ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಹೋದರಿಯರು ಅನುಮಾನಾಸ್ಪದ ಸಾವು

Last Updated 30 ಜುಲೈ 2021, 17:03 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಆಂಜನೇಯ ಕಾಟನ್‌ಮಿಲ್‌ ಬಡಾವಣೆಯಲ್ಲಿ ಸಹೋದರಿಯರಿಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಗೌರಮ್ಮ (34) ಹಾಗೂ ರಾಧಮ್ಮ (28) ಮೃತರು.

ಈ ಸಹೋದರಿಯರು ಆಂಜನೇಯ ಕಾಟನ್‌ ಮಿಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು, ಅದೇ ಬಡಾವಣೆಯಲ್ಲಿ ವಾಸವಿದ್ದರು. ಬೆನಕನಹಳ್ಳಿ ಗ್ರಾಮದವನಾದ ಗೌರಮ್ಮ ಅವರ ಪತಿ ಮಂಜುನಾಥ ಹಾಸನದಲ್ಲಿ ತರಗಾರನಾಗಿ ಕೆಲಸ ಮಾಡಿಕೊಂಡಿದ್ದು, ಆಗಾಗ್ಗೆ ದಾವಣಗೆರೆಗೆ ಬಂದು ಹೋಗುತ್ತಿದ್ದ. ಕೌಟುಂಬಿಕ ಕಲಹದಿಂದ ಈತನೇ ಕೊಲೆ ಮಾಡಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಗೌರಮ್ಮ ಅವರು ಮದುವೆಯಾದಾಗಿನಿಂದ ಪತಿಯ ಮನೆಯಲ್ಲಿ ಸೇರಿಸುತ್ತಿರಲಿಲ್ಲ. ಇದರಿಂದಾಗಿ ದಾವಣಗೆರೆಯಲ್ಲಿ ವಾಸವಿದ್ದರು. ಮತ್ತೊಬ್ಬರು ಸಹೋದರಿ ರಾಧಮ್ಮ ಅವರು ಪತಿ ಅಜ್ಜಯ್ಯ ಅವರಿಂದ ವಿವಾಹ ವಿಚ್ಛೇದನ ಪಡೆದು ಅಕ್ಕ ಗೌರಮ್ಮ ಅವರೊಂದಿಗೆ ಹಲವು ವರ್ಷಗಳಿಂದ ವಾಸವಿದ್ದರು.

ಜುಲೈ 23ರಂದು ತೋಳಹುಣಸೆ ಬಳಿಯ ಚಂದ್ರನಹಳ್ಳಿ ಗ್ರಾಮದ ಸಂಬಂಧಿ ಚಂದ್ರಮ್ಮ ಈ ಇಬ್ಬರನ್ನು ಮಾತನಾಡಿಸಿದ್ದರು. ಕೆಲದಿನಗಳಿಂದ ಈ ಸಹೋದರಿಯರು ಕೆಲಸಕ್ಕೆ ಬಂದಿರಲಿಲ್ಲ. ಫೋನ್ ಮಾಡಿದರೂ ಸ್ವಿಚ್ ಆಫ್ ಬರುತ್ತಿತ್ತು. ಅನುಮಾನದಿಂದ ಚಂದ್ರಮ್ಮ ಸ್ಥಳಕ್ಕೆ ಹೋದರು. ಆಗ ಕೆಟ್ಟವಾಸನೆ ಬಂದಿದ್ದು, ಸ್ಥಳೀಯರ ನೆರವಿನಿಂದ ಬಾಗಿಲು ಒಡೆದ ವೇಳೆ ಈ ಇಬ್ಬರ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.‌

‘ಈ ವೇಳೆ ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕೆಲ ದಿನಗಳ ಹಿಂದೆ ಪತಿ ಮಂಜುನಾಥ್ ಬಂದಿದ್ದ ವೇಳೆ ಈ ಇಬ್ಬರ ನಡುವೆ ಜಗಳವಾಗಿದ್ದು, ಯಾವುದೋ ಆಯುಧದಿಂದ ಕೊಲೆ ಮಾಡಿ, ವಿಷಯ ಮುಚ್ಚಿಡಲು ಬಾಗಿಲು ಹಾಕಿಕೊಂಡು ಹೋಗಿದ್ದಾನೆ‘ ಎಂದು ಸಹೋದರಿಯರ ಸಂಬಂಧಿ ತೋಳಹುಣಸೆಯ ಚಂದ್ರಮ್ಮ ವಿದ್ಯಾನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಸಹೋದರಿಯರ ತಾಯಿಗೆ ಐವರು ಹೆಣ್ಣುಮಕ್ಕಳಿದ್ದು, 10 ವರ್ಷಗಳ ಹಿಂದೆ ಹಿರಿಯ ಮಗಳ ಕೊಲೆಯಾಗಿತ್ತು. ಇದೀಗ ಮತ್ತಿಬ್ಬರೂ ಮೃತಪಟ್ಟಿದ್ದಾರೆ.

‘ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಕೊಲೆ ಎಂಬ ಸಂಶಯ ವ್ಯಕ್ತವಾಗಿದೆ. ದೇಹ ಕೊಳೆತ ಸ್ಥಿತಿಯಲ್ಲಿ ಇದ್ದುದರಿಂದ ಯಾವುದನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ಗೊತ್ತಾಗಲಿದೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT