ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಳೆಕೆರೆ ವಲಯದಲ್ಲಿ ಸೊಲಾರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಕ್ಷೇಪ

Published 5 ಜೂನ್ 2024, 15:50 IST
Last Updated 5 ಜೂನ್ 2024, 15:50 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಸೂಳೆಕೆರೆ ವಲಯದ ಅರಣ್ಯ ಪ್ರದೇಶಕ್ಕೆ ಸೇರಿದ ಉಜ್ಜಿನಿ ಸಿದ್ದೇಶ್ವರ ಬೆಟ್ಟ, ಸೋಮಶೆಟ್ಟಿ ಹಳ್ಳಿ ಗುಡ್ಡ ಹಾಗೂ ಬಸವರಾಜಪುರ ಗುಡ್ಡದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸೊಲಾರ್ ವಿದ್ಯುತ್ ಸ್ಥಾವರ ಸ್ಥಾಪನೆಗೆ ಖಡ್ಗ ಸಂಘ ಆಕ್ಷೇಪಣೆ ವ್ಯಕ್ತಪಡಿಸಿದೆ.

ದಟ್ಟ ಹಾಗೂ ವೈವಿಧ್ಯಮಯ ಸಸ್ಯ ಸಂಕುಲವಿರುವ ಅರಣ್ಯ ಹಾಗೂ ವನ್ಯಜೀವಿಗಳ ವಾಸ ಸ್ಥಾನದಲ್ಲಿ ಈಗಾಗಲೇ ಸರ್ವೆ ನಡೆಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಅರಣ್ಯ ಪ್ರದೇಶದಲ್ಲಿ ಸರ್ಕಾರ ಅಥವಾ ಖಾಸಗಿ ಸಂಸ್ಥೆ ಸೊಲಾರ್ ಸ್ಥಾವರ ಸ್ಥಾಪನೆಗೆ ಮುಂದಾದಲ್ಲಿ ಗ್ರಾಮ ಪಂಚಾಯಿತಿ ಎನ್‌ಒಸಿ ಕೊಡಬಾರದು ಎಂದು ಲಿಂಗದಹಳ್ಳಿ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಗಿದೆ ಎಂದು ಖಡ್ಗ ಸಂಘದ ಅಧ್ಯಕ್ಷ ರಘು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಾರು 40 ಎಕರೆ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆ ಹಾಗೂ ಕೆಪಿಟಿಸಿಎಲ್‌ನಿಂದ ಸರ್ವೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅರಣ್ಯ ನಾಶ ಮಾಡಿ ಅಭಿವೃದ್ಧಿ ಮಾಡುವುದು ಬೇಡ. ಸೊಲಾರ್ ವಿದ್ಯುತ್ ಸ್ಥಾಪನೆಗೆ ಸಮತಟ್ಟಾದ ಅನುಪಯುಕ್ತ ಜಾಗಗಳಿವೆ. ಅಲ್ಲಿ ಸೊಲಾರ್ ಸ್ಥಾವರ ಸ್ಥಾಪನೆ ಮಾಡಲಿ. ಕಾಡು ನಾಶ ಮಾಡಲು ಮುಂದಾದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

‘ಮೂರು ವರ್ಷಗಳ ಹಿಂದೆ ಸೂಳೆಕೆರೆ ಗುಡ್ಡದಲ್ಲಿ ಗಣಿಗಾರಿಕೆಗೆ ಖಾಸಗಿ ಕಂಪನಿ ಚಾಲನೆ ನೀಡಿತ್ತು. ತಕ್ಷಣ ಖಡ್ಗ ಸಂಘದಿಂದ ಕ್ರಿಯಾಶೀಲವಾಗಿ ಸೂಕ್ತ ದಾಖಲೆ ಕೇಳಲಾಗಿತ್ತು. ಗಣಿಗಾರಿಕೆ ನಡೆಸದಂತೆ ಪ್ರತಿಭಟನೆ ನಡೆಸಲಾಗಿತ್ತು. ಗಣಿಗಾರಿಕೆ ಸ್ಥಗಿತಗೊಂಡಿತು’ ಎಂದು ಖಡ್ಗ ಸಂಘದ ಸುನೀಲ್ ಮಾಹಿತಿ ನೀಡಿದರು.

‘ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ, ಕೆಪಿಟಿಸಿಎಲ್ ಹಾಗೂ ಕಂದಾಯ ಇಲಾಖೆಯಿಂದ ಸೋಮಶೆಟ್ಟಿ ಹಳ್ಳಿ ಗುಡ್ಡದಲ್ಲಿ 40 ಎಕರೆ ಸರ್ವೆ ಕಾರ್ಯ ನಡೆಸಲಾಗಿದೆ’ ಎಂದು ಮಾವಿನಹಳ್ಳಿ ವಲಯ ಅರಣ್ಯಾಧಿಕಾರಿ ಜಗದೀಶ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT