ಭಾನುವಾರ, ಸೆಪ್ಟೆಂಬರ್ 19, 2021
30 °C
ಕಬ್ಬಳ ಗ್ರಾಮದ ಶಿಕ್ಷಕಿ ಮಂಗಳಾ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಚನ್ನಗಿರಿ: ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ ಶಿಕ್ಷಕಿ ಮಂಗಳಾ

ಎಚ್‌.ವಿ. ನಟರಾಜ್‌ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ತಾಲ್ಲೂಕಿನ ಕಬ್ಬಳ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕಿ ಎಚ್.ಎಂ. ಮಂಗಳಾ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಆಯ್ಕೆಯಾಗಿದ್ದು, ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ಮಂಗಳಾ ಅವರಿಗೆ 2020-21ನೇ ಸಾಲಿನಲ್ಲಿ ‘ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿ ಲಭಿಸಿತ್ತು. ಇದೀಗ ‘ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 19 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳಾ ಅವರು ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರ ಪಡೆದುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಾ ಬಂದಿ‌ದ್ದಾರೆ. ಗ್ರಾಮಸ್ಥರು, ಪೋಷಕರು ಮತ್ತು ವಿದ್ಯಾರ್ಥಿಗಳ ಪ್ರೀತಿಪಾತ್ರ ಶಿಕ್ಷಕಿಯಾಗಿದ್ದಾರೆ.

‘ಕಲಿಕಾ ಉಪಕರಣಗಳ ಮೂಲಕ ಮಕ್ಕಳಿಗೆ ಕಲಿಸಲಾಗುತ್ತಿದೆ. ಉಪಕರಣಗಳ ತಯಾರಿಕೆಯಲ್ಲಿ ಮಕ್ಕಳನ್ನೂ ತೊಡಗಿಸಿಕೊಂಡಿದ್ದೇವೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ್ದರಿಂದ ಪಾಠದ ವಿಡಿಯೊ ಮಾಡಿ ಮಕ್ಕಳ ಮೊಬೈಲ್‌ಗಳಿಗೆ ಕಳುಹಿಸುತ್ತಿದ್ದೆವು. ಸ್ಮಾರ್ಟ್ ತರಗತಿ ನಡೆಸಿ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಕುಂದು ಬಾರದಂತೆ ಎಚ್ಚರ ವಹಿಸಲಾಯಿತು’ ಎಂದು ಶಿಕ್ಷಕಿ ಎಚ್.ಎಂ. ಮಂಗಳಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುವ ಸಮಯದಲ್ಲಿ ಕಾಲು ಎಕರೆ ಅಡಿಕೆ ತೋಟವನ್ನು ಶಾಲೆಯ ಅಭಿವೃದ್ಧಿಗಾಗಿ ಗ್ರಾಮಸ್ಥರು ನೀಡಿದ್ದರು. ದತ್ತು ಸಮಿತಿ ಮಾಡಿಕೊಂಡು ಶಾಲೆಗೆ ಗ್ರಾಮ ಪಂಚಾಯಿತಿಯಿಂದ 1 ಕೊಠಡಿ ಹಾಗೂ ಶೌಚಾಲಯ ಕೂಡಾ ನಿರ್ಮಿಸಲಾಗಿದೆ. ನನ್ನ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ನನ್ನ ಶಿಕ್ಷಕ ವೃತ್ತಿಯ ಅವಧಿಯಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ನಾನು ಬದ್ಧಳಾಗಿದ್ದೇನೆ’ ಎಂದು ಹೇಳಿದರು.

ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ. 5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು