ಶನಿವಾರ, ಜೂನ್ 19, 2021
28 °C
ಸರ್ಕಾರಿ ಶಾಲೆ ಮಕ್ಕಳಿಗೆ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ, ಮನೆಪಾಠ

ಮಕ್ಕಳ ಕಲಿಕೆಯತ್ತ ಶಿಕ್ಷಕರ ಚಿತ್ತ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾರಣ ಸರ್ಕಾರಿ ಶಾಲೆಗಳ ಮಕ್ಕಳು ಓದಿನಿಂದ ವಿಮುಖವಾಗಬಾರದು ಎಂದು ಶಿಕ್ಷಕರು ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಆನ್‌ಲೈನ್‌ ತರಗತಿ, ಮನೆಗಳ ಆವರಣ, ಮರದ ಕೆಳಗೆ, ಸಮುದಾಯ ಭವನ... ಹೀಗೆ ಎಲ್ಲಿ ಸಾಧ್ಯವೋ ಅಂತಹ ಕಡೆಗಳಲ್ಲಿ ಅಂತರ ಕಾಯ್ದುಕೊಂಡು, ಕೊರೊನಾ ಜಾಗೃತಿ ಮೂಡಿಸುತ್ತಲೇ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ.

ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಶಿಕ್ಷಕರು ಮಕ್ಕಳ ಮನೆಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಕೆಲವೆಡೆ ಗೂಗಲ್‌ ಮೀಟ್‌, ವಾಟ್ಸ್‌ಆ್ಯಪ್‌ಗಳಲ್ಲಿ ಪಠ್ಯ ಹಾಗೂ ವಿಷಯಗಳನ್ನು ಪಿಡಿಎಫ್‌ ಮಾಡಿ ಮಕ್ಕಳು ಕಲಿಕೆಯತ್ತ ಗಮನಹರಿಸುವಂತೆ ಮಾಡುತ್ತಿದ್ದಾರೆ. ಗ್ರಾಮದ ಒಂದು ಕಡೆ ಸ್ಥಳ ನಿಗದಿ ಮಾಡಿ ಅಲ್ಲಿ ಮಕ್ಕಳನ್ನು ಸೇರಿಸಿ ಪಾಠ ಮಾಡಲಾಗುತ್ತಿದೆ. ಶಿಕ್ಷಣ ಇಲಾಖೆಯಿಂದಲೇ ‘ವಿದ್ಯಾಗಮ’ ಕಾರ್ಯಕ್ರಮ ಆರಂಭವಾಗಿದ್ದು, ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಲಾಗಿದೆ. 

ಜಿಲ್ಲೆಯಲ್ಲಿ ಕೆಲ ಶಿಕ್ಷಕರು ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಮಕ್ಕಳಿಗೆ ಬೋಧನೆ ಮಾಡುತ್ತಿದ್ದು, ಹಲವರು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಮಕ್ಕಳಿಗೆ ಹೋಂ ವರ್ಕ್‌ ನೀಡುತ್ತಿದ್ದಾರೆ. ಬಹುತೇಕ ಶಿಕ್ಷಕರು ಸ್ವ ಆಸಕ್ತಿಯಿಂದಲೇ ಪಾಠ ಮಾಡುತ್ತಿರುವುದು
ಗಮನಾರ್ಹ.

ವಿದ್ಯಾಗಮ ಕಲಿಕಾ ಕಾರ್ಯಕ್ರಮ: ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ಸೇರಿ ಆನ್‌ಲೈನ್‌ ತರಗತಿಗಳು ಏಕಮುಖವಾಗಿರುವ ಕಾರಣ ಶಿಕ್ಷಕರು ಮಕ್ಕಳನ್ನು ವಾರಕ್ಕೊಮ್ಮೆಯಾದರೂ ಭೇಟಿ ಮಾಡುವುದಕ್ಕಾಗಿ ‘ವಿದ್ಯಾಗಮ’ ಕಲಿಕಾ ಕಾರ್ಯಕ್ರಮ ರೂಪಿಸಲಾಗಿದೆ. ಸ್ಮಾರ್ಟ್‌ ಫೋನ್‌, ಟಿವಿ ಸೌಲಭ್ಯ ಇಲ್ಲದ ಮಕ್ಕಳು ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದಲೂ ಈ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ರೂಪಿಸಿದೆ. 

‘ಗೂಗಲ್‌ ಮೀಟ್‌ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇವೆ. ನನ್ನ ಆನ್‌ಲೈನ್‌ ಬ್ಲಾಗ್‌ ಮೂಲಕ ರಾಜ್ಯದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದು ವಿಶೇಷ. ಲ್ಯಾಪ್‌ಟ್ಯಾಪ್‌, ಕಂಪ್ಯೂಟರ್, ಮೊಬೈಲ್ ಎಂದು ವಿಂಗಡಣೆ ಮಾಡಿದ್ದೇವೆ. ಮೊಬೈಲ್‌ ಕಂಪ್ಯೂಟರ್‌ ಇಲ್ಲದ ಮಕ್ಕಳ ಮನೆಗೇ ತೆರಳಿ ಹಲವು ಮಕ್ಕಳನ್ನು ಒಂದೆಡೆ ಸೇರಿಸಿ ಪಾಠ ಮಾಡುತ್ತಿದ್ದೇವೆ’ ಎಂದರು ಕೆರೆಬಿಳಚಿ ಸರ್ಕಾರಿ ಉರ್ದು ಪ್ರೌಢಶಾಲೆಯ ಗಣಿತ ಶಿಕ್ಷಕ ಸುಯೇಬ್‌ ಬೇಗ್‌.

‘ಗೂಗಲ್‌ ಆ್ಯಪ್‌, ಝೂಮ್‌ ಆ್ಯಪ್‌ ಮೂಲಕ ಪಾಠ ಮಾಡುತ್ತಿದ್ದೇವೆ. ಈ ಮೂಲಕ ತರಗತಿಗೆ ಬಂದ ಕೆಲ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಸಹಕಾರಿಯಾಯಿತು’ ಎಂದು ಸಂತೇಬೆನ್ನೂರಿನ ಕೆಪಿಎಸ್‌ ಶಾಲೆಯ ಶಿಕ್ಷಕ ಜಾಕೀರ್‌ ಹುಸೇನ್‌ ವಿವರಿಸಿದರು.

‘ಕೊರೊನಾ ಕಾರಣ ಕೆಲವೆಡೆ ಸೀಲ್‌ಡೌನ್‌ ಆಗಿದೆ. ಅಂತಹ ಕಡೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಉಳಿದಂತೆ ಸಾಧ್ಯವಿರುವಷ್ಟು ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದು ಖುಷಿಯಿಂದ ಹೇಳಿದರು.

‘ನಮ್ಮ ಶಾಲೆಯಲ್ಲೂ
ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ಹೋಂ ವರ್ಕ್‌ ನೀಡುತ್ತಿದ್ದೇವೆ. ಚಂದನ ವಾಹಿನಿಯ ಸೇತು ಬಂದ ಕಾರ್ಯಕ್ರಮ ಪ್ರಸಾರದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುತ್ತಿದ್ದೇವೆ. ಜೊತೆಗೆ ಯೂಟ್ಯೂಬ್‌ ಚಾನೆಲ್‌ನ ದುರ್ಬಳಕೆ‌ ಬಗ್ಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇಬ್ಬರನ್ನೂ ಎಚ್ಚರಿಸುತ್ತಿದ್ದೇವೆ’ ಎಂದರು ಆವರಗೊಳ್ಳ ಸರ್ಕಾರಿ ಶಾಲೆಯ ಶಿಕ್ಷಕ ವಾಗೀಶ ಮಲ್ಕಿ
ಒಡೆಯರ್‌.

‘ಶಿಕ್ಷಕರು ಮುಂದೆ ಬಂದು ಪಾಠ ಮಾಡುತ್ತಿರುವುದು ಸಂತಸ ತಂದಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು ಡಿಡಿಪಿಐ ಸಿ.ಆರ್‌. ಪರಮೇಶ್ವರಪ್ಪ.

ಗೂಗಲ್‌ ಫಾರ್ಮ್ ಮೂಲಕವೂ ಪಾಠ:

ಕೆಲ ಶಿಕ್ಷಕರು ಗೂಗಲ್‌ ಫಾರ್ಮ್ ಮೂಲಕವೂ ಪಾಠ ಮಾಡುತ್ತಿರುವುದು ವಿಶೇಷ. ಇಲ್ಲಿ ಆನ್‌ಲೈನ್‌ ಪ್ರಶ್ನೆಪತ್ರಿಕೆ ಇರುತ್ತದೆ. ವಿದ್ಯಾರ್ಥಿಗಳು ಸಬ್‌ಮಿಟ್‌ ಮಾಡಿದ ಕೂಡಲೇ ಫಲಿತಾಂಶ ಬರುತ್ತದೆ. ಈ ಫಲಿತಾಂಶ ಶಿಕ್ಷಕರು ಹಾಗೂ ಮಕ್ಕಳು ಇಬ್ಬರಿಗೂ ರವಾನೆಯಾಗುತ್ತದೆ. ಇದರಲ್ಲಿ ಎಲ್ಲ ಮಾದರಿಯ ಪ್ರಶ್ನೆ ಇರುತ್ತದೆ.

ರಾಜ್ಯದ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು ನನ್ನ ಬ್ಲಾಗ್‌ ಮೂಲಕ ಪಾಠ ಕೇಳಿ ಪ್ರಶ್ನೆಗಳನ್ನು ಕೇಳಿದ್ದು ಸಂತಸ ತಂದಿದೆ. ನಮ್ಮ ಶಾಲೆಯ ಶಿಕ್ಷಕರಿಗೆ ಆನ್‌ಲೈನ್‌ ತರಗತಿ ಬಗ್ಗೆ ತರಬೇತಿ ನೀಡಿದ್ದೇನೆ.

–ಸುಯೇಬ್‌ ಬೇಗ್‌, ಶಿಕ್ಷಕ, ಕೆರೆಬಿಳಚಿ

ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹೋಂ ವರ್ಕ್, ಪರೀಕ್ಷೆ ನೀಡುತ್ತಿದ್ದೇವೆ. ಮನೆ ಹತ್ತಿರ ಇರುವ ವಿದ್ಯಾರ್ಥಿಗಳ ಮನೆಗೇ ಹೋಗಿ ಅಂತರ ಕಾಯ್ದುಕೊಂಡು ಪಾಠ ಮಾಡುತ್ತಿದ್ದೇವೆ.
–ಜಾಕೀರ್‌ ಹುಸೇನ್, ಶಿಕ್ಷಕ ಸಂತೇಬೆನ್ನೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.