ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಲಾಕ್‌ಡೌನ್‌ ವೇಳೆ ಉಪಕರಣ ತಯಾರಿಸಿದ ಸಾಫ್ಟ್‌ವೇರ್‌ ಎಂಜಿನಿಯರ್‌ ರಘು

ಅಡಿಕೆ ಒಣಗಿಸುವ ಪರಿಸರಸ್ನೇಹಿ ಸೋಲಾರ್‌ ಡ್ರಯರ್‌, ಖರ್ಚೂ ಕಡಿಮೆ, ಶ್ರಮವೂ ಇಳಿಕೆ!

ಕೆ.ಎಸ್. ವೀರೇಶ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಸಾಂಪ್ರದಾಯಿಕ ವಿಧಾನದಲ್ಲಿ ಅಡಿಕೆ ಬೇಯಿಸಲು ಮತ್ತು ಒಣಗಿಸಲು ರೈತರು ಪಡಿಪಾಟಲು ಪಡುತ್ತಿರುವುದನ್ನು ಮನಗಂಡ ಸಮೀಪದ ಹೊನ್ನೆಮರದಹಳ್ಳಿಯ ಸಾಫ್ಟ್‌ವೇರ್ ಎಂಜಿನಿಯರ್ ರಘು ಬಿ.ಆರ್‌. ಅವರು ಅಡಿಕೆ ಬೇಯಿಸಲು ಪರಿಸರಸ್ನೇಹಿಯಾದ ಸೋಲಾರ್‌ ಡ್ರಯರ್‌ ತಯಾರಿಸಿದ್ದಾರೆ.

ನಾಲ್ಕು ಅಡಿ ಎತ್ತರ, 3 ಅಡಿ ಅಗಲ, 3 ಅಡಿ ಉದ್ದದ ಪೆಟ್ಟಿಗೆ ಆಕಾರದಲ್ಲಿ ಡ್ರಯರ್‌ ನಿರ್ಮಿಸಲಾಗಿದೆ. ಸುತ್ತ ಮರದ ಕಾರ್ಡ್‌ಬೋರ್ಡ್‌ನಿಂದ ಆವೃತವಾಗಿದೆ. ಹೊರಭಾಗಕ್ಕೆ ಕಪ್ಪು ಬಣ್ಣ ಲೇಪಿಸಲಾಗಿದೆ. ಒಳಭಾಗದಲ್ಲಿ ತೆಳು ಅಲ್ಯೂಮಿನಿಯಂ ಹಾಳೆಗಳಿಂದ ಕಾರ್ಡ್‌ಬೋರ್ಡ್ ಒಳಪದರ ಹೊದೆಸಲಾಗಿದೆ. ಮೇಲ್ಭಾಗದಲ್ಲಿ ತೆರೆದ ಭಾಗದ ನಾಲ್ಕು ಅಂಚಿನಲ್ಲಿ ನಿಕ್ರೋಮ್ ಶೀಟ್‌ಗಳನ್ನು ಅಳವಡಿಸಲಾಗಿದೆ. ಮುಚ್ಚಳದ ಭಾಗದಲ್ಲಿ ಮುಕ್ಕಾಲು ಇಂಚು ದಪ್ಪದ ಗಾಜಿನ ಪದರ ಅಳವಡಿಸಲಾಗಿದೆ ಎಂದು ರಘು ವಿವರಿಸಿದರು.

ನಿಕ್ರೋಮ್ ಶೀಟ್‌ಗಳು ಬೆಳಕಿನ ಪ್ರತಿಫಲನ ಉಂಟು ಮಾಡಿ ದಪ್ಪದ ಗಾಜಿನ ಮೇಲೆ ಬೀಳುತ್ತವೆ. ಅದರಿಂದ ಬೆಳಕಿನ ವಕ್ರೀಭವನದ ಮೂಲಕ ಒಳ ಪ್ರವೇಶಿಸುತ್ತದೆ. ಒಳಗೋಡೆಯಲ್ಲಿ ಅಲ್ಯೂಮಿನಿಯಂ ಹಾಳೆಗಳಿಂದ ಹಲವು ಬಾರಿ ಪ್ರತಿಫಲನ ಉಂಟಾಗಿ ಉಷ್ಣಾಂಶ ವೃದ್ಧಿಸುತ್ತದೆ. ಹೊರಭಾಗದಿಂದ ಕಪ್ಪು ವಸ್ತು ಸೂರ್ಯ ರಶ್ಮಿಯಿಂದ ಉಷ್ಣವನ್ನು ಹೀರುತ್ತದೆ. ಇದರಿಂದಾಗಿ ಸಾಧನದ ಒಳಭಾಗದಲ್ಲಿ 200 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣತೆ ಏರುತ್ತದೆ ಎಂದು ಇದರ ವಿಶೇಷದ ಕುರಿತು ಬೆಳಕು ಚೆಲ್ಲಿದರು.

ಸಿಪ್ಪೆ ಸುಲಿದ ಅಡಿಕೆ ಗೋಟುಗಳನ್ನು ಡ್ರಯರ್‌ ಒಳಗೆ ನೇರವಾಗಿ ಹಾಕಬಹುದು. ಬೇಯಿಸಲು ನೀರಿನ ಅವಶ್ಯಕತೆಯೂ ಇಲ್ಲ. ಡ್ರಯರ್‌ನಲ್ಲಿ ಎರಡರಿಂದ ಮೂರು ದಿನಗಳಲ್ಲಿ ಅಡಿಕೆ ಸಂಪೂರ್ಣವಾಗಿ ಬೆಂದು, ಒಣಗಿದ ಸ್ಥಿತಿಯಲ್ಲಿ ಸಿಗುತ್ತದೆ. ಅವಶ್ಯಕತೆ ಇದ್ದರೆ ಒಂದೆರಡು ದಿನ ಬಿಸಿಲಿನಲ್ಲಿ ಒಣಗಿಸಬಹುದು. ಸದ್ಯ ಈ ಉಪಕರಣದಲ್ಲಿ ಮೂರು ಕ್ವಿಂಟಲ್ ಹಸಿ ಅಡಿಕೆಯನ್ನು ವಿಕಿರಣ ತಂತ್ರಜ್ಞಾನದಿಂದ ಬೇಯಿಸಬಹದು. ರೈತರು ಅವರ ಅವಶ್ಯಕತೆಗೆ ತಕ್ಕಂತೆ ಸಾಧನದ ಗಾತ್ರ ಹೆಚ್ಚಿಸಿಕೊಳ್ಳಬಹುದು ಎಂದು ವಿವರಿಸಿದರು.

‘ಮೋಡ ಕವಿದ ವಾತಾವರಣದಲ್ಲಿ ವಿದ್ಯುತ್ ನಿಯಂತ್ರಿತ ಸಾಧನದಿಂದ ಒಳ ಉಷ್ಣತೆಯನ್ನು ವೃದ್ಧಿಸಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಅಡಿಕೆ ಬೇಯಿಸಿ, ಒಣಗಿಸಲು ಈ ತಂತ್ರಜ್ಞಾನದ ಸಹಾಯದಿಂದ ಯಶಸ್ಸು ಕಂಡಿದ್ದೇವೆ. ರೈತರು ಸಾಂಪ್ರದಾಯಿಕ ವಿಧಾನದಲ್ಲಿ ಸುಲಿದ ಅಡಿಕೆಯನ್ನು ಹಂಡೆ, ಗುಡಾಣಗಳಲ್ಲಿ ಬೇಯಿಸುವ ಚಿತ್ರಣ ಎಲ್ಲರ ಕಣ್ಮುಂದೆ ಇದೆ. ಅದಕ್ಕೆ ಉರುವಲು ಬಳಸುವುದರಿಂದ ಪರಿಸರಕ್ಕೆ ಮಾರಕವಾಗಿದೆ. ಒಣಗಿಸಲು ಮಳೆಗಾಲದಲ್ಲಿ ಪೇಚಾಡುವ ಪರಿಸ್ಥಿತಿಯೂ ಬರಲಿದೆ. ಅಡಿಕೆ ನೆನೆದರೆ ಫಂಗಸ್ ತಗುಲಿ ಧಾರಣೆ ಕುಸಿಯುವ ಭೀತಿಯೂ ಇದೆ. ಸೋಲಾರ್‌ ಡ್ರಯರ್‌ನಿಂದ ಈ ಎಲ್ಲಾ ಸಮಸ್ಯೆಗಳಿಗೂ ಸರಳ ಪರಿಹಾರ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಈ ಸಾಧನ ತಯಾರಿಸಲು ₹ 14 ಸಾವಿರ ಖರ್ಚು ಮಾಡಿದ್ದೇನೆ. ಸಹೋದರರಾದ ಮಲ್ಲಿಕಾರ್ಜುನ್, ನಾಗರಾಜ್ ನನ್ನ ಪ್ರಯತ್ನಕ್ಕೆ ಸಹಕರಿಸಿದ್ದಾರೆ. ಸಾಮಾನ್ಯ ವಿಜ್ಞಾನದ ವಿನೂತನ ಚಿಂತನೆ ಜನಸಾಮಾನ್ಯರ ಬದುಕಿಗೆ ಬೆಳಕು ನೀಡಿದರೆ ಸಂತಸ’ ಎನ್ನುತ್ತಾರೆ ರಘು.

ರಘು ಅವರನ್ನು ಸಂಪರ್ಕಿಸಲು ಮೊಬೈಲ್‌: 9972414251

ಪರಿಸರ ಸ್ನೇಹಿಯಾದ ಈ ಡ್ರಯರ್‌ನಿಂದ ಫಂಗಸ್‌ ತಡೆಯಬಹುದು. ಖರ್ಚು ಮತ್ತು ಶ್ರಮವೂ ಕಡಿಮೆ. ನನ್ನ ಈ ಪರಿಶ್ರಮವನ್ನು ಏಷ್ಯಾದ ಎರಡನೇ ದೊಡ್ಡ ಕೆರೆ ಸೂಳೆಕೆರೆಗೆ ಅರ್ಪಿಸುತ್ತೇನೆ.

- ರಘು ಬಿ.ಆರ್‌., ಅಧ್ಯಕ್ಷ, ಖಡ್ಗ ಸಂಘ

ಲಾಕ್‌ಡೌನ್ ವೇಳೆ ಮನೆಗೆ ಬಂದಿದ್ದಾಗ ಅಡಿಕೆ ಒಣಗಿಸಲು ಪರಿಸರಸ್ನೇಹಿ ಸೌರಶಕ್ತಿ ಡ್ರಯರ್‌ ಅನ್ವೇಷಣೆ ಮಾಡಿರುವುದು ಸಂತಸ ತಂದಿದೆ. ಶ್ರಮ ಕಡಿಮೆ ಆಗಿದೆ.

- ಬಿ.ಕೆ. ರಾಜಪ್ಪ, ರಘು ತಂದೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.