ಶುಕ್ರವಾರ, ಜನವರಿ 24, 2020
18 °C

ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ 150ಕ್ಕೂ ಹೆಚ್ಚು ಸ್ಥಾನ : ನಳಿನ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಾಂಗ್ರೆಸ್ ಬೌದ್ಧಿಕವಾಗಿ ಹಾಗೂ ಕಾರ್ಯಕರ್ತರ ವಿಷಯದಲ್ಲಿ ದಿವಾಳಿಯಾಗುತ್ತಿದ್ದು, ಕಾಂಗ್ರೆಸ್‌ಮುಕ್ತ ಕರ್ನಾಟಕವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲು ಟೀಕಿಸಿದರು.

ಬಿಜೆಪಿ ಜಿಲ್ಲಾ ಘಟಕದಿಂದ ಇಲ್ಲಿನ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಮಹಾನಗರ ಪಾಲಿಕೆ ಸದಸ್ಯರಿಗೆ ಸನ್ಮಾನ ಹಾಗೂ ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಬೌದ್ಧಿಕ ದಿವಾಳಿಯಾಗಿದೆ’ ಎಂದು ಆಪಾದಿಸಿದರು.

‘ಕರ್ನಾಟಕದ ಜನರು ಯಡಿಯೂರಪ್ಪ ಅವರ ಮೇಲೆ ವಿಶ್ವಾಸವಿಟ್ಟಿದ್ದಾರೆ. ಮೂರುವರೆ ವರ್ಷ ನಮ್ಮದೇ ಸರ್ಕಾರವಿದ್ದು, ಮುಂದಿನ ಅವಧಿಯಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಬೇಕು. ಕಾರ್ಯಕರ್ತರು ಮತಗಟ್ಟೆಯಲ್ಲಿ ತಂಡಗಳನ್ನು ರಚಿಸಿ ಅಧಿಕಾರಕ್ಕೆ ತರುವ ಪ್ರಯತ್ನ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೇರಳದಲ್ಲಿ ಮತಗಟ್ಟೆಯ ಅಧ್ಯಕ್ಷರ ಮನೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಧ್ವಜ ಹಾರಿಸಿದ್ದಾರೆ. ಕಾರ್ಯಕರ್ತರ ಮನೆಗೆ ಬಿಜೆಪಿ ಹೋಗಿರುವುದು ದೊಡ್ಡದು ಅನಿಸೊಲ್ಲ. ಕೇರಳದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕಮ್ಯುನಿಸ್ಟ್ ಪಾರ್ಟಿಯ ಮನೆಯಲ್ಲಿ ಬಿಜೆಪಿ ಧ್ವಜ ಹಾರಾಡುತ್ತದೆ’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿ, ನಾನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನಾದ ಮೇಲೆ ಬೆಂಗಳೂರು ಮೇಯರ್, ನಗರಪಾಲಿಕೆ, ನಗರಸಭೆ ಹಾಗೂ ಉಪಚುನಾವಣೆ ಎದುರಿಸಿದೆವು. ಬೆಂಗಳೂರು ಮೇಯರ್ ಬಿಜೆಪಿ ಪಾಲಾಗಿದೆ. ನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಿದೆ. ದಾವಣಗೆರೆಲ್ಲಿ ಸ್ವಲ್ಪ ಕಡಿಮೆ ಸ್ಥಾನಗಳು ಬಂದಿವೆ. ಬಿಜೆಪಿ ಅಧಿಕಾರಕ್ಕೆ ತರುವ ಪ್ರಯತ್ನವನ್ನು ಮುಖಂಡರು ಮಾಡುತ್ತಾರೆ. ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದಿದೆ’ ಎಂದು ಹೇಳಿದರು.

‘ಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿ ಕಾರ್ಯಕರ್ತರ ಶಕ್ತಿ. ಇದು ಬಿಜೆಪಿಯ ವಿಶೇಷ. ಚಹಾ ಮಾರುತ್ತಿದ್ದ ಹುಡುಗ ಭಾರತದ ಪ್ರಧಾನಿ ಮಾಡುವ ಶಕ್ತಿ ಬಿಜೆಪಿಗೆ ಇದೆ’ ಎಂದರು.

‘ರಾಷ್ಟ್ರದಲ್ಲಿ ಮೋದಿ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೆ. ಅಧಿಕಾರ ಸುಲಭದಲ್ಲಿ ಬಂದಿಲ್ಲ. ಪಕ್ಷವು ಅನುಸರಿಸಿದ ಕಾರ್ಯಪದ್ಧತಿ, ವಿಚಾರ ಮತ್ತು ಸಿದ್ಧಾಂತ ಹಾಗೂ ಹಿರಿಯರ ಆದರ್ಶಗಳಿಂದ ಪಕ್ಷ ಬೆಳೆಯಿತು. ಕಾಶ್ಮೀರ ಭಾರತದ ಶಿರ ಅದು ಭಾರತಕ್ಕೆ ಸೇರಬೇಕು ಎಂದು ಶ್ಯಾಂ ಪ್ರಸಾದ್ ಮುಖರ್ಜಿ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ 370ನೇ ವಿಧಿ ರದ್ದು ಮಾಡಿ ಕಾಶ್ಮೀರ ಉಳಿಸಿಕೊಂಡೆವು. ಸುಧೀರ್ಘ ಹೋರಾಟದಲ್ಲಿ ವಿಚಾರಧಾರೆಯಲ್ಲಿ ಬಿಜೆಪಿ ರಾಜೀ ಮಾಡಿಕೊಂಡಿಲ್ಲ’ ಎಂದು ಹೇಳಿದರು

‘ರಾಜಕೀಯ ಒಂದು ದಾರಿ ಅಷ್ಟೇ. ‌ಕೇವಲ ಅಧಿಕಾರ ನಡೆಸುವುದಷ್ಟೇ ನಮ್ಮ ಜವಾಬ್ದಾರಿ ಅಲ್ಲ. ನರೇಂದ್ರ ಮೋಡಿ, ಮನಮೋಹನ್‌ ಸಿಂಗ್ ಎಲ್ಲರೂ ಅಧಿಕಾರ ನಡೆಸಿದ್ದಾರೆ. ಆದರೆ ರಾಷ್ಟ್ರೀಯ ಕಲ್ಪನೆಯಲ್ಲಿ ಎತ್ತರಕ್ಕೆ ಏರಿಸುವುದು ಬಿಜೆಪಿ ಗುರಿ. ಕಾಂಗ್ರೆಸ್ ಪಕ್ಷದಂತೆ ಸೂಚನೆ, ನೋಟಿಸ್‌ಗಳಿಂದ ಬಿಜೆಪಿ ಬೆಳೆದಿಲ್ಲ. ಆದರ್ಶದಿಂದ ಬೆಳೆದಿದೆ. ಬಿಜೆಪಿ ಕಾರ್ಯಪದ್ಧತಿಯ ಮೇಲೆ ಆಧಾರದ ಮೇಲೆ ನಿಂತಿದೆ’ ಎಂದರು.

ಇದನ್ನೂ ಓದಿ: ಕಾಂಗ್ರೆಸ್ ರಾವಣರ ಪಾರ್ಟಿ: ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತ್‌ರಾವ್ ಜಾಧವ್‌ ಅಧ್ಯಕ್ಷತೆ ವಹಿಸಿದ್ದರು. ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಎಂ. ಬಸವರಾಜನಾಯ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಎಸ್‌.ಶಿವಯೋಗಿಸ್ವಾಮಿ, ದಾವಣಗೆರೆ ಜಿಲ್ಲೆಯ ಪ್ರಭಾರಿ ಸುರೇಶ್, ರೈತ ಒಕ್ಕೂಟದ ನಾಯಕ ಪ್ರೊ. ನರಸಿಂಹಪ್ಪ,  ದಾವಣಗೆರೆ ಜಿಲ್ಲೆ ಚುನಾವಣಾಧಿಕಾರಿ ದತ್ತಾತ್ರೇಯ, ಮಾಜಿ ಜಿಲ್ಲಾಧ್ಯಕ್ಷ ಜೀವನ್‌ಮೂರ್ತಿ, ಮುಖಂಡರಾದ ಆನಂದಪ್ಪ, ಬಿ.ಜಿ. ಸಂಗನಗೌಡ್ರು, ಆನಂದ್‌ರಾವ್‌ ಶಿಂಧೆ, ಶ್ರೀನಿವಾಸ್, ಸುರೇಶ್‌ ಜೆ.ಕೆ, ಲಿಂಗರಾಜು, ರಾಜೇಶ್ ಹಾಗೂ ಮಹಾನಗರ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು