಲ್ಯಮಾಪನದಲ್ಲಿ ಎಸ್‌.ಎಂ.ಕೆ. ನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಶೇ 85 ಅಂಕ ಪಡೆದು ರಾಷ್ಟ್ರೀಯ ಗುಣಮಟ್ಟ ನಿರ್ವಹಣಾ ಪ್ರಮಾಣ ಪತ್ರ ಪಡೆದಿದೆ. ಇದರಿಂದ ಕೇಂದ್ರದ ಅಭಿವೃದ್ಧಿಗೆ ವಾರ್ಷಿಕವಾಗಿ ಅನುದಾನವೂ ಸಿಗಲಿದೆ.

ಆಗಸ್ಸ್‌ 16, 17ರಂದು ‌ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಕೇಂದ್ರದ ತಂಡದ ಇಬ್ಬರು ಸದಸ್ಯರು ಇಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದ್ದರು. ಅದರ ಆಧಾರದಲ್ಲಿ ಮೌಲ್ಯಮಾಪನ ನಡೆಸಿದ್ದರು.

ಡ್ರೆಸ್ಸಿಂಗ್‌ ರೂಂ ಹಾಗೂ ತುರ್ತು ಚಿಕಿತ್ಸಾ ಕೊಠಡಿ, ಸಾಮಾನ್ಯ ಕ್ಲಿನಿಕ್‌, ತಾಯಂದಿರ ಆರೋಗ್ಯ ಸೇವೆ, ಮಕ್ಕಳು ಹಾಗೂ ಶಿಶುಗಳಿಗೆ ನೀಡುವ ಚಿಕಿತ್ಸೆ, ಲಸಿಕಾ ಅಭಿಯಾನಗಳು, ಕುಟುಂಬ ಯೋಜನೆ, ಸಾಂಕ್ರಾಮಿಕ ರೋಗಗಳು ಹಾಗೂ ಅಸಾಂಕ್ರಾಮಿಕ ರೋಗಗಳ ನಿರ್ವಹಣೆ, ಔಷಧಾಲಯ, ಪ್ರಯೋಗಾಲಯಗಳು, ಆಡಳಿತ ವ್ಯವಸ್ಥೆ, ಸಿಬ್ಬಂದಿ ಕಾರ್ಯನಿರ್ವಹಣೆ ಸೇರಿದಂತೆ ಎಲ್ಲ ವಿಭಾಗಗಳನ್ನು ಪರಿಶೀಲಿಸಿ ಗುಣಮಟ್ಟ ಖಾತ್ರಿಪಡಿಸಿಕೊಂಡು ಅಂಕಗಳನ್ನು ನೀಡಲಾಗಿತ್ತು.

‘ಸ್ವಚ್ಛತೆ, ಹೊರ ಹಾಗೂ ಒಳ ರೋಗೊಗಳ ವಿಭಾಗ, ಸಿಬ್ಬಂದಿ ಕಾರ್ಯನಿರ್ವಹಣೆ, ದಾಖಲಾತಿ ನಿರ್ವಹಣೆ ಹಾಗೂ ತುರ್ತು ಸ್ಪಂದನೆ ಸೇರಿದಂತೆ ಹಲವು ಸೌಲಭ್ಯಗಳು, ವ್ಯವಸ್ಥೆ ಬಗ್ಗೆ ಕೇಂದ್ರದ ತಂಡ ಮೌಲ್ಯಮಾಪನ ಮಾಡುತ್ತದೆ. ಅದರಲ್ಲಿ ಹೆಚ್ಚು ಅಂಕ ಪಡೆದ ಆರೋಗ್ಯ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಕೇಂದ್ರಕ್ಕೆ ₹ 50,000ದಿಂದ ₹ 1 ಲಕ್ಷ ಅನುದಾನ ಸಿಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಷಣ್ಮುಖಪ್ಪ ಎಸ್‌. ಮಾಹಿತಿ ನೀಡಿದರು. 

‘ಉತ್ತಮ‌ ಕಾರ್ಯನಿರ್ವಹಣೆ ಆಧರಿಸಿ ಕೇಂದ್ರದ ತಂಡ ಆಯ್ಕೆ ಮಾಡುತ್ತದೆ. ಚೆನ್ನೈ ಹಾಗೂ ಕೇರಳದಿಂದ ಇಬ್ಬರು ತಜ್ಞ ವೈದ್ಯರ ತಂಡ ಬಂದಿತ್ತು. ಬಯೋಮೆಡಿಕಲ್‌ ತ್ಯಾಜ್ಯದ ವ್ಯವಸ್ಥಿತ ನಿರ್ವಹಣೆ, ಗರ್ಭಿಣಿಯರ ದಾಖಲಾತಿ, ಲಸಿಕಾ ಕಾರ್ಯಕ್ರಮಗಳು ಹಾಗೂ ಅದರ ನಿರ್ವಹಣೆಯ ದಾಖಲಾತಿ ಸೇರಿದಂತೆ ಎಲ್ಲ ವಿಭಾಗಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಎಸ್‌ಎಂಕೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್‌ ಎಲ್‌.ಡಿ. ವಿವರಿಸಿದರು.

ಡಾ. ಷಣ್ಮುಖಪ್ಪ ಎಸ್‌.
ಡಾ. ಷಣ್ಮುಖಪ್ಪ ಎಸ್‌.
ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಆರೋಗ್ಯ ಕೇಂದ್ರಗಳನ್ನು ಪಟ್ಟಿ ಮಾಡಿ ಕೇಂದ್ರದ ತಂಡಕ್ಕೆ ನೀಡಿದ್ದೆವು. ಅಲ್ಲಿಗೆ ಭೇಟಿ ನೀಡಿ ಮೌಲ್ಯಮಾಪನ ಮಾಡಿದೆ. ಎಸ್‌ಎಂಕೆ ನಗರದ ಕೇಂದ್ರ ಆಯ್ಕೆಯಾಗಿರುವುದು ಸಂತಸ ತಂದಿದೆ.
ಡಾ. ಷಣ್ಮುಖಪ್ಪ ಎಸ್‌. ಡಿಎಚ್‌ಒ
ಕೇಂದ್ರದ ತಂಡ ವೈದ್ಯರು ಶುಶ್ರೂಷಕರು ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರಿಂದ ಮಾಹಿತಿ ಪಡೆದಿದೆ. ಎಲ್ಲ ವಿಭಾಗಗಳಲ್ಲಿನ ಉತ್ತಮ ಕಾರ್ಯನಿರ್ವಹಣೆಯ ಮೌಲ್ಯಮಾಪನ ಮಾಡಿ ಅಂಕ ನೀಡಿದೆ.
ಡಾ. ವೆಂಕಟೇಶ್‌ ಎಲ್‌.ಡಿ. ಹಿರಿಯ ಆಡಳಿತ ವೈದ್ಯಾಧಿಕಾರಿ ಎಸ್‌ಎಂಕೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT