ಶನಿವಾರ, ಜನವರಿ 28, 2023
24 °C

ದಾವಣಗೆರೆಯಲ್ಲಿ ಫೆಬ್ರುವರಿ ತಿಂಗಳಲ್ಲಿ ಸಿರಿಧಾನ್ಯ ಮೇಳ ಆಯೋಜಿಸಲು ಚಿಂತನೆ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 2023ರ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಗಿದ್ದು, ಇದರ ಅಂಗವಾಗಿ ಜಿಲ್ಲೆಯಲ್ಲಿ ‘ಸಿರಿಧಾನ್ಯ ಕೇಂದ್ರಿತ’ ಚಟುವಟಿಕೆಯನ್ನು ಕೃಷಿ ಇಲಾಖೆ ಆರಂಭಿಸಿದೆ. ಈ ವರ್ಷ ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆಯ ವಿಸ್ತೀರ್ಣವನ್ನು ಶೇ 50ರಷ್ಟು ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದೆ.

ಕಳೆದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ 7,295 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 7,220 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿತ್ತು. ಶೇ 98.97ರಷ್ಟು ಸಾಧನೆಯಾಗಿದೆ. ಹಿಂಗಾರು ಅವಧಿಯಲ್ಲಿ 1,750 ಹೆಕ್ಟೇರ್ ಗುರಿ ಇಟ್ಟುಕೊಂಡಿದ್ದು, 1,474 ಹೆಕ್ಟೇರ್ ಪ್ರದೇಶದಲ್ಲಿ ಶೇ 84ರಷ್ಟು ಸಾಧನೆ ಮಾಡಲಾಗಿತ್ತು.

ಮುಂಗಾರು ಹಂಗಾಮಿನಲ್ಲಿ 2,400 ಹೆಕ್ಟೇರ್‌ನಲ್ಲಿ ಜೋಳ ಬೆಳೆಯುವ ಗುರಿ ಇತ್ತು. ಅದರಲ್ಲಿ 710 ಹೆಕ್ಟೇರ್‌ ಬಿತ್ತನೆಯಾಗಿತ್ತು.  ಹಿಂಗಾರು ಅವಧಿಯಲ್ಲಿ 6,123 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿತ್ತು. 3,457 ಹೆಕ್ಟೇರ್‌ನಷ್ಟು ಜೋಳ ಬಿತ್ತನೆಯಾಗಿತ್ತು. ಅಲ್ಲದೇ 38 ಹೆಕ್ಟೇರ್ ಪ್ರದೇಶದಲ್ಲಿ ನವಣೆ ಬಿತ್ತನೆಯಾಗಿತ್ತು.

ಸಿರಿಧಾನ್ಯಗಳಲ್ಲಿ ಜಿಲ್ಲೆಯಲ್ಲಿ ರಾಗಿ ಮುಖ್ಯವಾಗಿ ಬೆಳೆಯುತ್ತಿದ್ದು, ಜೋಳ, ಕೊರಲೆ, ಬರಗು, ಹಾರಕ, ಸಾವೆ, ಊದಲು ಬೆಳೆಗಳು ಸೇರಿ ಕಳೆದ ವರ್ಷ ಜಿಲ್ಲೆಯಲ್ಲಿ 18 ಸಾವಿರ ಟನ್ ಸಿರಿಧಾನ್ಯ ಉತ್ಪಾದನೆಯಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಪ್ರಜಾವಾಣಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಜಾಥಾ, ಶಾಲಾ ಮಕ್ಕಳಿಗೆ ಸಿರಿಧಾನ್ಯ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಕಿಸಾನ್‍ಗೋಷ್ಠಿ, ಕ್ಷೇತ್ರೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ರೈತರಿಗೆ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆಯುವ ಬಗ್ಗೆ ಮುಖ್ಯವಾಗಿ ತರಬೇತಿ ನೀಡಲಾಗುತ್ತಿದೆ. ರೈತರು ಮಣ್ಣೇ ಎಲ್ಲಾ ಎಂದು ತಿಳಿದುಕೊಂಡಿದ್ದಾರೆ. ಅದನ್ನು ತೊಲಗಿಸುವುದರ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸಲಾಗುತ್ತದೆ’ ಎಂದು ಹೇಳಿದರು.

‘ಸಿರಿಧಾನ್ಯಗಳನ್ನು ಜನರು ತಿರಸ್ಕರಿಸುತ್ತಿದ್ದಾರೆ. ಸಿರಿ ಎಂದರೆ ಸಿರಿವಂತಿಕೆ, ಸಿರಿಧಾನ್ಯಗಳನ್ನು ತಿನ್ನುವುದರಿಂದ ಆರೋಗ್ಯ ಸುಧಾರಿಸುತ್ತದೆ. ಇದನ್ನು ಮುಖ್ಯವಾಹಿನಿಗೆ ತರಲು ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಲಾಗುವುದು’ ಎಂದು ಹೇಳಿದರು. 

‘ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಸಿರಿಧಾನ್ಯಗಳ ಮಾರುಕಟ್ಟೆ ಹಾಗೂ ಮೌಲ್ಯವರ್ಧನೆಯನ್ನು ಕೇಂದ್ರೀಕರಿಸಿ ಕೃಷಿ ಇಲಾಖೆಯ ಸಹಯೋಗದೊಂದಿಗೆ ರೈತರಿಗೆ ತರಬೇತಿ ನೀಡುತ್ತಿದೆ. ಫೆಬ್ರುವರಿ 20ರಂದು ಬೆಂಗಳೂರಿನಲ್ಲಿ ನಡೆಯುವ ಸಿರಿಧಾನ್ಯಗಳ ಮೇಳದಲ್ಲಿ ಸಿರಿಧಾನ್ಯದಿಂದ ತಯಾರಿಸಿದ ಕುಕ್ಕೀಸ್ ಅನ್ನು ಪ್ರದರ್ಶಿಸಲಾಗುವುದು’ ಎಂದು ಕೇಂದ್ರದ  ಮುಖ್ಯಸ್ಥ ಡಾ.ಟಿ.ಎನ್. ದೇವರಾಜ ತಿಳಿಸಿದರು.

ಸಿರಿಧಾನ್ಯಗಳ ಬಗ್ಗೆ ಒಲವು ಮೂಡಿಸಲು ಫೆಬ್ರುವರಿಯಲ್ಲಿ ‘ಸಾವಯವ ಮೇಳ’ ನಡೆಸಲು ನಿರ್ಧರಿಸಿದ್ದು, ರೈತರು ಹಾಗೂ ಮಾರುಕಟ್ಟೆದಾರರ ನಡುವೆ ಸಂವಾದ, ಉಪನ್ಯಾಸ ಆಯೋಜಿಸಲಾಗುವುದು.

ಶ್ರೀನಿವಾಸ್ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು