ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿನ್ನೋಟ–2020: ನೋವನ್ನು ತಂದ 2020 ಮರೆಯಾಗುವ ಹೊತ್ತು...

ಹೊಸ ವರ್ಷದಲ್ಲಿ ಸಂಭ್ರಮ ತೇಲಿಬರಲಿ ಎಂಬ ಕನಸಿನ ನೇವರಿಕೆ
Last Updated 30 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ನಲಿವಿಗಿಂತ ಹೆಚ್ಚು ನೋವನ್ನೇ ಹೊತ್ತು ತಂದ 2020 ವರ್ಷ ಇನ್ನೇನು ಮರೆಯಾಗಲಿದೆ. ಹೊಸ ವರ್ಷ 2021ನ್ನು ಸ್ವಾಗತಿಸಲು ಜನರು ಸಜ್ಜಾಗಿರುವ ಹೊತ್ತಲ್ಲೇ ಹೊಸ ರೂಪದ ಕೊರೊನಾ ವೈರಸ್‌ ಆತಂಕ ಮೂಡಿಸಿದೆ. ಹೊಸ ವರ್ಷದಲ್ಲಾದರೂ ಜೀವನದಲ್ಲಿ ಸಂಭ್ರಮ ತರಲಿ ಎಂಬುದು ಎಲ್ಲರ ಅಪೇಕ್ಷೆ.

ಎಲ್ಲ ಕ್ಷೇತ್ರಗಳಿಗೆ ಆರ್ಥಿಕವಾಗಿ ಸಂಕಷ್ಟ ತಂದ ಕೊರೊನಾ, ಜಿಲ್ಲೆಯಲ್ಲೂ ಕಾರ್ಮಿಕರಿಂದ ಹಿಡಿದು ಎಲ್ಲ ವರ್ಗದ ಜನರನ್ನು ಹೈರಾಣಾಗಿಸಿತು. ಅದೇ ಸಮಯದ‌ಲ್ಲಿ ಹರಿಹರದ ಬನ್ನಿಕೋಡಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು ಆತಂಕ ತಂತು.

ಜಿಲ್ಲೆಯ ಮಟ್ಟಿಗೆ ಸಂಭ್ರಮ ಪಡುವ ವಿಷಯ ವಿರಳ. ಹರಿಹರದ ಆರೋಗ್ಯ ಮಾತೆ ಚರ್ಚ್‌ ‘ಕಿರು ಬೆಸಿಲಿಕಾ’ ವಿಶ್ವಮಾನ್ಯತೆ ಪಡೆದದ್ದು, ಸತತ ಮೂರನೇ ವರ್ಷವೂ ಜಿಲ್ಲೆಯ ಜೀವನಾಡಿ ಭದ್ರಾ ತುಂಬಿದ್ದು ಸಂತಸ ಮೂಡಿಸಿತು.

ಗಾಜಿನ ಮನೆಗೆ 6 ಸಾವಿರ ಜನರ ಭೇಟಿ

* ಜನವರಿಯಲ್ಲಿ ಹೊಸ ವರ್ಷಾಚರಣೆಗೆ ದಾವಣಗೆರೆಯ ಗಾಜಿನ ಮನೆಗೆ 6 ಸಾವಿರ ಜನರು ಭೇಟಿ ನೀಡಿದ್ದರು.

*ಜ.1 ನ್ಯಾಮತಿ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ.

*ಜ. 10ರಂದು ಶಿವಯೋಗ ಮಂದಿರದಲ್ಲಿ ಜಯದೇವ ಶ್ರೀಗಳ ಸ್ಮರಣೋತ್ಸವ.ಗಣ್ಯರಿಗೆ ಶಿವಮೂರ್ತಿ ಮುರುಘಾ ಶರಣರಿಂದ ‘ಜಯದೇವ ಶ್ರೀ’, ‘ಶೂನ್ಯಪೀಠ’ ಪ್ರಶಸ್ತಿ ಪ್ರದಾನ.

*ಜ. 12ರಂದು ಸೋಮೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ಖ್ಯಾತ ಗಾಯಕ ಎಸ್.‌ಪಿ.ಬಾಲಸುಬ್ರಹ್ಮಣ್ಯಂ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ದರು. ನಗರದ ಹಿಮೋಫಿಲಿಯಾ ರೋಗಿಗಳ ಜೊತೆ ಸಮಯ ಕಳೆದ ಎಸ್‌ಪಿಬಿ ಇದೇ ವರ್ಷ ಇಹಲೋಕ ತ್ಯಜಿಸಿದಾಗ ಜಿಲ್ಲೆಯ ಜನ ಕಂಬನಿ ಮಿಡಿದರು.

*ಜ. 15ರಂದು ಹರಿಹರದಆರೋಗ್ಯ ಮಾತೆ ಚರ್ಚ್‌ಗೆ ‘ಕಿರು ಬೆಸಿಲಿಕಾ’ (ಮಹಾ ದೇವಾಲಯ) ಎಂದು ಅಧಿಕೃತ ಸ್ಥಾನಮಾನ ನೀಡಿ ಘೋಷಣೆ ಮಾಡಲಾಯಿತು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಗೋವಾ ಹಾಗೂ ದಮನ್‌, ಮಂಗಳೂರು, ಬಳ್ಳಾರಿ, ಕಲಬುರ್ಗಿ, ಬರೇಲಿಯ ಚರ್ಚ್‌ಗಳ ಧರ್ಮಗುರುಗಳು, ಮಠಾಧೀಶರು ಭಾಗವಹಿಸಿದ್ದರು.

ವಾಲ್ಮೀಕಿ ಜಾತ್ರೆ ಸಂಭ್ರಮ

*ಫೆ. 8, 9ರಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಎರಡನೇ ವರ್ಷದ ವಾಲ್ಮೀಕಿ ಜಾತ್ರೆ ಸಡಗರ. ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್‌.ಡಿ. ಕುಮಾರಸ್ವಾಮಿ ಭಾಗಿ. ಜಾತ್ರೆಗೆ ಮೆರುಗು ತಂದ ನಟರಾದ ಸುದೀಪ್‌, ಶಶಿಕುಮಾರ್.

*ಫೆ. 23 ಚನ್ನಗಿರಿಯ ತುಮ್ಕೋಸ್‌ಗೆ ಅಧ್ಯಕ್ಷರಾಗಿ ಆರ್.ಎಂ.ರವಿ ಆಯ್ಕೆ.

*ಫೆ. 26 ಜಗಳೂರು ತಾಲ್ಲೂಕಿನ ಬಿಳಿಜೋಡು ಗ್ರಾಮದ ಭಜನೆ ಕಲಾವಿದ ಟಿ.ಜಿ. ಪರಮೇಶ್ವರಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ.

*ಫೆ. 26ರಂದು ಜಗಳೂರು ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿಯಲ್ಲಿ ಮೂಢನಂಬಿಕೆಯಿಂದ ದೌರ್ಜನ್ಯಕ್ಕೆ ಒಳಗಾದ ಮೂಕ ಮಹಿಳೆ ಹಾಗೂ ಮಗುವಿಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು. ಜಿಲ್ಲಾಧಿಕಾರಿ, ಎಸ್ಪಿ ಗ್ರಾಮಕ್ಕೆ ಭೇಟಿ. ಮಗು, ತಾಯಿಗೆ ಮಹಿಳಾ ನಿಯಲದಲ್ಲಿ ಆಶ್ರಯ.

ದುಗ್ಗಮ್ಮನ ಜಾತ್ರೆ ಸಡಗರ

*ಮೂರು ವರ್ಷಗಳಿಗೊಮ್ಮೆ ನಡೆಯುವ ದುಗ್ಗಮ್ಮನ ಜಾತ್ರೆಗೆ 2020 ವರ್ಷ ಸಾಕ್ಷಿಯಾಯಿತು. ಮಾರ್ಚ್‌ 1ರಿಂದ 19ರ ವರೆಗೆ ನಡೆದ ಜಾತ್ರೋತ್ಸವದಲ್ಲಿ ಅಪಾರ ಭಕ್ತರು ಪಾಲ್ಗೊಂಡರು. ₹ 16.5 ಲಕ್ಷ ವೆಚ್ಚದಲ್ಲಿ ಅರಮನೆಯ ಶೈಲಿಯಲ್ಲಿ ಸ್ವರ್ಣಮಹಾಮಂಟಪ ನಿರ್ಮಿಸಿದ್ದು, ಕಳೆದುಹೋದ ಹೆಣ್ಣುಮಗು ಹೆತ್ತವರ ಮಡಿಲು ಸೇರಿದ್ದು ಜಾತ್ರೆಯಲ್ಲಿ ಸುದ್ದಿಯಾಯಿತು.

*ಮಾ. 5ರಿಂದ 7 ರವರೆಗೆ ಹೊನ್ನಾಳಿಯ ಹಿರೇಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳ ಗಮನ ಸೆಳೆಯಿತು. ಮೇಳವನ್ನು ನಟ ಶಿವರಾಜ್‌ಕುಮಾರ್‌ ಹಾಗೂ ಯೋಗಗುರು ಬಾಬಾ ರಾಮ್‌ದೇವ್‌ ಉದ್ಘಾಟಿಸಿದ್ದು ಮೆರುಗು ಹೆಚ್ಚಿಸಿತ್ತು.

ಬಾಧಿಸಿದ ಹಕ್ಕಿಜ್ವರ

*ಮಾರ್ಚ್‌ 16ರಂದು ಹರಿಹರದ ಬನ್ನೀಕೋಡಿನ ಅಭಿಷೇಕ್‌ ಎಂಬುವವರ ಕೋಳಿಫಾರಂನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು 1,500 ಕೋಳಿಗಳು ಮೃತಪಟ್ಟವು. 6,500 ಕೋಳಿಗಳನ್ನು ಕಲ್ಲಿಂಗ್‌ ಮಾಡಲಾಯಿತು. ಉಚ್ಚಂಗಿದುರ್ಗ, ಅರಸಿಕೆರೆ, ಹೊನ್ನಾಳಿಯಲ್ಲೂ ನೂರಾರು ಕೋಳಿಗಳು ಮೃತಪಟ್ಟವು.

ಜನತಾ ಕರ್ಫ್ಯೂ; ಜನಸ್ಪಂದನ

* ಮಾರ್ಚ್‌ 22 ದೇಶದಲ್ಲಿ ಜನತಾ ಕರ್ಫ್ಯೂ; ಜಿಲ್ಲೆಯಲ್ಲೂ ಭಾರಿ ಸ್ಪಂದನ. ಸಂಜೆ ಜಾಗಟೆ, ಶಂಖ ಬಾರಿಸಿ, ಚಪ್ಪಾಳೆ ತಟ್ಟಿ ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಜನ. ಜಾಗಟೆ ಬಾರಿಸಿ ಗಮನ ಸೆಳೆದ ಜಿಲ್ಲಾಧಿಕಾರಿ.

* ಮಾರ್ಚ್‌ 24 ಜಿಲ್ಲೆಯಾದ್ಯಂತ ಲಾಕ್‌ಡೌನ್‌ ಘೋಷಿಸಿ ಜಿಲ್ಲಾಧಿಕಾರಿ ಆದೇಶ.

ದೀಪ ಬೆಳಗಿ ಪ್ರಾರ್ಥನೆ

ಏ. 5. ಪ್ರಧಾನಿ ಕರೆಗೆ ಓಗೊಟ್ಟ ಜಿಲ್ಲೆಯ ಜನ. ದೀಪ ಬೆಳಗಿ ಪ್ರಾರ್ಥನೆ.

ಏ. 9 ಜಿಲ್ಲಾ ಉಸ್ತುವಾರಿ ಸಚಿವರಾಗಿ ಬೈರತಿ ಬಸವರಾಜ ನೇಮಕ.

ದೈತ್ಯ ಉಡ ಪತ್ತೆ

ಜೂನ್‌. 3 ಜಗಳೂರಿನ ಕೊಂಡುಕುರಿ ವನ್ಯಧಾಮದಲ್ಲಿ ಒಂದೂ ಮುಕ್ಕಾಲು ಮೀಟರ್‌ ಉದ್ದದ ದೈತ್ಯ ಉಡ ಪತ್ತೆಯಾಗಿ ಸುದ್ದಿ ಮಾಡಿತು.

ಜೂನ್‌ 6ರಂದು 28 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆನಗೋಡು ರೈತ ಹುತಾತ್ಮರ ಸ್ಮಾರಕವನ್ನು ಸ್ಥಳಾಂತರ ಮಾಡಲಾಯಿತು. ಇಂದಿರಾ ಪ್ರಿಯದರ್ಶಿನಿ ಪಾರ್ಕ್‌ ಬಳಿ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿತು.

ಜೂನ್‌ 11. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಹೊನ್ನಾಳಿ ಕುಂದೂರು ಕ್ಷೇತ್ರದ ದೀಪಾ ಜಗದೀಶ್‌ ಅವಿರೋಧ ಆಯ್ಕೆ.

ಸುದ್ದಿಯಾದ ವಿದ್ಯಾರ್ಥಿಗಳ ಧರಣಿ

ಜೂನ್‌ 29ರಂದು 16 ತಿಂಗಳ ಬಾಕಿ ಶಿಷ್ಯವೇತನಕ್ಕೆ ಆಗ್ರಹಿಸಿ ದಾವಣಗೆರೆಯ ಜೆಜೆಎಂ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ಆರಂಭಿಸಿದರು. 17 ದಿನಗಳ ಕಾಲ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತು. ವಿದ್ಯಾರ್ಥಿಗಳ ಹೋರಾಟಕ್ಕೆ ನಟ ಚೇತನ್‌ ಬೆಂಬಲ ನೀಡಿದರು.

ರಾಮನ ಸ್ಮರಣೆ

ಆ. 5 ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಶಿಲಾನ್ಯಾಸ. ಜಿಲ್ಲೆಯಲ್ಲೂ ರಾಮನ ಜಪಿಸಿದ ಜನ.

ವರುಣನ ಅಬ್ಬರ: ತುಂಬಿದ ಭದ್ರಾ

ಜಿಲ್ಲೆಯಲ್ಲಿ ಜುಲೈ, ಆಗಸ್ಟ್‌ನಲ್ಲಿ ಉತ್ತಮ ಮಳೆಯಾಯಿತು. ಸತತ ಮೂರು ವರ್ಷವೂ ತುಂಬುವ ಮೂಲಕ ಜಿಲ್ಲೆಯ ಜೀವನಾಡಿ ಭದ್ರಾ ರೈತರಲ್ಲಿ ಹರ್ಷ ಮೂಡಿಸಿತು. ಹರಿಹರ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಸರ್ಕಾರ ಘೋಷಿಸಿತು.

ಹರಿಹರದ ರಾಜನಹಳ್ಳಿ ಬಳಿ ತುಂಗಭದ್ರಾ ನದಿಯಲ್ಲಿ ಸಿಲುಕಿದ್ದ 70 ಮಂಗಗಳನ್ನು ಮೂರು ದಿನಗಳ ಕಾರ್ಯಾಚರಣೆ ಬಳಿಕ ಹಗ್ಗದ ಸೇತುವೆ ಮೂಲಕ ದಡ ಸೇರಿಸಲಾಯಿತು. ಮಳೆಯಿಂದ ಸೂಳೆಕೆರೆ ಭರ್ತಿಗೆ 2 ಅಡಿ ಬಾಕಿ ಇದ್ದುದು ರೈತರಲ್ಲಿ ಸಂತಸ ತಂತು.

ಮಡಗಾಸ್ಕರ್‌ನಲ್ಲಿ ಸಿಲುಕಿದ ವ್ಯಾಪಾರಿಗಳು

ಆ. 13 ಮಡಗಾಸ್ಕರ್‌ನಲ್ಲಿ ಸಿಲುಕಿದ ಚನ್ನಗಿರಿ ಗೋಪನಾಳ್‌ ಗ್ರಾಮದ 17 ಗಿಡಮೂಲಿಕೆ ವ್ಯಾಪಾರಿಗಳು. ಸಂಸದ ಸಿದ್ದೇಶ್ವರ ಪ್ರಯತ್ನದಿಂದ ಆ. 20ರಂದು ಸ್ವದೇಶಕ್ಕೆ ಬಂದರು.

ಆ. 23 ಪಾಕಿಸ್ತಾನ ಪರ ಸಂದೇಶ ಪೋಸ್ಟ್‌ ಮಾಡಿದ ದಾವಣಗೆರೆಯ ಸಶಸ್ತ್ರ ಮೀಸಲು ಪಡೆಯ ಕಾನ್‌ಸ್ಟೆಬಲ್ ಸನಾವುಲ್ಲಾ ಅಮಾನತು.

ದಾವಣಗೆರೆ ನಗರಕ್ಕೆ 8ನೇ ರ‍್ಯಾಂಕ್‌

ಆ. 24 ಸ್ಮಾರ್ಟ್‌ ಸಿಟಿ ಕಾಮಗಾರಿ ಅನುಷ್ಠಾನ. ಕೇಂದ್ರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ದಾವಣಗೆರೆ ನಗರಕ್ಕೆ 8ನೇ ರ‍್ಯಾಂಕ್‌.

ಆ. 30 ನಟ ದರ್ಶನ್‌ ಶಾಸಕ ಶಾಮನೂರು ಶಿವಶಂಕರಪ್ಪ ಮನೆಗೆ ಭೇಟಿ. ಕುದುರೆ, ಹಸು, ಕುರಿಗಳ ಸಾಕಣೆ ಕುರಿತು ಮಾಹಿತಿ ಪಡೆದ ಡಿ ಬಾಸ್.

ಸೆ. 11. ಚನ್ನಗಿರಿ ಹಾಲಸ್ವಾಮಿ ವಿರಕ್ತಮಠಕ್ಕೆ ಚಂದ್ರ ಮೋಹನ ದೇವರು ಪಟ್ಟಾಧಿಕಾರ.

ಸೆ. 15. ರಾಜ್ಯ ಯೋಜನಾ ಮಂಡಳಿ ಸದಸ್ಯರಾಗಿ ಕುಲಪತಿ ಪ್ರೊ. ಶರಣಪ್ಪ ಹಲಸೆ ನೇಮಕ.

ರಾಮಮಂದಿರಕ್ಕೆ ಬೆಳ್ಳಿ ಇಟ್ಟಿಗೆ

ರಾಮಮಂದಿರ ರಥಯಾತ್ರೆಯಲ್ಲಿ ಜಿಲ್ಲೆಯಲ್ಲಿ ಹುತಾತ್ಮರಾದವರ ನೆನಪಿಗೆ ಅ. 6ರಂದು 15 ಕೆ.ಜಿ. ಬೆಳ್ಳಿ ಇಟ್ಟಿಗೆಯ ಮೆರವಣಿಗೆ.

ಕಣ್ಣೀರು ತರಿಸಿದ ಈರುಳ್ಳಿ

ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಬಿದ್ದ ಮಳೆಗೆ ಈರುಳ್ಳಿ ಕೊಳೆತು ಆವಕ ಕಡಿಮೆಯಾಯಿತು. ಅ. 22ರಂದು ಈರುಳ್ಳಿ ದರ ಗಗನಕ್ಕೆ ಏರಿತು. ಒಂದು ಕೆ.ಜಿ. ಈರುಳ್ಳಿ ಬೆಲೆ ₹ 100ರ ಗಡಿ ದಾಟಿ ಗ್ರಾಹಕರಲ್ಲಿ ಕಣ್ಣೀರು ತರಿಸಿತ್ತು. ಕೊಳೆತ ಈರುಳ್ಳಿಗೂ ಬೇಡಿಕೆ ಬಂತು. ರೈತರಿಗೆ ಬೆಲೆ ಏರಿಕೆಯ ಲಾಭ ಸಿಗಲಿಲ್ಲ.

ಅ. 22 ಜಗಳೂರಿನ ಸಿದ್ಧಮ್ಮನಹಳ್ಳಿಯ ಎನ್‌. ರಂಗನಾಥ್‌ ಅವರಿಗೆ ಬಯಲಾಟ ಅಕಾಡೆಮಿ ಪ್ರಶಸ್ತಿ.

ನ. 7 ಜನಪದ ತಜ್ಞ ಎಂ.ಜಿ. ಈಶ್ವರಪ್ಪ ಅವರಿಗೆ ಬೆಂಗಳೂರಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.

ನ. 8 ಮಹಿಳೆಯರ ಬಗ್ಗೆ ಅವಹೇಳನ. ಜಗಳೂರಿನ ಬಿಜೆಪಿ ಒಬಿಸಿ ಮೋರ್ಚಾ ಉಪಾಧ್ಯಕ್ಷ ಅಂಜಿನಪ್ಪ ಬಂಧನ. ಪಕ್ಷದಿಂದ ಉಚ್ಚಾಟನೆ.

ನ. 19 ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ರಾಜ್ಯ ಸರ್ಕಾರದ ‘ಗ್ರಾಮ ಒನ್‌’ ಕೇಂದ್ರ ಉದ್ಘಾಟಿಸಿದ ಸಚಿವ ಎಸ್‌. ಸುರೇಶ್‌ಕುಮಾರ್‌. ಜಿಲ್ಲೆಯ 100 ಗ್ರಾಮಗಳಲ್ಲಿ ಸೇವೆಗೆ ಆನ್‌ಲೈನ್‌ನಲ್ಲಿ ಮುಖ್ಯಮಂತ್ರಿ ಚಾಲನೆ.

ನ.25ರಂದು ಜಿಲ್ಲೆಯ ಮೂರು ಸಂಸ್ಥೆಗಳೂ ಸೇರಿ 34 ಮಂದಿಗೆಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ.

ನ. 27 ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಅಣಬೇರು ಜೀವನಮೂರ್ತಿ ಅಧಿಕಾರ ಸ್ವೀಕಾರ

ನ. 27 ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಹೊನ್ನಾಳಿ ಪಟ್ಟಣ ಪಂಚಾಯಿತಿ.

ಡಿ. 9 ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ದೀಪಾ ಜಗದೀಶ್ ರಾಜೀನಾಮೆ.

ಡಿ. 22 ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ. ದಾವಣಗೆರೆ, ಹೊನ್ನಾಳಿ, ಜಗಳೂರಿನಲ್ಲಿ ಮತದಾನ.

ಡಿ. 23 ಜಿ.ಪಂ. ಅಧ್ಯಕ್ಷರಾಗಿ ಶಾಂತಕುಮಾರಿ ಅವಿರೋಧ ಆಯ್ಕೆ

ಡಿ. 27 ಗ್ರಾಮ ಪಂಚಾಯಿತಿ ಎರಡನೇ ಹಂತದ ಚುನಾವಣೆ. ನ್ಯಾಮತಿ, ಚನ್ನಗಿರಿ, ಹರಿಹರದಲ್ಲಿ ಮತದಾನ.

ಮಾನವ– ಪ್ರಾಣಿ ಸಂಘರ್ಷ

ಜೂನ್‌ 8 ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯಲ್ಲಿ ಕಾಡಾನೆ ನುಗ್ಗಿ ತೋಟಗಳಿಗೆ ಹಾನಿ.

ಜೂನ್‌ 26. ಚನ್ನಗಿರಿಯ ಹೊಸಹಳ್ಳಿ ಗ್ರಾಮದಲ್ಲಿ ಗಂಡು ಚಿರತೆ ಸೆರೆ ಕಾರ್ಯಾಚರಣೆ.

ಜುಲೈ 18 ನ್ಯಾಮತಿ ಕಂಕನಹಳ್ಳಿ ಗ್ರಾಮದಲ್ಲಿ ತುಂಗಾ ಕಾಲುವೆ ಮೂಲಕ ಬಂದ ಕಾಡುಕೋಣ. ಸೆಪ್ಟೆಂಬರ್‌ನಲ್ಲಿ ಮತ್ತೆ‌ ಚನ್ನಗಿರಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕಾಡಾನೆಗಳು ನುಗ್ಗಿ ಬೆಳೆ ನಾಶ.

ನ. 15ರಂದು ಹೊನ್ನಾಳಿಯಲ್ಲಿ 20ಕ್ಕೂ ಹೆಚ್ಚು ಜನರನ್ನು ಕಚ್ಚಿ ಆತಂಕ ಮೂಡಿಸಿದ್ದ ಮುಸಿಯಾ. 5 ದಿನಗಳ ಕಾರ್ಯಾಚರಣೆ ಬಳಿಕ ಸೆರೆ.

ಅಭಿವೃದ್ಧಿ ಕಾಮಗಾರಿಗಳು

*ಫೆ. 21ರಂದು ದಾವಣಗೆರೆ ರೈಲು ನಿಲ್ದಾಣದ ಎರಡನೇ ಪ್ರವೇಶದ್ವಾರವನ್ನು ಸಂಸದ ಜಿ.ಎಂ. ಸಿದ್ದೇಶ್ವರ ಉದ್ಘಾಟಿಸಿದರು.

ಜುಲೈ 4. ಜಿಲ್ಲಾ ಆಸ್ಪತ್ರೆಯಲ್ಲಿ ₹ 20. 9 ಕೋಟಿ ವೆಚ್ಚದ ತಾಯಿ–ಮಕ್ಕಳ ಆಸ್ಪತ್ರೆಗೆ ಆರೋಗ್ಯ ಸಚಿವ ಶ್ರೀರಾಮುಲು ಶಂಕುಸ್ಥಾಪನೆ.

ಆ. 18 ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ಘಟಕಕ್ಕೆ ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಆನ್‌ಲೈನ್‌ನಲ್ಲಿ ಚಾಲನೆ.

ಡಿ. 4. ದಾವಣಗೆರೆಯಲ್ಲಿ ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ಇಲಾಖೆ ಕಟ್ಟಡಕ್ಕೆ ಸಚಿವ ಈಶ್ವರಪ್ಪ ಶಂಕುಸ್ಥಾಪನೆ. ಸ್ಮಾರ್ಟ್‌ ಸಿಟಿ ಅಡಿ ಅಗ್ನಿಶಾಮಕ ಇಲಾಖೆಗೆ ಆಧುನಿಕ ಉಪಕರಣಗಳ ಹಸ್ತಾಂತರ.

ಶೈಕ್ಷಣಿಕ ವಲಯದಲ್ಲಿ ಏರಿಳಿತ

ಜ. 21 ರೊಬೊಟಿಕ್‌ ವಿಶೇಷ ಅಧ್ಯಯನ ಮತ್ತು ತಾಂತ್ರಿಕ ಒಡಂಬಡಿಕೆಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ಗೆ ಪ್ರಯಾಣ.

ಮಾ. 6. ದುಬೈನಲ್ಲಿ ನಡೆದ ಜಾಗತಿಕ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡ ಕುಲಪತಿ ಹಲಸೆ.

ಜುಲೈ 14. ಪಿಯು ಪರೀಕ್ಷೆ; ಜಿಲ್ಲೆಗೆ ಶೇ 64.09 ಫಲಿತಾಂಶ.

ಆ. 10.ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕುಸಿತ ಕಂಡ ಜಿಲ್ಲೆ. 17 ಸ್ಥಾನಕ್ಕೆ ಇಳಿಕೆ.

ಕಾಡಿದ ಅಪರಾಧ ಜಗತ್ತು

ಜೂನ್‌ 9. ದಾವಣಗೆರೆಯ ಗ್ರಾಮಾಂತರ ಪೊಲೀಸ್ ಠಾಣೆ ಹಿಂಭಾಗದಲ್ಲಿ ಪೊಲೀಸರು, ಸರ್ಕಾರಿ ಅಧಿಕಾರಿಗಳೇ ಇಸ್ಪೀಟು ಆಡಿದ್ದು ದೊಡ್ಡ ಸುದ್ದಿಯಾಯಿತು. ಪ್ರಕರಣದಲ್ಲಿ ಭಾಗಿಯಾದ ಮೂವರು ಕಾನ್‌ಸ್ಟೆಬಲ್‌, ಬಿಇಒ ಉತ್ತರ ವಲಯ ಕಚೇರಿಯ ಚಾಲಕ ಸೇರಿ 6 ಜನ ಸಿಬ್ಬಂದಿಯನ್ನು ಅಮಾನತು ಮಾಡಲಾಯಿತು.

ಜೂನ್‌ 15. ಲಿಂಗತ್ವ ಅಲ್ಪಸಂಖ್ಯಾತರ ಎರಡು ಗುಂಪುಗಳ ನಡುವೆ ಘರ್ಷಣೆ. ರಾಡು, ಕಲ್ಲು, ದೊಣ್ಣೆಗಳಿಂದ ಹಲ್ಲೆ.

ಅ. 6 ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ವಿಠಲಾಪುರ ಗ್ರಾಮದ ಮರುಳಸಿದ್ಧಪ್ಪ ಕಸ್ಟೋಡಿಯಲ್‌ ಡೆತ್‌. ಪಿಎಸ್‌ಐ ಸೇರಿ ಮೂವರು ಪೊಲೀಸ್ ಸಿಬ್ಬಂದಿ ಅಮಾನತು. ಸಿಐಡಿಗೆ ಪ್ರಕರಣ ತನಿಖೆ ಹಸ್ತಾಂತರ.

ಅಗ್ನಿ ಅವಘಡ

* ಜ.5ರಂದು ಎವಿಕೆ ಕಾಲೇಜು ರಸ್ತೆಯ ಆಹಾರ್‌ ಕೇಕ್‌ ಆಫ್‌ ಡೇನಲ್ಲಿ ಬೆಂಕಿ ಅವಘಡ; 7 ಮಂದಿಗೆ ಗಂಭೀರ ಗಾಯ.

ಮಾ. 21 ಲಾಯರ್ ರಸ್ತೆಯ ಎಲೆಕ್ಟ್ರಾನಿಕ್‌ ಬೈಕ್‌ ಶೋರೂಂಗೆ ಬೆಂಕಿ. 9 ಬೈಕ್‌ಗಳಿಗೆ ಹಾನಿ

ಅಗಲಿದ ಗಣ್ಯರು

ಮಾ.3 ರಂದು ಹಿರಿಯ ಕಾರ್ಮಿಕ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಕೆ. ತಿಪ್ಪೇಸ್ವಾಮಿ ನಿಧನ.

ಏ. 18ರಂದು ಸಿದ್ಧಗಂಗಾ ಶಾಲೆ ಸಂಸ್ಥಾಪಕ ಅಧ್ಯಕ್ಷ ಎಂ. ಎಸ್‌. ಶಿವಣ್ಣ ಹಾಗೂ ಸೆ. 9ರಂದು ಸ್ವಾತಂತ್ರ್ಯ ಹೋರಾಟಗಾರ ಮರುಳಸಿದ್ದಪ್ಪ ನಿಧನ.

ಆ. 19. ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಜಯದೇವ ಸ್ವಾಮೀಜಿ ಅನಾರೋಗ್ಯದಿಂದ ನಿಧನ. ಭಕ್ತರ ಅಶ್ರುತರ್ಪಣ.

ಅ. 27ರಂದು ಹರಿಹರದ ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನರಾದರು.

ಬಸ್‌ ಓಡಿಸಿ ಸುದ್ದಿಯಾದ ರೇಣುಕಾಚಾರ್ಯ

ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಿದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯಕೆಎಸ್ಆರ್‌ಟಿಸಿ ಬಸ್‌ ಚಲಾಯಿಸಿ ಮತ್ತೆ ಸುದ್ದಿಯಾದರು. ಗ್ರಾಮೀಣ ಪ್ರದೇಶಗಳಿಗೆ ಬಸ್‌ ಸೇವೆಗೆ ಚಾಲನೆ ನೀಡಿದ ಬಳಿಕ ಚಾಲಕನ ಸಮವಸ್ತ್ರ ಹಾಕಿಕೊಂಡು, ಹೊನ್ನಾಳಿ ಬಸ್‍ನಿಲ್ದಾಣದಿಂದ 60 ಕಿ.ಮೀ ಬಸ್‌ ಚಲಾಯಿಸಿಕೊಂಡು ಹೋಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಟಿ.ಆರ್‌. ನವೀನ್‌ಕುಮಾರ್‌ ಹೊನ್ನಾಳಿ ಡಿಪೊ ವ್ಯವಸ್ಥಾಪಕ ಮಹೇಶಪ್ಪ ಅವರಿಗೆ ನೋಟಿಸ್‌ ನೀಡಿದ್ದರು.

ಹೈಕೋರ್ಟ್‌ ಮೆಟ್ಟಿಲೇರಿದ ಮೇಯರ್‌ ಚುನಾವಣೆ

ಫೆ. 19ರಂದು ನಡೆದ ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು.ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೂವರು ಸದಸ್ಯರು ಗೈರಾಗಿ ಬಿಜೆಪಿ ಗದ್ದುಗೆ ಏರಲು ಕಾರಣರಾದರು. ಮೇಯರ್‌ ಆಗಿ ಬಿ.ಜಿ. ಅಜಯಕುಮಾರ್,ಉಪಮೇಯರ್‌ ಆಗಿ ಸೌಮ್ಯಾ ಎಸ್‌. ನರೇಂದ್ರಕುಮಾರ್‌ ಆಯ್ಕೆಯಾದರು.

ಚುನಾವಣೆ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ ಸುದ್ದಿ ಮಾಡಿತು.ಚುನಾವಣೆಗಾಗಿ ಬಿಜೆಪಿಯ12 ಮಂದಿ ವಿಧಾನಪರಿಷತ್ ಸದಸ್ಯರು ದಾವಣಗೆರೆಯಲ್ಲಿ ವಾಸವಿರುವ ಬಗ್ಗೆ ದಾಖಲೆ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿಎಂ.ಸುಧಾ ಹಾಗೂ ಇತರರು ತಕರಾರು ಅರ್ಜಿ ಸಲ್ಲಿಸಿದ್ದರು.

ಚುನಾವಣೆಗಾಗಿ ಬಿಜೆಪಿ ಎಂಎಲ್‌ಸಿಗಳು ವಿಳಾಸ ಬದಲಿಸಿದ್ದು, ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಸ್ಥಳಕ್ಕೆ ಭೇಟಿ ನೀಡಿದ್ದು, ವಿಳಾಸದಲ್ಲಿ ಯಾರೂ ಪತ್ತೆಯಾಗದಿದ್ದುದು ಸುದ್ದಿ ಮಾಡಿತು.

ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ

ಮಾ. 27 ಜಿಲ್ಲೆಯಲ್ಲಿ ಮೊದಲ ಕೊರೊನಾ ಪ್ರಕರಣ. ಫ್ರಾನ್ಸ್‌ನಿಂದ ಬಂದಿದ್ದ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯ 24 ವರ್ಷದ ವೈದ್ಯರೊಬ್ಬರಿಗೆ ಸೋಂಕು ದೃಢ.

ಏ.27 ಹಸಿರು ವಲಯವಾಗಿ ದಾವಣಗೆರೆ ಘೋಷಣೆ. ಲಾಕ್‌ಡೌನ್‌ ಮುಂದುವರಿಕೆ.

ಏ.29ರಂದು 4ನೇ ಕೊರೊನಾ ಪ್ರಕರಣ. ಒಂದೇ ದಿನದಲ್ಲಿ ‌ಹಸಿರು ವಲಯದಿಂದ ಕಿತ್ತಳೆ ವಲಯಕ್ಕೆ ಹೋದ ಜಿಲ್ಲೆ. ಬಾಷಾನಗರದ ಸ್ಟಾಫ್‌ ನರ್ಸ್‌ಗೆ ಕೋವಿಡ್. ಜನರಲ್ಲಿ ಆತಂಕ ಮೂಡಿಸಿದ ಪ್ರಕರಣ.

ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲ ಬಲಿ

ಮೇ 1ರಂದು ಜಿಲ್ಲೆಯಲ್ಲಿ ಕೋವಿಡ್‌ಗೆ ಮೊದಲ ಬಲಿ.ಏ. 30ರಂದು ಸೋಂಕು ಧೃಢಪಟ್ಟಿದ್ದ ಜಾಲಿನಗರದ ವೃದ್ಧ ಸಾವು.

ಮೇ.19 ಒಂದೇ ದಿನ 22 ಕೊರೊನಾ ಪ್ರಕರಣಗಳು ಪತ್ತೆ. ಶತಕ ದಾಟಿದ ಕೋವಿಡ್‌ ಪ್ರಕರಣಗಳು.

ಜುಲೈ 23 ಒಂದೇ ದಿನ 107 ಪ್ರಕರಣ. ಸಾವಿರಕ್ಕೆ ಏರಿದ ಕೋವಿಡ್‌ ಪ್ರಕರಣಗಳು.

ಆ. 10ರಂದು ಕೊರೊನಾ ಸಾವಿನ ಪ್ರಕರಣ ಶತಕ ಮುಟ್ಟಿತು. ಜಿಲ್ಲೆಯಲ್ಲಿ ಡಿಸೆಂಬರ್‌ ಕೊನೆಯ ಹೊತ್ತಿಗೆ ಸೋಂಕಿತರ ಸಂಖ್ಯೆ 21, 958ಕ್ಕೆ ಮುಟ್ಟಿದ್ದು, 264 ಮಂದಿ ಮೃತಪಟ್ಟಿದ್ದರು. 115 ಸಕ್ರಿಯ ಪ್ರಕರಣಗಳು ಇದ್ದವು.

ಕೋವಿಡ್‌ನಿಂದ ಸ್ವಾಮೀಜಿ ಸಾವು

ಜುಲೈ 15. ಸಾಸ್ವೆಹಳ್ಳಿ ರಾಂಪುರ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿ ಕೋವಿಡ್‌ನಿಂದ ಮೃತಪಟ್ಟರು. ಸಾವಿರಾರು ಭಕ್ತರು ಕಂಬನಿ ಮಿಡಿದರು.

ಗಣ್ಯರಿಗೂ ಕೋವಿಡ್‌

ಜಿಲ್ಲೆಯ ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಂ.ಪಿ. ರೇಣುಕಾಚಾರ್ಯ, ಉಸ್ತುವಾರಿ ಸಚಿವ ಬೈರತಿ ಬಸವರಾಜ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಮೇಯರ್‌ ಅಜಯಕುಮಾರ್ ಸೇರಿ ಪಾಲಿಕೆ ಸದಸ್ಯರಿಗೂ ಕೋವಿಡ್‌ ದೃಢಪಟ್ಟಿತ್ತು. ಎಲ್ಲರೂ ಗುಣಮುಖರಾದರು.

ಕೊರೊನಾದಿಂದ ಮೃತಪಟ್ಟ ಚನ್ನಗಿರಿಯ ಕುಂಬಾರಬೀದಿಯ ಮಹಿಳೆಯೊಬ್ಬರ ಶವಸಂಸ್ಕಾರವನ್ನು ಜುಲೈ 1ರಂದು ಜೆಸಿಬಿ ಬಳಸಿ ಮಾಡಿದ್ದು ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿತು.

ಮುಖ್ಯಮಂತ್ರಿಗೆ ಮುಜುಗರ ತಂದ ಸ್ವಾಮೀಜಿ

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಜನವರಿ 14, 15ರಂದು ನಡೆದ ‘ಹರ ಜಾತ್ರೆ’ ಹಾಗೂ ‘ಬೆಳ್ಳಿ ಬೆಡಗು’ ಸಮಾರಂಭದವೇದಿಕೆಯಲ್ಲಿ ಸಮುದಾಯದ ಮೂವರು ಶಾಸಕರಿಗೆ ಮಂತ್ರಿಗಿರಿ ನೀಡಲೇಬೇಕು ಎಂದು ಒತ್ತಡ ಹಾಕಿದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ನಡೆಯಿಂದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಸಿಡಿಮಿಡಿಗೊಂಡರು. ‘ನಾಳೆಯೇ ರಾಜೀನಾಮೆ ಕೊಟ್ಟು ಹೋಗಲು ಸಿದ್ಧ’ ಎಂದು ಗುಡುಗಿದರು.

ಸ್ವಾಮೀಜಿ ಮಾತಿನಿಂದ ತಾಳ್ಮೆ ಕಳೆದುಕೊಂಡ ಯಡಿಯೂರಪ್ಪ, ‘ಬುದ್ಧಿ, ನಿಮ್ಮ ಬಾಯಲ್ಲಿ ಇಂಥ ಮಾತು ಬರಬಾರದು. ನೀವು ಸಲಹೆ ಕೊಡಬೇಕು, ಅದನ್ನು ಬಿಟ್ಟು ಬೆದರಿಕೆ ಹಾಕಬಾರದು’ ಎಂದು ಎದ್ದುನಿಂತರು.

ಹರ ಜಾತ್ರೆಯಲ್ಲಿ ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್‌ ಗುರೂಜಿ, ನಟರಾದ ರಮೇಶ್‌ ಅರವಿಂದ್, ನಟಿ ರಾಗಿಣಿ ದ್ವಿವೇದಿ ಸೇರಿ ಗಣ್ಯರು, ವಿವಿಧ ಮಠಾಧೀಶರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT