ಶುಕ್ರವಾರ, ಜನವರಿ 17, 2020
24 °C
ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಲಹೆ

ಅಧಿಕಾರಿಗಳ ಸಮನ್ವಯ ಇದ್ದರೆ ಸ್ಪಂದನಕ್ಕೆ ವೇಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದ್ದಾಗ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುವಾಗ ತಡವಾಗುತ್ತದೆ. ಸಮನ್ವಯತೆ ಇದ್ದರೆ ಶೀಘ್ರ ಸ್ಪಂದನೆ ಸಾಧ್ಯ. ಅದಕ್ಕಾಗಿ ಪ್ರತಿ ವಾರ ಜನಸ್ಪಂದನಾ ಸಭೆಯ ಜತೆಗೆ ಅಧಿಕಾರಿಗಳ ಸಮನ್ವಯ ಸಮಿತಿ ಸಭೆಯನ್ನೂ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು..

ಒಂದು ಇಲಾಖೆಯು ಇನ್ನೊಂದು ಇಲಾಖೆಗೆ ಪತ್ರ ಬರೆದು ಅವರು ಅದಕ್ಕೆ ಉತ್ತರಿಸಿ ಆಮೇಲೆ ಕ್ರಮ ಕೈಗೊಳ್ಳುವಾಗ ತಿಂಗಳುಗಳು ಕಳೆದು ಹೋಗುತ್ತವೆ. ಎಲ್ಲ ಅಧಿಕಾರಿಗಳು ಜನಸ್ಪಂದನ ಸಭೆಯಲ್ಲಿ ಸೇರಿರುತ್ತೀರಿ. ಆಗ ಇಲ್ಲೇ ಎದುರೆದುರೇ ಮಾತನಾಡಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

‘ನಮ್ಮಲ್ಲಿ ವಿಶ್ವಾಸವಿಟ್ಟು ಅರ್ಜಿ ನೀಡಿ ಸ್ವಲ್ಪ ಸಮಯಾವಕಾಶ ನೀಡಿದಲ್ಲಿ ಅಗತ್ಯವಾಗಿ ಕೆಲಸ ಆಗುತ್ತದೆ. ಕೆಲಸಗಳನ್ನು ಮಾಡಿಸಲು ತನ್ನದೇ ಆದ ವ್ಯವಸ್ಥೆ ಇರುತ್ತದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಎಲ್ಲಿ ತಮ್ಮ ಕೆಲಸ ಆಗುತ್ತಿಲ್ಲವೆಂದು ಅನುಮಾನಿಸಿ ಪದೇ ಪದೇ ಬರಬೇಡಿ’ ಎಂದು ಒಂದೇ ವಿಷಯಕ್ಕೆ ಹಲವು ಬಾರಿ ಅರ್ಜಿ ಸಲ್ಲಿಸಲು ಬರುವವರಿಗೆ ಸ್ಪಷ್ಟನೆ ನೀಡಿದರು.

ಹೊನ್ನೂರು ಸರ್ಕಾರಿ ಶಾಲೆಗೆ ಭೂದಾನ ನೀಡಿರುವ 13 ಎಕರೆ 29 ಗುಂಟೆ ಭೂಮಿಯನ್ನು ಖಾಸಗಿಯವರು ಉಳುಮೆ ಮಾಡುತ್ತಿದ್ದಾರೆ. ಅದನ್ನು ಶಾಲಾ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೊನ್ನೂರು ಮುನಿಯಪ್ಪ, ಗಂಗಮ್ಮ ಮನವಿ ಮಾಡಿದರು. ಹಲವು ಕಡೆ ಶಾಲಾ ಜಮೀನುಗಳನ್ನು ಬಂದೋಬಸ್ತು ಮಾಡದ ಬಗ್ಗೆ ದೂರುಗಳು ಇವೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ತಿಳಿಸಿದರು. ಕೂಡಲೇ ಬಂದೋಬಸ್ತು ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತಮ್ಮ ಮಳಿಗೆಗಳ ಮುಂದೆ ಚಿಲ್ಲರೆ ವ್ಯಾಪಾರಸ್ಥರು ಫುಟ್‌ಪಾತ್ ಮೇಲೆ ತರಕಾರಿ ಹಾಗೂ ದೊಡ್ಡ ಛತ್ರಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಿರುವುದರಿಂದ ಮಳಿಗೆಗಳಿಗೆ ತೊಂದರೆ ಆಗಿದೆ. ಒಟ್ಟು 80 ಅಡಿ ಅಗಲ ರಸ್ತೆಯಲ್ಲಿ ಫುಟ್‌ಪಾತ್ ವ್ಯಾಪಾರಿಗಳು ಆವರಿಸಿಕೊಂಡಿದ್ದಾರೆ. ರಸ್ತೆಯಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿದೆ ಎಂದು ಚಾಮರಾಜಪೇಟೆಯ ಮಳಿಗೆ ವ್ಯಾಪಾರಸ್ಥರು ಮನವಿ ಮಾಡಿದರು.

‘ಬೈಕಲ್ಲಿ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಮಹಾಂತೇಶ ಬೀಳಗಿ ತಿಳಿಸಿದರು.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ರಸ್ತೆ ಬದಿಯಲ್ಲಿ ಬೆಳಿಗ್ಗೆಯೇ ಯುವಕರು ಕುಡಿಯುತ್ತಿದ್ದಾರೆ. ರಸ್ತೆ, ಚರಂಡಿ ಸರಿ ಇಲ್ಲ ಎಂದು ಹಿತರಕ್ಷಣಾ ಸಮಿತಿ ಸದಸ್ಯರು ದೂರಿದರು. ಮನೆ ನೀಡುವಂತೆ ಬುಳ್ಳಾಪುರದ ವೃದ್ಧೆ ಕೋರಿದರು. ಪುಷ್ಪಾ ಮಹಾಲಿಂಗಪ್ಪ ಶಾಲೆ, ಇಸ್ಲಾಂಪೇಟೆಯಲ್ಲಿ ಮತ್ತೊಂದು ಕಟ್ಟಡ ಅನುಮತಿ ಮೀರಿ ಕಟ್ಟಲಾಗುತ್ತಿದೆ ಎಂದು ಸಮಾಜ ಕಾರ್ಯಕರ್ತ ಮಲ್ಲಿಕಾರ್ಜುನ ಇಂಗಲೇಶ್ವರ ಆರೋಪಿಸಿದರು.

ಅನ್ನಭಾಗ್ಯದ ಅಕ್ಕಿಯನ್ನು ಕಿತ್ತೂರು ಜಯಣ್ಣ ಕಳ್ಳಸಾಗಾಟ ಮಾಡುತ್ತಿದ್ದಾರೆ ಎಂದು ಅಬ್ದುಲ್‌ ಸಿಕಂದರ್‌ ದೂರಿದರು. ಒಂದು ಹೆಬ್ಬೆರಳು ಹೋದವರಿಗೆ ಅಂಗವಿಕಲ ಸೌಲಭ್ಯ ನೀಡಲಾಗಿದೆ. ನಡೆಯುವುದೇ ಕಷ್ಟವಾಗಿರುವವರಿಗೆ ಸೌಲಭ್ಯ ನೀಡಿಲ್ಲ ಎಂದು ಅಂಗವಿಕಲರು ಅಳಲು ತೋಡಿಕೊಂಡರು.

ಮಾಸ್ಟರ್ ಅಥ್ಲೆಟಿಕ್ಸ್‌ ಅಸೋಸಿಯೇಷನ್ ಕ್ರೀಡಾಪಟುಗಳ ಕೋರಿಕೆಗೆ ಸ್ಪಂದಿಸಿದ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ 25 ಟ್ರ್ಯಾಕ್‌ಸೂಟ್‌ ನೀಡಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಖಾತೆ, ತತ್ಕಾಲ್ ಪೋಡಿ, ಸೊಸೈಟಿ ಸಾಲ, ರುದ್ರಭೂಮಿಗೆ ಹೋಗಲು ಜಾಗ, ರಸ್ತೆ, ಚರಂಡಿ ದುರಸ್ತಿ, ಕೆಲಸ ಹೀಗೆ ಅನೇಕ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಮಟ್ಟದ ಅಧಿಕಾರಿಗಳು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)